ತವರು ರಾಜ್ಯಕ್ಕೆ ಎಂಟ್ರಿ ಕೊಡುತ್ತಿರುವ ಶಶಿಕಲಾಗೆ ಭರ್ಜರಿ ಸ್ವಾಗತ !
ಬೆಂಗಳೂರು, ಫೆಬ್ರವರಿ 08: ಅಮ್ಮ ಮಕ್ಕಳ ಮುನ್ನೇತ್ರ ಕಳಗಂ ಪಾರ್ಟಿ ಅಧ್ಯಕ್ಷೆ, ದಿ. ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಸೋಮವಾರ ಬೆಳಗ್ಗೆ ತವರು ರಾಜ್ಯಕ್ಕೆ ತೆರಳಿದರು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಶಿಕಲಾ ಶಿಕ್ಷಾ ಅವಧಿ ಪೂರ್ಣಗೊಂಡಿತ್ತು. ಜೈಲಿನಿಂದ ಬಿಡುಗಡೆಯಾದರೂ ಚೆನ್ನೈಗೆ ತೆರಳಿರಲಿಲ್ಲ. ಬದಲಿಗೆ ದೇವನಹಳ್ಳಿ ಕೊಡುಗುರ್ಕಿ ಸಮೀಪದ ಪ್ರಿಸ್ಟೀಜ್ ರೆಜಾರ್ಟ್ ನಲ್ಲಿ ತಂಗಿದ್ದರು. ನಾಲ್ಕು ವರ್ಷಗಳ ಬಳಿಕ ಚಿನ್ನಮ್ಮ ರಸ್ತೆ ಮಾರ್ಗವಾಗಿ ಚೆನ್ನೈಗೆ ತೆರಳಿದ್ದಾರೆ.
ದೃಷ್ಟಿ ತೆಗೆದು ಬಿಡುಗಡೆ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಶಶಿಕಲಾ ನಟರಾಜನ್ , ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಜನವರಿ 27 ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಕೋವಿಡ್ ಕಾರಣದಿಂದ ಜನವರಿ 29 ರಂದು ಆಸ್ಪತ್ರೆಯಿಂದ ಬಿಡುಡೆಯಾಗಿದ್ದರು. ಆ ಬಳಿಕ ಆಪ್ತ ಜ್ಯೋತಿಷಿ ಸಲಹೆ ಮೇರೆಗೆ ಫೆಬ್ರವರಿ. 7 ರ ವರೆಗೆ ಅವರು ಬೆಂಗಳೂರಿನಲ್ಲಿಯೇ ತಂಗಿದ್ದರು.
ದೇವನಹಳ್ಳಿ ಸಮೀಪದ ಪ್ರಿಸ್ಟೇಜ್ ರೆಸಾರ್ಟ್ ನಲ್ಲಿದ್ದ ಶಶಿಕಲಾ ಅವರು ಹೊರಡುವ ಮುನ್ನ ದಿವಂಗತ ಜಯಲಲಿತಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಆನಂತರ ಶಶಿಕಲಾ ತೆರಳಲಿರುವ ವಾಹಕ್ಕೆ ಪೂಜೆ ಸಲ್ಲಿಸಿ ಅದೇ ವಾಹನದಲ್ಲಿ ಹೆಬ್ಬಾಳ ರಿಂಗ್ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ಕಡೆ ತೆರಳಿದರು. ಟಿನ್ ಫ್ಯಾಕ್ಟರಿ ರಿಂಗ್ ರಸ್ತೆ ಮೂಲಕ ಹೊಸೂರು ತಲುಪಲಿದ್ದಾರೆ.
