ಬೆಂಗಳೂರು ಮಳೆ; ಮತ್ತೆ ಮುಳುಗಿದ ರೈನ್‌ಬೋ ಲೇಔಟ್
ಬೆಂಗಳೂರು, ಸೆಪ್ಟೆಂಬರ್ 05; ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿಯಿಂದ ಸುರಿದ ಮಳೆ ಅವಾಂತರ ಸೃಷ್ಟಿಮಾಡಿದೆ. ಸೋಮವಾರವೂ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಭಾನುವಾರ ಸಂಜೆಯ ತನಕ ಬಿಡುವು ಕೊಟ್ಟಿದ್ದ ಮಳೆರಾಯ ಬಳಿಕ ತನ್ನ ಪ್ರತಾಪ ತೋರಿಸಿದ್ದಾನೆ. ಸೋಮವಾರ ಮುಂಜಾನೆಯ ತನಕ ನಗರದಲ್ಲಿ ಭಾರೀ ಮಳೆಯಾಗಿದ್ದು, ನಗರದಲ್ಲಿ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.
ನಗರದ ವಿವಿಧ ಬಡಾವಣೆಗಳ ಹಲವು ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗಿದ್ದು, ವಾಹನಗಳು ಹಲಾವೃತವಾಗಿವೆ. ಮಾರತ್‌ಹಳ್ಳಿಯಲ್ಲಿ ಅತಿ ಹೆಚ್ಚು ಎಂದರೆ 87.5 ಮಿ. ಮೀ. ಮಳೆಯಾಗಿದೆ.

ಮತ್ತೆ ಮುಳುಗಿದ ರೈನ್‌ಬೋ ಲೇಔಟ್; ಬೆಂಗಳೂರಿನ ರೈನ್‌ಬೋ ಲೇಔಟ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದೆ. ಸರ್ಜಾಪುರ ರಸ್ತೆಯಲ್ಲಿರುವ ಈ ಲೇಔಟ್ ಪ್ರತಿ ಬಾರಿಯೂ ಮಳೆ ಬಂದಾಗ ಮುಳುಗುತ್ತದೆ.
ಭಾನುವಾರ ಸುರಿದ ಮಳೆಯಿಂದಾಗಿ 350ಕ್ಕೂ ಅಧಿಕ ಮನೆಗಳಿರುವ ರೈನ್‌ಬೋ ಲೇಔಟ್ ಮತ್ತೆ ಮುಳುಗಿದೆ. ಎರಡು ಅಗ್ನಿ ಶಾಮಕದ ದಳದ ವಾಹನಗಳು ರಾತ್ರಿಯೇ ಸ್ಥಳಕ್ಕೆ ಆಗಮಿಸಿದರೂ ನೀರನ್ನು ಎಲ್ಲಿಗೆ ಕಳಿಸಬೇಕು? ಎಂಬ ಪ್ರಶ್ನೆ ಎದುರಾಯಿತು.
ರೈನ್‌ಬೋ ಲೇಔಟ್ ಮುಂಭಾಗದ ಎರಡು ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋ ಕಂಪನಿ ಸೇರಿ ಇಡೀ ಪ್ರದೇಶಗಳು ಜಲಾವೃತಗೊಂಡಿವೆ. ಇತ್ತೀಚೆಗೆ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೈನ್‌ಬೋ ಲೇಔಟ್ ಪದೇ ಪದೇ ಜಲಾವೃತವಾಗುತ್ತಿದೆ.

ಎಲ್ಲಿ, ಎಷ್ಟು ಮಳೆಯಾಗಿದೆ?; ಭಾನುವಾರ ರಾತ್ರಿ ಮಾರತ್‌ಹಳ್ಳಿ 87.5, ದೊಡ್ಡನಕ್ಕುಂದಿ 70, ವರ್ತೂರು 83.5, ಬೆಳ್ಳಂದೂರು 69.5, ಹಾಲನಾಯಕನಹಳ್ಳಿ 74, ಬೆಳ್ಳಂದೂರು 69.5, ಹೆಚ್‌ಎಎಲ್ ವಿಮಾನ ನಿಲ್ದಾಣ 66.5 ಮಿ. ಮೀ. ಮಳೆಯಾಗಿದೆ.
ದಾಸನಾಪುರ 70, ಹಂಪಿನಗರ 66, ಗಂಟಿಗಾನಹಳ್ಳಿ 65.5, ತಾವರೆಕೆರೆ 135.5, ಕಾಚೋಹಳ್ಳಿ 65.5 ಮಿ. ಮೀ. ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಹಾಯವಾಣಿ ಸಂಖ್ಯೆಗಳು; ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ರಸ್ತೆಗಳು ಜಲಾವೃತಗೊಂಡಿವೆ, ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ಅವಾಂತರವಾದಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕರೆ ಮಾಡಬೇಕು. ಬಿಬಿಎಂಪಿಯನ್ನು ಸಂಪರ್ಕಿಸಲು ಉಚಿತ ಸಹಾಯವಾಣಿ ಸಂಖ್ಯೆ 1533. ಬಿಬಿಎಂಪಿಯ 24*7 ಸಹಾಯವಾಣಿ ಸಂಖ್ಯೆ 2266 0000. ವಾಟ್ಸಪ್ ಮೂಲಕ ಸಂಪರ್ಕಿಸಲು ಸಂಖ್ಯೆ 94806 85700.
ಪ್ರಸ್ತುತ ಬಿಬಿಎಂಪಿಯಲ್ಲಿ ಕಾರ್ಪೊರೇಟರ್, ಮೇಯರ್ ಮತ್ತು ಉಪ ಮೇಯರ್ ಇಲ್ಲ. ಆದ್ದರಿಂದ ಜನರು ತಮ್ಮ ವಿಭಾಗವಾರು ಕಚೇರಿಗಳ ಸಂಪರ್ಕ ಸಂಖ್ಯೆಗಳನ್ನು ಇಟ್ಟುಕೊಂಡಿರುವುದು ಉತ್ತಮ. ಬಿಬಿಎಂಪಿ 'ಪ್ರಹರಿ' ಎಂಬ ತುರ್ತು ಸಹಾಯ ವಾಹನಗಳ ಸೇವೆಯನ್ನು ಸಹ ನಗರದಲ್ಲಿ ಆರಂಭಿಸಿದೆ.
ಪ್ರಹರಿ ಸಂಚಾರಿ ವಾಹನ ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಡೆಸುತ್ತದೆ. ಒಂದು ಪ್ರಹರಿ ತಂಡದಲ್ಲಿ 5 ಜನರು ಇರುತ್ತಾರೆ. ಈ ವಾಹನದಲ್ಲಿ ಮರ ಕತ್ತರಿಸುವ ಯಂತ್ರ, ನೀರು ಹೊರ ಹಾಕಲು ಮೋಟಾರ್ ಮುಂತಾದವುಗಳು ಇರುತ್ತವೆ. ತುರ್ತು ಸಂದರ್ಭದಲ್ಲಿ ತಕ್ಷಣ ಪ್ರಹರಿ ಸ್ಪಂದಿಸಲಿದೆ.
ಯೆಲ್ಲೊ ಅಲರ್ಟ್; ಸೆಪ್ಟೆಂಬರ್ 5 ರಿಂದ 9ರ ತನಕ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಸೆಪ್ಟೆಂಬರ್ 5ರ ಸೋಮವಾರ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications