ಕರ್ನಾಟಕ ಬಂದ್‌ಗೆ ಬೆಂಬಲ ನೀಡಲು ವಾಟಾಳ್ ಮನವಿ
ಬೆಂಗಳೂರು, ಏ. 16 : ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಕರೆ ನೀಡಿರುವ ಏ.18ರ ಕರ್ನಾಟಕ ಬಂದ್‌ಗೆ ಜನರು ಬೆಂಬಲ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. [ಕರ್ನಾಟಕ ಬಂದ್: ಸಾರ್ವಜನಿಕರಿಗೆ ಗೈಡ್ ಲೈನ್ಸ್]
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ಬೆಂಗಳೂರಿನಲ್ಲಿ ಬುಧವಾರ ಬೈಕ್ ಜಾಥಾ ನಡೆಸಿದವು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಾಥಾ ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಮೇಕೆದಾಟು ಯೋಜನೆ ಜಾರಿಗೊಳಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು ಎಂದು ಒತ್ತಾಯಿಸಿದರು. [ಮೇಕೆದಾಟು ಯೋಜನೆ ವಿವಾದ ಏಕೆ, ಏನು?]

ಮೇಕೆದಾಟು ಯೋಜನೆಯನ್ನು ಕರ್ನಾಟಕ ಕುಡಿಯುವ ನೀರು ಪೂರೈಕೆ ಮಾಡಲು ಆರಂಭಿಸುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರದ ಕ್ರಮವನ್ನು ಖಂಡಿಸಿದ ವಾಟಾಳ್ ನಾಗರಾಜ್ ಜನರು ಬಂದ್‌ಗೆ ಬೆಂಬಲ ನೀಡುವ ಮೂಲಕ ಯೋಜನೆ ಜಾರಿಗೆ ಒತ್ತಾಯಿಸಬೇಕು ಎಂದು ಹೇಳಿದರು. [ಬಂದ್ : ಯಾವ ಸಂಘಟನೆಗಳ ಬೆಂಬಲ?]
ಕರ್ನಾಟಕ ಬಂದ್ ಮೇಕೆದಾಟು ಯೋಜನೆಗೆ ಮಾತ್ರ ಸೀಮಿತವಾಗಿಲ್ಲ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಬೇಕು. ಶೀಘ್ರವೇ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ತಿಳಿಸಿದರು. [ಬಂದ್ ಗೆ ಬೆಂಬ ಕೊಡ್ತಿರಾ?]
ಮೈಸೂರು ಬ್ಯಾಂಕ್ ವೃತ್ತದಲ್ಲಿ ಆರಂಭವಾದ ಬೈಕ್ ಜಾಥಾ ಕೆಂಪೇಗೌಡ ಬಸ್ ನಿಲ್ದಾಣ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಕೆ.ಆರ್.ಮಾರುಕಟ್ಟೆ ಮೂಲಕ ಸಂಚರಿಸಿ ಸಂಜೆ ಮುಕ್ತಾಯಗೊಂಡಿತು. ಗುರುವಾರ ಮೈಸೂರಿನಲ್ಲಿ ಜಾಥಾ ಆಯೋಜಿಸಲಾಗಿದ್ದು, ವಾಟಾಳ್ ನಾಗರಾಜ್ ಇದಕ್ಕೆ ಚಾಲನೆ ನೀಡಲಿದ್ದಾರೆ.












Click it and Unblock the Notifications