ಒನ್ಇಂಡಿಯಾ ವಿಶೇಷ: ಬೆಂಗಳೂರಲ್ಲಿ ನ್ಯೂಡಲ್ಸ್ ವ್ಯಾಪಾರಕ್ಕೇನು ಅಡ್ಡಿಯಿಲ್ಲ
ಬೆಂಗಳೂರು, ಜೂ. 04: ಮ್ಯಾಗಿ ನೂಡಲ್ಸ್ ನಲ್ಲಿ ಅನಾರೋಗ್ಯಕರ ವಸ್ತು ಇದೆಯೋ, ಇಲ್ಲವೋ? ಅದನ್ನು ತಿಂದರೆ ಆರೋಗ್ಯಕ್ಕೆ ಯಾವ ಸಮಸ್ಯೆಯಾಗುತ್ತದೆ? ಎಂಬ ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿದಿನ ಚರ್ಚೆಯಾಗುತ್ತಲೇ ಇದೆ. ಆದರೆ ಸದ್ಯ ನೂಡಲ್ಸ್ (ಮ್ಯಾಗಿಯನ್ನು ಹೊರತು ಪಡಿಸಿ) ಮಾರುಕಟ್ಟೆಯ ಮೇಲೆ ಈ ಘಟನಾವಳಿಗಳು ಯಾವ ಚಿತ್ರಣ ಬೀರುತ್ತಿವೆ ಎಂಬುದನ್ನು ನೋಡೋಣ.
ಬೆಂಗಳೂರಿಗರಿಗೆ ಪ್ರತಿದಿನ ಸಂಜೆ ಬಾಯಿಗೆ ಉಪ್ಪು ಖಾರ ಬೀಳಲೇಬೇಕು. ಅದು ರಸ್ತೆ ಬದಿಯ ಪಾನಿಪೂರಿ, ಮಸಾಲಾಪೂರಿಯಾದರೂ ಸರಿ, ನೂಡಲ್ಸ್ ಆದರೂ ಸರಿ. ಜಯನಗರದ ಬಿಡಿಎ ಕಾಂಪ್ಲೆಕ್ಸ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ರಿಂಗ್ ರಸ್ತೆ ಪಕ್ಕದ ತಳ್ಳು ಗಾಡಿಗಳು, ಎಚ್ ಎಸ್ ಎಆರ್ ಲೇಔಟ್, ಗಾಂಧಿಬಜಾರ್, ಶಿವಾಜಿನಗರ.....ಏರಿಯಾಗಳ ಪಟ್ಟಿ ಉದ್ದದ್ದಿದೆ. ಎಲ್ಲ ಕಡೆಯೂ ನೂಡಲ್ಸ್ ಗಳ ಭರಾಟೆ ಜೋರಾಗಿರುತ್ತೆ. ಕಿಸೆಯಲ್ಲಿ ಜಾಸ್ತಿ ಹಣ ಇರುವವರು ಚೈನೀಸ್ ರೆಸ್ಟೋರೆಂಟ್ ಗಳಿಗೆ ದಾಳಿ ಇಡುತ್ತಾರೆ.[ರುಚಿಕರ ಮ್ಯಾಗಿ ತಿಂದ ಎಷ್ಟು ಜನರು ಖಾಯಿಲೆ ಬಿದ್ದಿದ್ದಾರೆ?]
ಆದರೆ ಇಲ್ಲಿ ಬಳಕೆ ಮಾಡುವ ನೂಡಲ್ಸ್ ಗಳಿಗೂ, ಮ್ಯಾಗಿಯೂ ಏನಾದರೂ ಸಂಬಂಧವಿದೆಯಾ? ಇವೆರಡು ಬೇರೆ ಬೇರೆನೇ? ಇಲ್ಲಿ ಬಳಕೆ ಮಾಡುತ್ತಿರುವ ನೂಡಲ್ಸ್ ಎಲ್ಲಿಂದ ತರಲಾಗುತ್ತದೆ ಎಂದು ಮಾಹಿತಿ ಕಲೆಹಾಕಲು ಪ್ರಯತ್ನ ಮಾಡಿದೆವು. ಸದಾ ನೂಡಲ್ಸ್ ತಿನ್ನುತ್ತಿದ್ದವರು ಇಂದು ಬಂದ್ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಪ್ರಶ್ನೆ ಕೇಳಿದೆವು. ಆ ಎಲ್ಲ ವಿವರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಇಳಿಮುಖವಾದ ವ್ಯಾಪಾರ
ಮ್ಯಾಗಿಯ ಬಗ್ಗೆ ಮಾಧ್ಯಮಗಳಲ್ಲಿ ಗಂಟೆಗಟ್ಟಲೇ ಚರ್ಚೆ ವಡೆಯುತ್ತಿರುವುದು ಬೀದಿ ಬದಿಯ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಿದೆ. ಜಯನಗರದ ಬಿಡಿಎ ಕಾಂಪ್ಲೆಕ್ಸ್ ಸುತ್ತ ಸಂಜೆ ವೇಳೆ ನೂಡಲ್ಸ್ ಮಾಡುತ್ತಿದ್ದವರು ಕಳೆದ ನಾಲ್ಕೈದು ದಿನದಿಂದ ವ್ಯಾಪಾರ ಕುಂಠಿತವಾಗಿದೆ ಎಂದು ಹೇಳುತ್ತಾರೆ. ಕೆಲವರು ನೂಡಲ್ಸ್ ಮಾಡುವುದನ್ನು ನಿಲ್ಲಿಸಿದ್ದಾರೆ.

