ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಕುರಿ ಮಾಂಸದ ಹೆಸರಿನಲ್ಲಿ ನಾಯಿ ಮಾಂಸ ಪೂರೈಕೆ ಆರೋಪ! ಅಸಲಿ ಸತ್ಯವೇನು?
ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ ಮಾಂಸದ ಹೆಸರಿನಲ್ಲಿ ನಾಯಿ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದೆ. ರೈಲು ಸಂಖ್ಯೆ 1796 ಜೈಪುರ-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಸಾವಿರಾರು ಕೆಜಿ ಮಾಂಸ ಬಂದಿರುವುದನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ.
90 ಬಾಕ್ಸ್‌ಗಳಲ್ಲಿ ಬರೋಬ್ಬರಿ 2500 ಕೆಜಿ ಮಾಂಸ ಬೆಂಗಳೂರಿಗೆ ಬಂದಿದ್ದು, ಇದು ಕುರಿ ಮಾಂಸವಲ್ಲ ನಾಯಿ ಮಾಂಸ ಎಂದು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಶಿವಾಜಿನಗರ ಮಾಂಸದ ಅಂಗಡಿಗಳಿಗೆ ಈ ಮಾಂಸವನ್ನು ತಲುಪಿಸಲು ತರಲಾಗಿತ್ತು, ಅಲ್ಲಿಂದ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಮಾರಾಟ ಮಾಡಲು ಪೂರೈಕೆ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ರೈಲಿನಲ್ಲಿ ಬಂದ ಬಾಕ್ಸ್‌ಗಳನ್ನು ಅಂಗಡಿಗೆ ಕೊಂಡಯ್ಯದಂತೆ ಹಿಂದೂ ಪರ ಸಂಘಟನೆಗಳು ತಡೆಯಲು ಪ್ರಯತ್ನಿಸಿದವು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಮತ್ತು ಪುನೀತ್ ಕೆರೆಹಳ್ಳಿ ನಡುವೆ ಮಾತಿನ ಚಕಮಕಿ ನಡೆದಿದೆ.
ಇದು ನಾಯಿ ಮಾಂಸ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದು, ಮೀನು ಮಾಂಸದ ಹೆಸರಿನಲ್ಲಿ ಇದನ್ನು ತರಿಸಲಾಗಿದೆ. ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಆರೋಪಗಳನ್ನು ತಳ್ಳಿಹಾಕಿದ್ದು, ಯಾವುದೇ ರೀತಿಯ ತಪಾಸಣೆಗೂ ಸಿದ್ದ, ಅದು ನಾಯಿ ಮಾಂಸವಲ್ಲ ಕುರಿ ಮಾಂಸ ಎಂದರು.
ಅಬ್ದುಲ್ ರಜಾಕ್ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್, ಹಣ ಕೊಡುವಂತೆ ಪುನೀತ್ ಕೆರೆಹಳ್ಳಿ ಬೆದರಿಕೆ ಹಾಕಿದ್ದಾನೆ, ಇಲ್ಲವಾದರೆ ಗಲಾಟೆ ಮಾಡುವುದಾಗಿ ಮಾಂಸ ಮಾರಾಟಗಾರನ್ನು ಹೆದರಿಸಿದ್ದಾನೆ ಎಂದು ಆರೋಪಿಸಿದರು. ಎರಡು ದಿನಕ್ಕೊಮ್ಮೆ ಜೈಪುರದಿಂದ ಕುರಿ ಮಾಂಸ ಬರುತ್ತದೆ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾಂಸವನ್ನು ಸಾಗಾಟ ಮಾಡಲಾಗುತ್ತದೆ, ಇದರಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದರು.
ರಾಜಸ್ಥಾನದ ತಳಿಯ ಕುರಿಗಳಿಗೆ ಉದ್ದನೆಯ ಬಾಲ ಇರುತ್ತದೆ ಎಂದು ವಿಡಿಯೋ ತೋರಿಸಿದ ಅವರು, ಇದನ್ನೇ ನಾಯಿ ಮಾಂಸ ಎಂದು ಬಿಂಬಿಸಲು ಪುನೀತ್ ಕೆರೆಹಳ್ಳಿ ಪ್ರಯತ್ನಿಸುತ್ತಿದ್ದಾನೆ ಎಂದರು.
90 ಬಾಕ್ಸ್ ಮಾಂಸ ಬಂದಿದೆ, ಪ್ರತಿ ಬಾಕ್ಸ್‌ನಲ್ಲಿ 30 ಕೆಜಿ ಮಾಂಸ ಇರುತ್ತದೆ. ಯಾವ ಬಾಕ್ಸ್ ಬೇಕಾದರೂ ತೆಗೆದು ತೋರಿಸುತ್ತೇನೆ. ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಿ, ಇದು ಕುರಿ ಮಾಂಸ ಸೇವಿಸಲು ಕೂಡ ಸುರಕ್ಷಿತವಾಗಿದೆ, ಕಳೆದ 12 ವರ್ಷಗಳಿಂದ ಕೂಡ ಇದೇ ರೀತಿ ತರಿಸಲಾಗುತ್ತಿದೆ ಎಂದರು.
ಇದೇನಾದರೂ ನಾಯಿ ಮಾಂಸವಾಗಿದ್ದರೆ ಏನು ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ ಎಂದು ಅಬ್ದುಲ್ ರಜಾಕ್ ಸವಾಲು ಹಾಕಿದರು. ಕಷ್ಟಪಟ್ಟು ಸಂಪಾದನೆ ಮಾಡುವುದು ಬಿಟ್ಟು ಹೇಡಿಗಳಂತೆ ಇಂತಹ ಕೀಳು ಕೆಲಸ ಮಾಡಬಾರದು ಎಂದು ಪುನೀತ್ ಕೆರೆಹಳ್ಳಿ ವಿರುದ್ಧ ಕಿಡಿಕಾರಿದರು.












Click it and Unblock the Notifications