2015ರ ಸಂಕಟಗಳನ್ನೆಲ್ಲಾ ನಿವಾರಣೆ ಮಾಡಪ್ಪ ವೆಂಕಟರಮಣ
ಬೆಂಗಳೂರು, ಡಿ, 31 : 'ಸಂಕಟ ಬಂದಾಗ ವೆಂಕಟರಮಣ' ಎನ್ನುವ ಗಾದೆ ಕನ್ನಡಬಲ್ಲವರಿಗೆ ಚಿರಪರಿಚಿತವಾಗಿಯೇ ಇದೆ. ಈ ಬಾರಿ ವೈಕುಂಠ ಏಕಾದಶಿ ಹೊಸ ವರ್ಷದ ಆರಂಭವೇ ಬಂದಿದೆ. ವರ್ಷವಿಡೀ ಸುಭೀಕ್ಷವಾಗಿರಲಿ, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ಕೊಟ್ಟು ಕರುಣಿಸು ದೇವಾ ಎಂದು ಜನ ಬೇಡಿಕೊಳ್ಳುವುದು ವೈಕುಂಠ ಏಕಾದಶಿ ವಿಶೇಷ.
ತಿರುಪತಿಯ ವೆಂಕಟರಮಣನಿಗೆ ಲಕ್ಷಾಂತರ ಜನ ಅಡ್ಡ ಬಿದ್ದರೆ, ಬೆಂಗಳೂರಿನ ವೆಂಕಟರಮಣ ದೇವಾಲಯಗಳಿಗೂ ಭಕ್ತರ ಕೊರತೆಯಾಗಲ್ಲ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸಮೀಪದ ದೇವಗಿರಿ ದೇವಾಲಯದಲ್ಲೂ ಬೆಳಗಿನಿಂದಲೇ ಭಕ್ತರ ದಂಡು ನೆರೆದಿರುತ್ತದೆ. ಇಸ್ಕಾನ್ ಶ್ರೀ ಕೃಷ್ಣನ ದರ್ಶನ ಪಡೆಯಲು ಭಕ್ತರು ಮುಗಿಬೀಳುತ್ತಾರೆ.[ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ]

ವೈಕುಂಠ ಏಕಾದಶಿ ಮಹತ್ವವೇನು?
ಹಿಂದು ಸಂಪ್ರದಾಯದ ಪ್ರಕಾರ ಪ್ರತಿ ಏಕಾದಶಿಯಂದು ಉಪವಾಸ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಅದರಂತೆ ವೈಕುಂಠ ಏಕಾದಶಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಅಂದು ವೆಂಕಟೇಶ್ವರ, ಶ್ರೀನಿವಾಸ ಹಾಗೂ ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಡೆದುಕೊಂಡು ಬಂದಿದೆ.
ವೈಕುಂಠ ಏಕಾದಶಿಯಂದು ಉಪವಾಸವಿದ್ದು, ವಿಷ್ಣು, ಶ್ರೀನಿವಾಸ ಅಥವಾ ವೆಂಕಟರಮಣ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರೆ ಹಿಂದಿನ ಘೋರ ಪಾಪಗಳು ನೀಗಿ ಮುಕ್ತಿ ದೊರೆಯುತ್ತದೆ ಎಂಬ ಪ್ರತೀತಿ ಹಿಂದುಗಳಲ್ಲಿದೆ. ಇನ್ನೊಂದು ಬಗೆಯಲ್ಲಿಯೂ ಈ ದಿನದ ವಿಶೇಷವನ್ನು ಹೇಳಲಾಗುತ್ತದೆ. ಅರ್ಜುನನಿಗೆ ಶ್ರೀ ಕೃಷ್ಣನು ಭಗವದ್ಗೀತೆ ಬೋಧಿಸಿದ್ದು ಇದೇ ದಿನ ಎಂಬ ನಂಬಿಕೆಯೂ ಬೇರೂರಿದೆ.[ವೈಕುಂಠ ಏಕಾದಶಿಯಂದು ಪಠಿಸಿ ಶ್ರೀ ವೆಂಕಟೇಶ ಸ್ತೋತ್ರ]

ಚನ್ನಪಟ್ಟಣ ತಾಲೂಕಿನ ಕರಿಯಪ್ಪನ ದೊಡ್ಡಿಗ್ರಾಮದಲ್ಲಿರುವ ಚಿಕ್ಕತಿರುಪತಿ ವೆಂಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆಗಳು ನಡೆಯಲಿವೆ. ವೈಕುಂಠ ದ್ವಾರಪ್ರವೇಶ, ಕಲ್ಯಾಣೋತ್ಸವ, ಪಂಚಾಮೃತಾಭಿಷೇಕ, ಪ್ರಸಾದ ವಿನಿಯೋಗ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
ವಾಹನ ಸಂಚಾರ ಬದಲಾವಣೆ
ಜನವರಿ 1 ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ವಾಹನ ಸಂಚಾರ ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ತುಮಕೂರು ರಸ್ತೆ ಕಡೆಯಿಂದ -ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳು ಪಶ್ಚಿಮ ಕಾರ್ಡ್ ರಸ್ತೆಯ ಸಾಬೂನು ಕಾರ್ಖಾನೆ ವೃತ್ತ, ಡಾ. ರಾಜ್ ಕುಮಾರ್ ರಸ್ತೆ - 10ನೇ ಅಡ್ಡರಸ್ತೆ - ಬಲ ತಿರುವು ರಾಜಾಜಿನಗರ 1ನೇ ಬ್ಲಾಕ್ -ಪಶ್ಚಿಮ ಕಾರ್ಡ್ ರಸ್ತೆ ಸೇರಿ ಮುಂದೆ ಸಂಚರಿಸಬೇಕು.
ನವರಂಗ್ ವೃತ್ತದ ಕಡೆಯಿಂದ ಸಂಚರಿಸುವ ವಾಹನಗಳು ಡಾ. ರಾಜ್ ಕುಮಾರ್ ರಸ್ತೆ -10ನೇ ಕ್ರಾಸ್ - ಎಡತಿರುವು ರಾಜಾಜಿನಗರ 1ನೇ ಬ್ಲಾಕ್ - ಬಲ ತಿರುವು ಸರ್ಕಾರಿ ಸಾಬೂನು ಕಾರ್ಖಾನೆ ಮುಖಾಂತರ ತುಮಕೂರು ರಸ್ತೆಗೆ ಸೇರಿ ಸಂಚರಿಸಬೇಕು.
ಇಸ್ಕಾನ್ ವಾಹನ ನಿಲುಗಡೆ
ಇಸ್ಕಾನ್ ಬೆಟ್ಟದ ಮೇಲೆ (ವಿವಿಐಪಿ, ಇಸ್ಕಾನ್ ಆವರಣ), ಪೈಪ್ ಲೇನ್ ರಸ್ತೆ ಮಿಲ್ಕ್ ಕಾಲೋನಿ (ವಿವೇಕಾನಂದ ಕಾಲೇಜು ಪಕ್ಕದ ಮೈದಾನ), ಮಹಾಲಕ್ಷ್ಮೀ ಲೇ ಔಟ್ ಜ್ಯೂಸ್ ಫ್ಯಾಕ್ಟರಿ ಮೈದಾನ, ಪಶ್ಚಿಮ ಕಾರ್ಡ್ ರಸ್ತೆ ಅಷ್ಟಲಕ್ಷ್ಮೀ ದೇವಸ್ಥಾನ ಪಕ್ಕದ ಪೈಪ್ ಲೇನ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳವಕಾಶ ಕಲ್ಪಿಸಲಾಗಿದೆ.












Click it and Unblock the Notifications