ಸರ್ ಫೋಟೊ ತೇಗಿಬೇಡಿ
ನೂಡಲ್ಸ್ ಅಂಗಡಿಗೆ ಭೇಟಿ ನೀಡಿ ಕೆಲ ಮಾಹಿತಿ ಪಡೆದುಕೊಂಡ ನಂತರ ಫೋಟೋ ತೆಗೆಯಲು ಮುಂದಾದಾಗ ' ಸಾರ್ ದಯವಿಟ್ಟು ಫೋಟೋ ತೇಗಿಬೇಡಿ' ಎಂದು ಜಯನಗರದ ಬಿಡಿಎ ಕಾಂಪ್ಲೆಕ್ಸ್ ಅಂಗಡಿ ಮಾಲಿಕರೊಬ್ಬರು ಕೇಳಿಕೊಂಡರು. ಯಾಕೆ ಎಂದು ಕೇಳಿದರೆ ಅವರ ಬಳಿ ಸ್ಪಷ್ಟನೆ ಇರಲಿಲ್ಲ.

ಹೋಮ್ ಮೇಡ್ ನೂಡಲ್ಸ್
ನಾವು ಮ್ಯಾಗಿಯನ್ನು ಯಾವ ಕಾಲದಲ್ಲಿಯೂ ಬಳಸಿಲ್ಲ. ಪ್ರತಿದಿನ ನಮ್ಮಲ್ಲಿ 200 ಕ್ಕೂ ಅಧಿಕ ಜನ ನೂಡಲ್ಸ್ ತಿನ್ನುತ್ತಾರೆ. ಇಲ್ಲಿವರೆಗೆ ಯಾರೂ ಆರೋಗ್ಯ ಕೆಟ್ಟಿದೆ ಎಂದು ದೂರು ಹೇಳಿಲ್ಲ. ಬಸವನಗುಡಿಯ ಮನೆಯಲ್ಲೇ ತಯಾರುಮಾಡುವ ಶ್ಯಾವಿಗೆ ಬಳಸುತ್ತಿದ್ದೇವೆ ಎಂದು ಬಿಡಿಎ ಕಾಂಪ್ಲೆಕ್ಸ್ ಅಂಗಡಿ ಮಾಲಿಕ ರಾಜೇಶ್ ತಿಳಿಸಿದರು.

ಅರ್ಧ ಜನಕ್ಕೆ ಗೊತ್ತಿಲ್ಲ
ಮ್ಯಾಗಿ ಬಗ್ಗೆ ಇಷ್ಟೆಲ್ಲಾ ಆವಾಂತರಗಳು ನಡೆಯುತ್ತಿದ್ದರೂ ಅರ್ಧ ಜನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಏನೂ ಗೊತ್ತಿಲ್ಲ. ದಿನಕ್ಕೆ ಒಂದು ಪ್ಲೇಟ್ ನೂಡಲ್ಸ್ ಹೊಟ್ಟೆಗೆ ಹೋಗದಿದ್ದರೆ ನಮಗೆ ಸಮಾಧಾನವೇ ಇಲ್ಲ ಎಂದು ಉತ್ತರ ಭಾರತದ ದಿವ್ಯಾ ಚೌಧರಿ ಹೇಳುತ್ತಾರೆ. ಎನ್ ಎಂ ಕೆಆರ್ ವಿ ಕಾಲೇಜು ಸುತ್ತಮುತ್ತಲ ಅಂಗಡಿಗಳ ವ್ಯಾಪಾರದಲ್ಲಿ ಕುಂಠಿತವಾಗಿಲ್ಲ.

ಮ್ಯಾಗಿಗೂ ಇದಕ್ಕೂ ಸಂಬಂಧವಿಲ್ಲ
ಮ್ಯಾಗಿಗೂ ನಾವು ಬಳಕೆ ಮಾಡುವ ನೂಡಲ್ಸ್ ಗೂ ಸಂಬಂಧವಿಲ್ಲ. ನಾವು ಮ್ಯಾಗಿ ಬಳಸಿ ನೂಡಲ್ಸ್ ತಯಾರಿಸಿದರೆ ನಷ್ಟ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಅದರೆ ಬೆಲೆ ಜಾಸ್ತಿ, ಈ ವಿವಾದ ಎದ್ದ ಮೇಲೆ ಅದರ ಸಹವಾಸಕ್ಕೂ ಹೋಗುತ್ತಿಲ್ಲ ಎಂಬುದು ಲಕ್ಷ್ಮಣ್ ರಾವ್ ಪಾರ್ಕ್ ಪಕ್ಕದ ಗಾಡಿ ಅಂಗಡಿಯವರ ಹೇಳಿಕೆ.

ಸ್ವಯಂ ಬಹಿಷ್ಕಾರ
ಸರ್ಕಾರಗಳು ಮ್ಯಾಗಿ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿ ವರದಿ ಬಂದ ನಂತರ ನಿಷೇಧ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿವೆ. ಆದರೆ ಮಾಧ್ಯಮಗಳ ವರದಿ ಪರಿಣಾಮ ಮ್ಯಾಗಿ ವ್ಯಾಪಾರವೂ ಪಾತಾಳಕ್ಕೆ ಕುಸಿದಿದ್ದು ತನ್ನಿಂದ ತಾನೇ ಬಹಿಷ್ಕಾರಕ್ಕೆ ಒಳಗಾಗುತ್ತಿದೆ.












Click it and Unblock the Notifications