ಆರಂಭಿಕ ಹಂತದಲ್ಲೇ ರೋಗ ಪತ್ತೆಗೆ ವಿಶೇಷ ವ್ಯವಸ್ಥೆ; ಸಚಿವ ಸುಧಾಕರ್
ಬೆಂಗಳೂರು, ಏಪ್ರಿಲ್ 7: ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬೆಳೆಸಬೇಕಿದೆ. ರೋಗ ಬಂದ ನಂತರದಲ್ಲಿ ಚಿಕಿತ್ಸೆ ನೀಡುವುದರ ಬದಲಿಗೆ ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ "ವಿಶ್ವ ಆರೋಗ್ಯ ದಿನ" ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶ್ವಾಸಕೋಶ ಸೇರಿದಂತೆ ದೇಹದ ಎಲ್ಲ ಭಾಗಗಳು ಉತ್ತಮವಾಗಿ ಕೆಲಸ ಮಾಡಲು ಶುದ್ಧ ಆಮ್ಲಜನಕ, ಶುದ್ಧ ಆಹಾರ ಬೇಕಾಗುತ್ತದೆ ಎಂದರು.
ಕೂಲ್ ಡ್ರಿಂಕ್ಸ್, ಜಂಕ್ ಫುಡ್ ನಿಂದಾಗಿ ಬೊಜ್ಜು ಅತಿಯಾಗಿ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ. ವಾಸ್ತವ ಸ್ಥಿತಿಯಲ್ಲಿ ರೋಗ ಬಂದ ಬಳಿಕ ಎಲ್ಲರೂ ಆಸ್ಪತ್ರೆಗೆ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅದರ ಬದಲಿಗೆ ರೋಗದ ಲಕ್ಷಣ ಮತ್ತು ಸಂಭವನೀಯತೆ ಕುರಿತು ಗುರುತಿಸುವ ವೈದ್ಯಕೀಯ ತಪಾಸಣೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮೂಲಕ ರೋಗ ಬರುವ ಮುನ್ನವೇ ಅದರ ಸಾಧ್ಯತೆ ಹೇಳಲು ಸಾಧ್ಯವಿದೆ ಎಂದರು.

ವೈದ್ಯ ವೃತ್ತಿಯಲ್ಲಿ ಧನ್ಯತಾ ಭಾವನೆ:
ಜಗತ್ತಿನಲ್ಲಿ ಅನೇಕ ವೃತ್ತಿಗಳಿವೆ. ಆದರೆ ವೈದ್ಯ ವೃತ್ತಿಯಲ್ಲಿ ಹೆಚ್ಚು ಧನ್ಯತಾ ಭಾವ ಮೂಡುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದರು. ವೃತ್ತಿ ಜೀವನದಲ್ಲಿ ಪ್ರೀತಿ, ಅನುಕಂಪ ಮತ್ತು ವಿಶ್ವಾಸವನ್ನು ಹೊಂದಿರುವಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ 44 ಸಾವಿರ ಆಶಾ ಕಾರ್ಯಕರ್ತೆಯರು ತಾವು ಪಡೆಯುವ ಗೌರವಧನಕ್ಕಿಂತ ಹತ್ತು ಪಟ್ಟು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಗೌರವಧನ ತೀರಾ ಕಡಿಮೆ ಆಗಿರುವುದರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಿಳಿಸಿದ್ದು, ಅವರೂ ಕೂಡ ಸ್ಪಂದಿಸಿ ಆ ಮೊತ್ತವನ್ನು ಹೆಚ್ಚಳ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಎರಡು ವರ್ಷ ಬಾಕಿ ಉಳಿದಿದ್ದ ಪದೋನ್ನತಿ ಮಾಡಲಾಗಿದೆ. ನೌಕರರು, ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದರು.
