Bengaluru Water Crisis: ಸಮಸ್ಯೆ ಉಲ್ಬಣ: ಟ್ಯಾಂಕರ್ ನೋಂದಣಿಗೆ ಮತ್ತೆ ಅವಕಾಶ, ಗಡುವು
ಬೆಂಗಳೂರು, ಮಾರ್ಚ್ 09: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳ ಮಾಲೀಕರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಮಾರ್ಚ್ 7ಕ್ಕೆ ಮುಗಿದಿದ್ದ ನೋಂದಣಿ ಅವಕಾಶವನ್ನು ಮತ್ತೆ ಒದಗಿಸಲಾಗಿದೆ.
ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿಯು ಮಾರ್ಚ್ 7ರ ತನಕ ಟ್ಯಾಂಕರ್ ವಾಹನ ಮಾಲೀಕರಿಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ ಇದಕ್ಕೆ ನಿರೀಕ್ಷೆಯಷ್ಟು ಟ್ಯಾಂಕರ್‌ಗಳು ನೋಂದಣಿ ಆಗಿಲ್ಲ. ಕೇವಲ 1530 ಟ್ಯಾಂಕರ್ ಗಳು ನೋಂದಣಿ ಆಗಿವೆ.

ಈ ಕಾರಣದಿಂದ ಟ್ಯಾಂಕರ್ ಮಾಲೀಕರಿಗೆ ಮಾರ್ಚ್ 15ರ ವರೆಗೆ ನೋಂದಣಿಗೆ ಮತ್ತೆ ಅವಕಾಶ ನೀಡಿದ್ದು, ಗಡುವು ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪೋರ್ಟಲ್‍ನಲ್ಲಿ ನಿಗದಿತ ಗಡುವಿನ ನಂತರವೂ ನೋಂದಣಿ ಆಗದಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಎಚ್ಚರಿಕೆ ನೀಡಿದರು.
419 ಟ್ಯಾಂಕರ್ ಸ್ವಯಂ ಪ್ರೇರಿತ ಬಾಡಿಗೆ
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸದ್ಯ ಬಿಬಿಎಂಪಿ ಪೋರ್ಟಲ್‌ನಲ್ಲಿ ನೋಂದಣಿ ಆಗಿರುವ 1530 ಟ್ಯಾಂಕರ್‌ಗಳಿಂದ ನಿತ್ಯ ಕೇವಲ 10 ಎಂಎಲ್‍ಡಿ ನೀರನ್ನು ಒಂದೇ ಬಾರಿಗೆ ಸರಬರಾಜು ಮಾಡಬಹುದು. ನೋಂದಣಿಯಾದ ಟ್ಯಾಂಕರ್ ಗಳಿಗೆ ಸ್ಟಿಕ್ಕರ್ ಅಳವಡಿಸಲಾಗುವುದು. ನೀರಿನ ಟ್ಯಾಂಕರ್ ಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿರುವ ದೂರುಗಳು ಕೇಳಿ ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
419 ಜನರು ಸ್ವಯಂಪ್ರೇರಿತವಾಗಿ ಬಾಡಿಗೆಗೆ ತಮ್ಮ ಟ್ಯಾಂಕರ್ ಗಳನ್ನು ಮಂಡಳಿಗೆ ನೀಡಲು ಮುಂದೆ ಬಂದಿದ್ದಾರೆ. ನಗರದಲ್ಲಿ ಬೇಕಾಬಿಟ್ಟಿಯಾಗಿ ಬೊರವೆಲ್‍ಗಳನ್ನು ಕೊರೆಯುವುದರ ಬದಲು ನೀರಿನ ಲಭ್ಯತೆ ಆಧರಿಸಿ ಭೂವಿಜ್ಞಾನಿಗಳ ವರದಿಯ ಆಧಾರದ ಮೇಲೆ ಬೊರವೆಲ್‍ಗಳನ್ನು ಕೊರೆಯಿಸಲು ಮಂಡಳಿ ಉದ್ದೇಶಿಸಿದೆ. ಇದಕ್ಕಾಗಿ 4 ಜನ ಭೂವಿಜ್ಞಾನಿಗಳನ್ನು ಸಹ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಅನ್ಯ ಉದ್ದೇಶಕ್ಕೆ ನೀರು ಬಳಸಿದರೆ ದಂಡ
ಕಾವೇರಿ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಿ ಈಗಾಗಲೇ ಜಲಮಂಡಳಿಯ ಕಾಯ್ದೆ ಅಡಿ ಆದೇಶ ಹೊರಡಿಸಲಾಗಿದೆ. ಜನರು ಸಹ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಲಮಂಡಳಿ ಕಾಯ್ದೆ ಅಡಿಯ ಆದೇಶ ಮಾರ್ಚ್ 15ರಿಂದ ಇದನ್ನು ಅನುಷ್ಠಾನಗೊಳ್ಳಲಿದೆ. ಸಾರ್ವಜನಿಕರು ಅನ್ಯ ಉದ್ದೇಶಕ್ಕೆ ಬಳಸುವುದು ಕಂಡುಬಂದಲ್ಲಿ ನಮ್ಮ ಮಂಡಳಿ ಸಿಬ್ಬಂದಿ ಸ್ಥಳದಲ್ಲಿಯೇ ಆದೇಶದ ಅನುಸಾರ ದಂಡ ವಿಧಿಸಲಿದ್ದಾರೆ. ಈ ಕುರಿತು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ನೀರು ಬಳಕೆ ಕುರಿತು ಗೈಡ್‍ಲೈನ್ಸ್‍ಗಳನ್ನು ಸಂಬಂಧಿಸಿದವರೊಂದಿಗೆ ಕುಳಿತು ಚರ್ಚಿಸಿ ಹೊರಡಿಸಲಾಗುವುದು. ಈ ಸಂದರ್ಭದಲ್ಲಿ ಮಂಡಳಿ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಐಐಎಸ್‍ಸಿ ತಜ್ಞರಾದ ಪ್ರೊ.ವಿಶ್ವನಾಥ, ಚೀಪ್ ಎಂಜನಿಯರ್ ಜಯಪ್ರಕಾಶ ಮತ್ತಿತರರು ಉಪಸ್ಥಿತರಿದ್ದರು.
ಸುಳ್ಳು ವದಂತಿಗೆ ಕಿವಿಗೊಡಬೇಡಿ: ಜಲಮಂಡಳಿ ಮನವಿ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯ ಪ್ರದೇಶಗಳಿಗೆ 1470 ಎಂಎಲ್‍ಡಿ ಕಾವೇರಿ ನೀರನ್ನು ನಿತ್ಯ ಸರಬರಾಜು ಮಾಡಲಾಗುತ್ತಿದೆ. ಈ ಸರಬರಾಜಿನಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯವಾಗಿಲ್ಲ. ಬೆಂಗಳೂರು ನಗರಕ್ಕೆ ಬರುವ ನೀರು ಬರುತ್ತಿದೆ.
ನಗರದಲ್ಲಿ ಸಮರ್ಪಕ ನೀರು ಸರಬರಾಜಿಗೂ ಸಹ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬದ್ಧವಾಗಿದ್ದು ಬೆಂಗಳೂರಿಗರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಇದೇ ವೇಳೆ ಮನವಿ ಮಾಡಿದರು.












Click it and Unblock the Notifications