ಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ: ಬೊಮ್ಮನಹಳ್ಳಿಯಲ್ಲಿ ಭರ್ಜರಿ ಪ್ರಚಾರ
ಬೆಂಗಳೂರು: ಅಂತೂ ಬೊಮ್ಮನಹಳ್ಳಿ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದ್ದು, ಟಿಕೆಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಪಾಲಾಗಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮಾಪತಿ ಅಖಾಡಕ್ಕೆ ಇಳಿದಿದ್ದಾರೆ. ಟಿಕೆಟ್ ಸಿಕ್ಕ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಡಿಕೆಶಿ ಆಶೀರ್ವಾದ ಪಡೆದಿದ್ದಾರೆ.
ನಿನ್ನೆಯ ತನಕ ಬೊಮ್ಮನಹಳ್ಳಿ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಕಗ್ಗಂಟಾಗಿಯೇ ಉಳಿದಿತ್ತು. ಆದರೆ 3ನೇ ಪಟ್ಟಿಯಲ್ಲಿ ಉಮಾಪತಿ ಶ್ರೀನಿವಾಸ್ (Umapathy) ಸ್ಥಾನ ಪಡೆದಿದ್ದರು. ಬಿಜೆಪಿ ಹಾಲಿ MLA ಶಾಸಕ ಸತೀಶ್ ರೆಡ್ಡಿಗೆ (Sathish Reddy) ಬಿಜೆಪಿ ಮೊದಲ ಪಟ್ಟಿಯಲ್ಲೇ ಟಿಕೆಟ್ ಕನ್ಫರ್ಮ್ ಮಾಡಿತ್ತು. ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಅಭ್ಯರ್ಥಿಯನ್ನ ಫೈನಲ್ ಮಾಡಲು ತಡ ಮಾಡಿದ್ದರು. ಇಷ್ಟಾದರೂ ಕ್ಯಾಂಪೇನ್ ಶುರು ಮಾಡಿದ್ದ ಉಮಾಪತಿ ಶ್ರೀನಿವಾಸ್, ಸ್ಥಳೀಯ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು.

ಮನೆ ಮನೆಗೆ ತೆರಳಿ ಉಮಾಪತಿ ಪ್ರಚಾರ
ಟಿ. ವಾಸುದೇವ ರೆಡ್ಡಿ, ಕೆ. ವಾಸುದೇವ್, ಅನಿಲ್ ರೆಡ್ಡಿ ಸೇರಿದಂತೆ ಮತ್ತಿತರ ಸ್ಥಳೀಯ ಮುಖಂಡರ ಜೊತೆ ಅಭ್ಯರ್ಥಿ ಉಮಾಪತಿ ಮತಬೇಟೆ ಆರಂಭಿಸಿದ್ದಾರೆ. ಪಕ್ಷ ಬಲವರ್ಧನೆ ಜೊತೆಗೆ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ಕನಸು ಅಭ್ಯರ್ಥಿಗಿದೆ. ಮತ್ತೊಂದ್ಕಡೆ ಬೊಮ್ಮನಹಳ್ಳಿ ಬಿಜೆಪಿ ಲೀಡರ್ಸ್ ಕೂಡ ಈಗಾಗಲೇ ಕ್ಯಾಂಪೇನ್ ಶುರು ಮಾಡಿದ್ದಾರೆ. ನಾಳೆ ಶಾಸಕ ಸತೀಶ್ ರೆಡ್ಡಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದು, ಶಕ್ತಿ ಪ್ರದರ್ಶನ ಕೂಡ ನಡೆಯಲಿದೆ. ಈ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಫೈಟ್‌ಗೆ ಬೊಮ್ಮನಹಳ್ಳಿ ಅಖಾಡ ಸಜ್ಜಾಗಿದೆ.
ಸತತ 4ನೇ ಬಾರಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿರುವ ಶಾಸಕ ಸತೀಶ್ ರೆಡ್ಡಿ ಚುನಾವಣೆಯಿಂದ ಚುನಾವಣೆಗೆ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಕೊಳ್ಳುತ್ತಾ ಬಂದಿದ್ದಾರೆ. ಬೊಮ್ಮನಹಳ್ಳಿ ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. 2008ರಲ್ಲಿ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಪಡೆದ ನಂತರ ಬಿಜೆಪಿ ಪಕ್ಷದ ಭದ್ರಕೋಟೆ ಎಂದೇ ಕರೆಯಲ್ಪಡುತ್ತಿದೆ ಬೊಮ್ಮನಹಳ್ಳಿ. ಇದಕ್ಕೂ ಮೊದಲು ಕೂಡ ಈ ಭಾಗದಲ್ಲಿ ಬಿಜೆಪಿ ಬಲವಾದ ವೋಟ್ ಬ್ಯಾಂಕ್ ಹೊಂದಿತ್ತು. ಆದರೆ ಈ ಬಾರಿ ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ನಿರೀಕ್ಷೆ ಸ್ಥಳೀಯ ಕಾಂಗ್ರೆಸ್ ನಾಯಕರದ್ದು.
ಗಾರ್ಮೆಂಟ್ಸ್ ಮತದಾರರು ನಿರ್ಣಾಯಕ
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಹತ್ತಾರು ಗಾರ್ಮೆಂಟ್ಸ್ ತಲೆ ಎತ್ತಿವೆ. ಇಲ್ಲಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಹೊರ ರಾಜ್ಯದಿಂದ ಬಂದು ಬದುಕು ಕಟ್ಟಿಕೊಂಡಿರುವ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಈ ಎಲ್ಲಾ ಲೆಕ್ಕಾಚಾರಗಳ ಆಧಾರದಲ್ಲೇ ಎಲೆಕ್ಷನ್ ನಡೆಯುತ್ತದೆ. 2018ರ ಚುನಾವಣೆಯಲ್ಲಿ ಸತೀಶ್ ರೆಡ್ಡಿ ಬಿಜೆಪಿಯಿಂದ ಸತತ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸುಷ್ಮಾ ರಾಜಗೋಪಾಲ ರೆಡ್ಡಿ ವಿರುದ್ಧ 47,162 ಮತಗಳ ಅಂತರದಲ್ಲಿ ಗೆದ್ದರು. ಒಟ್ಟು 1,11,863 ಮತ ಪಡೆಯುವ ಮೂಲಕ ಸತೀಶ್ ರೆಡ್ಡಿ ಗೆದ್ದಿದ್ದರು.

ಒಟ್ನಲ್ಲಿ ಬಿಜೆಪಿ ಮತ್ತೊಮ್ಮೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಲು ಸಜ್ಜಾಗಿದೆ. ಆದರೆ ಕಾಂಗ್ರೆಸ್ ಮೊಟ್ಟ ಮೊದಲ ಬಾರಿಗೆ ತನ್ನ ಬಾವುಟ ಹಾರಿಸಲು ಕಾಯುತ್ತಿದೆ. ಬೆಂಗಳೂರಿನ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಬೊಮ್ಮನಹಳ್ಳಿ ಕ್ಷೇತ್ರ ಕೂಡ ಒಂದಾಗಿದ್ದು, ಕಾಂಗ್ರೆಸ್ ಇಲ್ಲಿ ಮೊದಲ ಬಾರಿಗೆ ಗೆಲುವಿನ ಕೇಕೆ ಹಾಕಲು ಕಾಯುತ್ತಿದ್ದರೆ, ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಎತ್ತ ಸಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications