US Consulate in Bengaluru: ಬೆಂಗಳೂರಿನಲ್ಲೇ ಸಿಗಲಿದೆ ಅಮೆರಿಕ ವೀಸಾ
ಅಮೆರಿಕಾ ತೆರಳಬೇಕಿದ್ದ ಕರ್ನಾಟಕದ ಜನತೆ ವೀಸಾ ಪಡೆಯಲು ಇದುವರೆಗೂ ಹೈದರಾಬಾದ್ ಅಥವಾ ಚೆನ್ನೈ ನಗರದಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಗೆ ಹೋಗಬೇಕಿತ್ತು. ಆದರೆ ಇದೀಗ ಆ ತಲೆನೋವು ತಪ್ಪಿದ್ದು ಬೆಂಗಳೂರಿನಲ್ಲೇ ಅಮೆರಿಕ ವೀಸಾ ಪಡೆಯಲು ಅವಕಾಶ ಸಿಗಲಿದೆ. 2025ರ ಜನವರಿ ವೇಳೆಗೆ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ತೆರೆಯಲಾಗುವುದು ಎಂದು ಭಾರತದಲ್ಲಿರುವ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಾಹಿತಿ ನೀಡಿದ್ದಾರೆ.
ಯುಎಸ್ ಮತ್ತು ಭಾರತೀಯ ಬ್ಯುಸಿನೆಸ್ ಕೌನ್ಸಿಲ್ (USIBC) ಆಯೋಜಿಸಿದ್ದ ಸಂವಾಧ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಯುಎಸ್ ರಾಯಭಾರಿ ಎರಿಕೆ ಗಾರ್ಸೆಟ್ಟಿ, ಬೆಂಗಳೂರು ನಗರದಲ್ಲಿ ದೂತವಾಸ (ಕಾನ್ಸುಲೇಟ್) ಕಚೇರಿಯನ್ನು ಹೊಂದಿರದ ಏಕೈಕ ದೇಶ ಅಮೆರಿಕವಾಗಿತ್ತು. ಬೆಂಗಳೂರಿನಲ್ಲಿ ಕಚೇರಿ ಸ್ಥಾಪನೆಗೆ ಯುಎಸ್ ಶ್ರಮಿಸುತ್ತಿದೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಬೆಂಗಳೂರು ಮತ್ತು ಅಹಮದಾಬಾದ್ ನಗರಗಳಲ್ಲಿ ಕಾನ್ಸುಲೇಟ್‌ಗಳನ್ನು ತೆರೆಯುವ ಯೋಜನೆಯನ್ನು ಅಮೆರಿಕ ಘೋಷಣೆ ಮಾಡಿತ್ತು. ಗಾರ್ಸೆಟ್ ದೂತವಾಸ ಕಚೇರಿ ಪ್ರಾರಂಭದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಯುಎಸ್‌ನ ವಿದೇಶಿ ವಾಣಿಜ್ಯ ಕಚೇರಿ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2023ರಲ್ಲಿ ಘೋಷಣೆ ಮಾಡಿದ್ದ ಜೋ ಬೈಡೆನ್
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂದಿನ ಯುಎಸ್ ಅಧ್ಯಕ್ಷರಾಗಿದ್ದ ಜೋ ಬಿಡೆನ್ ಭಾರತದಲ್ಲಿ ಎರಡು ಹೊಸ ಯುಎಸ್ ದೂತವಾಸ (ಕಾನ್ಸುಲೇಟ್) ಕಚೇರಿಗಳನ್ನು ತೆರೆಯುವುದಾಗಿ ಘೋಷಣೆ ಮಾಡಿದ್ದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸ್ಥಾಪನೆಗೆ ಮೊದಲಿನಿಂದಲೂ ಒತ್ತಾಯಿಸಿದ್ದರು. ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸ್ಥಾಪನೆಯಾದರೆ ಕರ್ನಾಟಕದ 4-5 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದರು.
ಜೋ ಬಿಡೆನ್ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಪ್ರಾರಂಭಿಸುವ ಘೋಷಣೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದ ತೇಜಸ್ವಿ ಸೂರ್ಯ, "ಕರ್ನಾಟಕದ ಜನತೆ ಯುಎಸ್ ವೀಸಾ ಸಂಬಂಧಿಸಿದ ಕೆಲಸಕ್ಕಾಗಿ ಚೆನ್ನೈ, ಹೈದರಾಬಾದ್ ಅಥವಾ ದೆಹಲಿಗೆ ಹೋಗಬೇಕಾಗಿತ್ತು. ಇದಕ್ಕಾಗಿಯೇ ಸುಮಾರು 25 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಬೇಕಿತ್ತು. ಕರ್ನಾಟಕದಲ್ಲಿ ಯುಎಸ್‌ಗೆ ತೆರಳುವ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ ಸಹ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಇರಲಿಲ್ಲ. ಇದನ್ನು ಸಾಧ್ಯವಾಗಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸುತ್ತೇನೆ. ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಪ್ರಾರಂಭವಾದ ಬಳಿಕ ಪ್ರತಿ ವರ್ಷ ಕರ್ನಾಟಕದಲ್ಲಿರುವ ನಾಲ್ಕರಿಂದ ಐದು ಲಕ್ಷ ಜನರಿಗೆ ಸಹಾಯವಾಗುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications