'ಅಸಹ್ಯ ಸರ್ಕಾರ'ಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆ!
ಬೆಂಗಳೂರು, ಡಿಸೆಂಬರ್.09: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸೇಫ್ ಆಗಿದೆ. ಉಪ ಚುನಾವಣೆಯಲ್ಲಿ ನಡೆದ 15 ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದ್ದು, ಸ್ಥಿರ ಆಡಳಿತಕ್ಕೆ ಮತದಾರಪ್ರಭು ಮನ್ನಣೆ ನೀಡಿದ್ದಾರೆ. ಈ ಕುರಿತು ಸ್ವತಃ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಉಪ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಿದ್ದು ಹೋಗುತ್ತದೆ. ರಾಜಕೀಯ ಚಿತ್ರಣವೇ ಬದಲಾಗುತ್ತದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರಿಗೆ ಆದ ಗತಿಯೇ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪರಿಗೆ ಆಗುತ್ತದೆ. ಹೀಗೆಲ್ಲ ಬಿಜೆಪಿ ವಿರುದ್ಧ ಟ್ವೀಟಾಸ್ತ್ರ ಬಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಇದೀಗ ಕಮಲ ನಾಯಕರಿಗೆ ಶುಭಾಷಯ ಕೋರಿದ್ದಾರೆ.
ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ಪವಿತ್ರ ಮತ್ತು ಸುಭದ್ರ ಸರ್ಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಮನದಾಳದ ಅಭಿನಂದನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದೊಂದು ಅಸಹ್ಯ ಸರ್ಕಾರ:
ಸರ್ಕಾರಕ್ಕೆ ಶುಭಾಷಯ ಕೋರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಗರನ್ನು ಟೀಕಿಸುವುದನ್ನೂ ಬಿಡಲಿಲ್ಲ. ತಾವು ಮಾಡಿರುವ ಒಂದೇ ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇರುವುದು ಅಸಹ್ಯ ಸರ್ಕಾರ ಎಂದು ಮೂದಲಿಸಿದ್ದ ಬಿಜೆಪಿ ನಾಯಕರೊಬ್ಬರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಇದೊಂದು "ಅಸಹ್ಯ" ಸರ್ಕಾರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮೂದಲಿಸಿದ್ದ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು 'ಪವಿತ್ರ' ಮತ್ತು 'ಸುಭದ್ರ' ಸರ್ಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಮನದಾಳದ ಅಭಿನಂದನೆಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications