20ರ ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪಾಸನಾ ಟ್ರಸ್ಟ್
ಬೆಂಗಳೂರು, ಜುಲೈ 10: ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಲ್ಲಿ ಹೆಸರಾಗಿರುವ ಉಪಾಸನಾ ಟ್ರಸ್ಟ್ ತನ್ನ 20ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಸಜ್ಜಾಗಿದೆ.
ಸಂಸ್ಥೆಯು 20ನೇ ವರ್ಷವನ್ನು ಪೂರೈಸಿದ್ದು, ಇದೇ ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ, ಸಿ.ಡಿ ಬಿಡುಗಡೆ, ಗೀತ ಗಾಯನ, ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜುಲೈ 13 ರಂದು ಶನಿವಾರ ಜಯನಗರ 7ನೇ ಬ್ಲಾಕ್ ನಲ್ಲಿರುವ ಜೆಎಸ್ ಎಸ್ ಸಭಾಂಗಣದಲ್ಲಿ ಸಂಜೆ ಆರು ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಎಚ್ ಡುಂಡಿರಾಜ್ ಅವರು ಗಾಯಕಿ ಮೇಘನಾ ಭಟ್ ಹಾಡಿರುವ 'ಮೇಘಾಲಾಪ' ಭಾವಗೀತೆಗಳ ಸಿ.ಡಿ ಬಿಡುಗಡೆ ಮಾಡಲಿದ್ದಾರೆ. ಸಂಗೀತ ನಿರ್ದೇಶಕ ಬಾಲಸುಬ್ರಹ್ಮಣ್ಯ (ಬಾಲಿ), ಪದ್ಮನಾಭ ನಗರದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹರ್ಷ ಲಕ್ಷ್ಮಣ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಇದೇ ಸಂದರ್ಭದಲ್ಲಿ, ಸುಗಮ ಸಂಗೀತ ಗಾಯಕ ರಾಘವೇಂದ್ರ ಬೀಜಾಡಿ ಅವರಿಗೆ ಉಪಾಸನಾ ಪ್ರಶಸ್ತಿ ಹಾಗೂ ರಿದಂ ಪ್ಯಾಡ್ ವಾದಕ ರಾಘವೇಂದ್ರ ರಂಗಧೋಳ್ ಅವರಿಗೆ ನಾದೋಪಾಸನಾ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದು.
ಉಪಾಸನಾ, ಆಲಾಪನಾ ಕಲಾಸಂಸ್ಥೆ, ಸ್ವರಸ್ಮಿತಾ ಟ್ರಸ್ಟ್, ಭಾವಾಲಯ ಟ್ರಸ್ಟ್, ಅರ್ಘ್ಯ ನೃತ್ಯ ಕಲಾ ಮಂದಿರ, ಡಿವೈನ್ ಸ್ಟ್ರಿಂಗ್ಸ್ ಅಂಡ್ ಮೆಲೋಡಿ ಕೀಸ್ ವಿದ್ಯಾರ್ಥಿಗಳಿಂದ ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.












Click it and Unblock the Notifications