70 ಕಡೆ ರೋಡ್ ಶೋ: ಚಿನ್ನಮ್ಮನ ಅದ್ಧೂರಿ ಸ್ವಾಗತಕ್ಕೆ ತಮಿಳುನಾಡಿನಲ್ಲಿ ಸಕಲ ಸಿದ್ಧತೆ ನಡೆದಿದೆ. ಮೊದಲಿಗೆ ಹೊಸೂರಿನ ಜೂಜುವಾಡಿ ಚೆಕ್ ಪೋಸ್ಟ್ ಬಳಿ ಸಾವಿರಾರು ಅಭಿಮಾನಿಗಳು, ಜನಪದಾ ಕಲಾ ತಂಡಗಳು ಜಮಾಯಿಸಿವೆ. ಜೂಜುವಾಡಿ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಚಿನ್ನಮ್ಮನಿಗೆ ಅದ್ಧೂರಿ ಸ್ವಾಗತ ಕೋರಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು ಶಶಿಕಲಾ ಅವರ ಆಪ್ತರು ನೀಡಿದ ಮಾಹಿತಿ ಪ್ರಕಾರ, ಚಿನ್ನಮ್ಮ ಚೆನ್ನೈ ತಲುಪುವ ಮಾರ್ಗ ಮಧ್ಯದಲ್ಲಿ ಬರೋಬ್ಬರಿ 70 ಕಡೆ ಅಭಿಮಾನಿಗಳು ಸೇರಲಿದ್ದಾರೆ. ಎಲ್ಲಾ ಕಡೆಯೂ ಶಶಿಕಲಾ ಭೇಟಿ ಮಾಡಲಿದ್ದಾರೆ. ಕೇವಲ ಎರಡು ನಿಮಿಷ ಕೈ ಬೀಸಿ ಶುಭಾಶಯ ಕೋರಲಿದ್ದಾರೆ. ಹೊರತಾಗಿ ಯಾವವುದೇ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ. ರಾತ್ರಿ ವೇಳೆಗೆ ಚೆನ್ನೈನ ನಿವಾಸ ತಲುಪಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಅಮ್ಮ ಮಕ್ಕಳ ಮುನ್ನೇತ್ರ ಕಳಗಂ ಪಾರ್ಟಿ ಅಧ್ಯಕ್ಷೆಯಾಗಿರುವ ಶಿಶಿಕಲಾ ತವರಿಗೆ ಎಂಟ್ರಿ ಕೊಡುತ್ತಿದ್ದಂತೆ ತಮಿಳುನಾಡು ರಾಜಕೀಯದಲ್ಲಿ ಚಟುವಟಿಕೆ ಗರಿಗೆದರಿದೆ. ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆಗೆ ಒಳಗಾಗಿ ಹೊಸ ಪಕ್ಷ ಸ್ಥಾಪನೆ ಮಾಡುವಂತೆ ಮಾಡಿದ್ದ ತನ್ನ ಎದುರಾಳಿಗಳನ್ನು ಶಶಿಕಲಾ ಮಣಿಸಲು ರಾಜಕೀಯ ತಂತ್ರ ರೂಪಿಸಿದ್ದಾರೆ. ಅದರ ಭಾಗವಾಗಿಯೇ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎಂದೇ ಹೇಳಲಾಗಿದೆ.
800 ಪೊಲೀಸರ ಭದ್ರತೆ: ಇನ್ನು ಚಿನ್ನಮ್ಮನ ಅದ್ಧೂರಿ ಸ್ವಾಗತಕ್ಕೆ ಭರ್ಜರಿ ತಯಾರಿ ಜತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ. ಕೊಯಂಬತ್ತೂರು ಐಜಿ ಪೆರಯ್ಯ ನೇತೃತ್ವದಲ್ಲಿ 800 ಪೊಲೀಸರನ್ನು ಚಿನ್ನಮ್ಮನ ಭದ್ರತೆಗೆ ನಿಯೋಜಿಸಲಾಗಿದೆ. ನಾಮಕಲ್, ಕೃಷ್ಣಗಿರಿ, ಸೇಲಂ, ಧರ್ಮಪುರಿ ಜಿಲ್ಲೆಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರ ಇರುವ ಬಾವುಟಗಳು ಎಲ್ಲಡೆ ರಾರಾಜಿಸುತ್ತಿವೆ.