ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ: ಸಚಿವ ಜೆಸಿ ಮಾಧುಸ್ವಾಮಿ
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ, ಜೆಡಿ(ಎಸ್) ಶಾಸಕ ಡಾ. ಕೆ ಅನ್ನದಾನಿ ಅವರು ಡಾ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕಿರು ನಾಟಕದ ಬಗ್ಗೆ ಪ್ರಸ್ತಾಪಿಸಿದ್ದರು.
ಬೆಂಗಳೂರು, ಫೆ 15: ಭಾರತೀಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಯಾವುದೇ ಅವಮಾನ ಮಾಡಿದರೆ ಸಹಿಸುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.
ಇತ್ತೀಚೆಗೆ ಸಿಲಿಕಾನ್ ಸಿಟಿಯ ಖಾಸಗಿ ಜೈನ್ ವಿಶ್ವವಿದ್ಯಾನಿಲಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್, ದಲಿತರು ಮತ್ತು ಮೀಸಲಾತಿ ಕುರಿತ ಆಕ್ಷೇಪಾರ್ಹ ನಾಟಕ ಪ್ರದರ್ಶನ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶ ವ್ಯಕ್ತವಾದ ನಂತರ ಪೊಲೀಸರು ದೂರು ದಾಖಲಿಸಿದ್ದರು.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ, ಜೆಡಿಎಸ್ ಶಾಸಕ ಡಾ. ಕೆ. ಅನ್ನದಾನಿ ಅವರು ಡಾ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕಿರು ನಾಟಕದ ಬಗ್ಗೆ ಪ್ರಸ್ತಾಪಿಸಿದ್ದರು.

ಪ್ರಕರಣದಲ್ಲಿ ಕೆಲವರನ್ನು ಬಂಧಿಸುವ ಮೂಲಕ ಸರ್ಕಾರ ಕ್ರಮ ಕೈಗೊಂಡಿದೆ. ಅಂಬೇಡ್ಕರ್‌ಗೆ ಈ ರೀತಿಯ ಅವಮಾನ ಮಾಡುವುದನ್ನು ಒಪ್ಪಲಾಗದು, ವಿಶ್ವವಿದ್ಯಾಲಯದ ಸ್ಥಾನಮಾನ ತೆಗೆದು ಹಾಕಿ ಶಿಕ್ಷಣ ಸಂಸ್ಥೆಗೆ ನೀಡಿರುವ ಎಲ್ಲ ಸೌಲಭ್ಯಗಳನ್ನು ಹಿಂಪಡೆಯಲಿ ಎಂದು ಅನ್ನದಾನಿ ಸದನದ ಬಾವಿಗಿಳಿದು ಪ್ರತಿಭಟಿಸಿದ್ದಾರೆ.
ಇದಕ್ಕೆ ಉತ್ತರಿಸಿದ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, "ಸರ್ಕಾರ ಸಹಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ, ಆಡಳಿತ ಮಂಡಳಿಯ ಪಾತ್ರ ಕಂಡುಬಂದರೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಮಾಧುಸ್ವಾಮಿ ಹೇಳಿದರು.
ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ತೆಗೆದುಹಾಕಲು ಪದೇ ಪದೇ ಒತ್ತಾಯಿಸಿದ ಬಳಿಕ ಮಾತನಾಡಿದ ಮಾಧುಸ್ವಾಮಿ, ಸದನದಲ್ಲಿ ಕೇಳಿದಕ್ಕೆಲ್ಲಾ ಸರ್ಕಾರ ಮಣಿಯುವುದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಕಿರುನಾಟಕದ ರಿಹರ್ಸಲ್ ನಡೆಯುವಾಗಲೇ ನಾಟಕದ ಬಗ್ಗೆ ತಿಳಿದಿದ್ದರಿಂದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಡೀನ್ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಜೆಡಿಎಸ್ ಶಾಸಕ ಡಾ. ಕೆ. ಅನ್ನದಾನಿ ಆರೋಪಿಸಿದ್ದಾರೆ.
ಇತ್ತೀಚೆಗೆ ಕಾಲೇಜು ಉತ್ಸವದಲ್ಲಿ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ಕಿಟ್‌ನಲ್ಲಿ ಡಾ. ಅಂಬೇಡ್ಕರ್ ಮತ್ತು ದಲಿತರನ್ನು ಅಪಹಾಸ್ಯ ಮಾಡುವ ಆಕ್ಷೇಪಾರ್ಹ ಮಾತುಗಳಿವೆ ಎಂದು ಆರೋಪಿಸಲಾಗಿದೆ. ಇದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಜೈನ್ ವಿವಿಯ ಐದನೇ ಸೆಮಿಸ್ಟರ್ ಬಿಬಿಎಯ ಏಳು ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿವಿಯ ಡೀನ್ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದರ ಜೊತೆಗೆ ಕಾಲೇಜು ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳು ದಾಖಲಾಗಿವೆ.












Click it and Unblock the Notifications