ವೈದ್ಯರು ವೃತ್ತಿ ಜೀವನದಲ್ಲಿ ರಾಜಿ ಆಗಬಾರದು:
ವೈದ್ಯರು ತಮ್ಮ ವೃತ್ತಿ ಬದುಕಿನಲ್ಲಿ ಮಾತ್ರ ಯಾವುದೇ ಕಾರಣಕ್ಕೂ ರಾಜಿ ಆಗಬಾರದು. ಜನರ ಮುಂದೆ ತಲೆ ತಗ್ಗಿಸುವಂತೆ ಆಗಬಾರದು. ಐಎಎಸ್, ಕೆಎಎಸ್ ಅಧಿಕಾರಿಗಳು ಎಲ್ಲ ಬಗೆಯ ಆಡಳಿತದ ಕೆಲಸ ಮಾಡುತ್ತಾರೆ. ಹಾಗೆಯೇ ವೈದ್ಯರು ಕೂಡ ಆಡಳಿತ ನಡೆಸಬೇಕು. ಯಾವುದೇ ಆರೋಗ್ಯ ಸಂಸ್ಥೆ, ಆಸ್ಪತ್ರೆಯಲ್ಲಿ ಆಡಳಿತ ಲೋಪ ಉಂಟಾಗುವುದನ್ನು ತಡೆಯಲು ವೈದ್ಯರಿಗೆ ವಿಶೇಷ ತರಬೇತಿ ಅಗತ್ಯವಿದೆ. ಈ ಹಿಂದಿನ ಯಾವುದೇ ಸರ್ಕಾರ ಇದನ್ನು ಮಾಡಿರಲಿಲ್ಲ, ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದರು.
ವೇತನ ಸಮಾನತೆ ಕುರಿತು ಸಮಿತಿ ರಚನೆ:
ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸಮನಾಗಿ ರಾಜ್ಯ ನೌಕರರಿಗೆ ವೇತನ ನೀಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಆರೋಗ್ಯ ಇಲಾಖೆ ನೌಕರರಿಗೆ ಈ ರೀತಿ ವೇತನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಅದರ ಜೊತೆಗೆ ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು. ಕಣ್ಣಿನ ಆರೋಗ್ಯ ತಪಾಸಣೆಗಾಗಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಡವರಿಗಾಗಿ ಉಚಿತ ಡಯಾಲಿಸಿಸ್ ಕಾರ್ಯಕ್ರಮ ವಿಸ್ತರಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.
ಆರೋಗ್ಯ ದಿನಾಚರಣೆ:
ಮಧ್ಯ ಕರ್ನಾಟಕದ ಒಂದು ಭಾಗದಲ್ಲಿ 44 ಆಶಾ ಕಾರ್ಯಕರ್ತೆಯರನ್ನು ಒಂದೆಡೆ ಸೇರಿಸಿ ಆರೋಗ್ಯ ದಿನಾಚರಣೆಯನ್ನು ಆಚರಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಆರೋಗ್ಯ ಸಚಿವರನ್ನೂ ಕರೆತರಲಾಗುವುದು. ಹಾಗೆ ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಪುನೀತ್ ರಾಜಕುಮಾರ್ ನೇತ್ರದಾನ ಮಾಡಿದ್ದರಿಂದ ಅರಿವು ಹೆಚ್ಚಾಗಿದೆ. ಇದೇ ರೀತಿ ತಾರೆಯರ ಮೂಲಕ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಕಾನೂನು ಎಲ್ಲರಿಗೂ ಒಂದೇ. ಎಲ್ಲಾ ನಾಗರಿಕರು ಕಾನೂನು ಪಾಲಿಸಬೇಕು. ಯಾವುದೇ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಆದರೆ ಕೆಲ ವಿಚಾರದಲ್ಲಿ ರಾಜಕೀಯ ಮಾಡಲಾಗಿದೆ ಎಂದು ಸಚಿವರು ಹೇಳಿದರು.












Click it and Unblock the Notifications