ಪರಪುರುಷನೊಂದಿಗೆ ಮಾತನಾಡಿದ್ದಕ್ಕೆ ಕಣ್ಣು ಕಳೆದುಕೊಂಡಿದ್ದ ಮಹಿಳೆ ಸಾವು
ಪರಪುರುಷನೊಂದಿಗೆ ಮಾತನಾಡಿದ್ದಕ್ಕಾಗಿ ಪತಿಯಿಂದ ತನ್ನ ಕಣ್ಣನ್ನೇ ಕಳೆದುಕೊಂಡ ತಿಕಿನಾ ಓಜಾ ಎಂಬ ಮಹಿಳೆಯೊಬ್ಬರು ನಿನ್ನೆ(ಏಪ್ರಿಲ್ 27) ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಬೆಂಗಳೂರು, ಏಪ್ರಿಲ್ 28: ಪರಪುರುಷನೊಂದಿಗೆ ಮಾತನಾಡಿದ್ದಕ್ಕಾಗಿ ಪತಿಯಿಂದ ತನ್ನ ಕಣ್ಣನ್ನೇ ಕಳೆದುಕೊಂಡ ತಿಕಿನಾ ಓಜಾ ಎಂಬ ಮಹಿಳೆಯೊಬ್ಬರು ನಿನ್ನೆ(ಏಪ್ರಿಲ್ 27) ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಹತ್ಯೆಗೆ ಕಾರಣನಾದ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಒಡಿಶಾದವರಾಗಿದ್ದ ತಿಕಿನಾ ಓಜಾ ಮತ್ತು ಪ್ರಹ್ಲಾದ್ ಓಜಾ ದಂಪತಿಗಳು 15 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಆಗಮಿಸಿದ್ದರು. ಏಪ್ರಿಲ್ 26, ಬುಧವಾರದಂದು ಪತ್ನಿ ಪರಪುರುಷನೊಂದಿಗೆ ಮಾತನಾಡುತ್ತಿದ್ದುದನ್ನು ಕಂಡ ಪತಿ ಆಕೆಯ ಕಣ್ಣನ್ನು ಕಿತ್ತು, ಆಕೆಯ ತಲೆಗೆ ಬಲವಾದ ಏಟು ಕೊಟ್ಟು ಪರಾರಿಯಾಗಿದ್ದ.[ಪರಪುರುಷನನ್ನು ನೋಡಬಾರದೆಂದು ಪತ್ನಿಯ ಕಣ್ಣನ್ನೇ ಕಿತ್ತ ಪತಿ!]

ತೀವ್ರ ಗಾಯಗೊಂಡಿದ್ದ ತಿಕಿನಾ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಗುರುವಾರ ಅವರು ಅಸುನೀಗಿದ್ದರು. ದಂಪತಿಗಳು ಬೆಂಗಳೂರಿನ ನಾಗೇನಹಳ್ಳಿಯ ಕೊತನೂರಿನಲ್ಲಿ ವಾಸವಾಗಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕೊತನೂರು ಠಾಣೆಯ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದರು. ನಾಗೇನಹಳ್ಳಿಯ ಸ್ಮಶಾನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ವಿಚಾರಿಸಿದಾಗ ಅವನೇ ಪ್ರಹ್ಲಾದ್ ಓಜಾ ಎಂಬುದು ತಿಳಿದುಬಂದಿದೆ. ಪತ್ನಿಯನ್ನು ಕೊಲೆ ಮಾಡಿದ ನಂತರ, ಓಡಿಶಾಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಪ್ರಹ್ಲಾದ್, ಹಣವಿಲ್ಲದೆ ಸ್ಮಶಾನದ ಬಳಿ ಓಡಾಡುತ್ತಿದ್ದ.












Click it and Unblock the Notifications