ಕ್ವಾರಂಟೈನ್ ಮುಗಿಸಿದ ಶಶಿಕಲಾ, ಚುನಾವಣಾ ಅಖಾಡಕ್ಕೆ ಎಂಟ್ರಿ?
ಚೆನ್ನೈ, ಫೆಬ್ರವರಿ 4: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅವಧಿ ಪೂರೈಸಿ ಹೊರ ಬಂದಿರುವ ಉಚ್ಚಾಟಿತ ಎಐಡಿಎಂಕೆ ನಾಯಕಿ ವಿಕೆ ಶಶಿಕಲಾ ನಟರಾಜನ್ ತಮಿಳುನಾಡಿಗೆ ತೆರಳಲು ಸಜ್ಜಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಸಲಹೆಯಂತೆ ಬೆಂಗಳೂರಿನಲ್ಲೇ ಕ್ವಾರಂಟೈನ್ ನಲ್ಲಿದ್ದ ಶಶಿಕಲಾ ಅವರು ಫೆ.7ರಂದು ಚೆನ್ನೈ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.
ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ - ಆನೇಕಲ್ ಸಮೀಪದ ಫಾರ್ಮ್ ಹೌಸ್‌ನಲ್ಲಿ ಶಶಿಕಲಾ ಹಾಗೂ ಆಪ್ತರು ತಂಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ, ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟಿನಲ್ಲಿ ಶಶಿಕಲಾ ತಂಗಿದ್ದಾರೆ. ಫೆಬ್ರವರಿ 7ರಂದು ಚೆನ್ನೈಗೆ ಪ್ರಯಾಣ ಬೆಳೆಸಲಿದ್ದು, ತಕ್ಷಣವೇ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ(ಎಎಂಎಂಕೆ) ಮುಖಂಡ ಟಿಟಿವಿ ದಿನಕರನ್ ಹೇಳಿದರು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆ ಏಪ್ರಿಲ್ -ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಆಡಳಿತಾರೂಢ ಎಐಎಡಿಎಂಕೆ ಹಾಗೂ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಖಚಿತ ಪಡಿಸಿವೆ.

ಎಐಎಡಿಎಂಕೆಗೆ ಶಶಿಕಲಾ ವಾಪಸ್ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ. ದಿನಕರನ್ ಎಎಂಎಂಕೆ ಪಕ್ಷಕ್ಕೆ ಬೆಂಬಲವಾಗಿ ಶಶಿಕಲಾ ನಿಲ್ಲುವ ಸಾಧ್ಯತೆಯಿದೆ.
ತಮಿಳುನಾಡಿನಲ್ಲಿ ''ಚಿನ್ನಮ್ಮ'' ಶಶಿಕಲಾರನ್ನು ಸ್ವಾಗತಿಸಲು ಭರ್ಜರಿಯಾಗಿ ತಯಾರಿ ನಡೆದಿದೆ. ಹೊಸೂರು ರಸ್ತೆಯಿಂದ ಸುಮಾರು 350 ಕಿ.ಮೀ ಮೆರವಣಿಗೆ ನಡೆಸಲು ಶಶಿಕಲಾ ಬೆಂಬಲಿಗರು ಸಜ್ಜಾಗಿದ್ದಾರೆ. ಆದರೆ, ಪೊಲೀಸರ ಅನುಮತಿ ಇನ್ನೂ ಸಿಕ್ಕಿಲ್ಲ.












Click it and Unblock the Notifications