PGCET ಅಭ್ಯರ್ಥಿಗಳ ಶುಲ್ಕ ಪಾವತಿ ಗಡುವು ವಿಸ್ತರಣೆ. UGNEET ಆಯುಷ್ ಆಪ್ಷನ್ಸ್ ಎಂಟ್ರಿಗೆ ಅ.12 ಕೊನೆ ದಿನ
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ ಪೂರ್ವ (UGNEET) 2026ಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ ದಾಖಲಾತಿಗೆ ನಿಗದಿತ ದಿನಾಂಕಗೊಳಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ-ಸ್ನಾತಕೋತ್ತರ (PGCET) 2026ಕ್ಕೆ ಸಂಬಂಧಿಸಿದಂತೆ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ಆಗಿದೆ. ಅಭ್ಯರ್ಥಿಗಳಿಗೆ ಶುಲ್ಕ ಪಾವತಿಗೆ ಅಕ್ಟೋಬರ್ 9ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಶುಲ್ಕ ಪಾವತಿ ನಂತರ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅ.11ರವರೆಗೆ ಅವಕಾಶ ನೀಡಲಾಗಿದೆ. ಅ.10ರಂದು ಸಾರ್ವತ್ರಿಕ ರಜೆ ಇರುವುದನ್ನು ಗಮನಿಸುವಂತೆ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆ, ಮನವಿ ಹಿನ್ನೆಲೆಯಲ್ಲಿ ಶುಲ್ಕ ಪಾವತಿ ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದರು.

UGNEET ಅಭ್ಯರ್ಥಿಗಳಿಗೆ ಅಕ್ಟೋಬರ್ 12 ಕೊನೆ ದಿನ
UGNEET-26ಗೆ ಸಂಬಂಧಿಸಿದಂತೆ ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸ್ ಗಳ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಆಪ್ಷನ್ಸ್ ದಾಖಲಿಸಲು ಅಕ್ಟೋಬರ್ 7ರಂದು ಮಧ್ಯಾಹ್ಬ 2 ಗಂಟೆಯಿಂದ ಅಕ್ಟೋಬರ್ 12ರಂದು ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ.
ಯುಜಿ ನೀಟ್ ರಾಂಕ್ ಇರುವ ಅರ್ಹರು ಆಪ್ಷನ್ಸ್ ದಾಖಲಿಸಬಹುದು. ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆದಿರುವ ಹಾಗೂ 3ನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿರುವವರು ಆಯುಷ್ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಕಾಲೇಜು ಪ್ರವೇಶ ಖಚಿತಪಡಿಸಿಕೊಳ್ಳಿ..
ಈಗಾಗಲೇ ಅರ್ಜಿ ಸಲ್ಲಿಸಿ, ವೆರಿಫಿಕೇಷನ್ ಸ್ಲಿಪ್ ಹೊಂದಿರುವ ಅಭ್ಯರ್ಥಿಗಳು ಮಾತ್ರ ಆಪ್ಷನ್ಸ್ ದಾಖಲಿಸಬಹುದು. ಸೀಟು ಹಂಚಿಕೆಯಾಗಿ ಈಗಾಗಲೇ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿ ದಾಖಲೆ ಪಡೆಯುವುದನ್ನು ಖಾತರಿಪಡಿಸಿಕೊಂಡ ನಂತರವೇ ಆಪ್ಷನ್ಸ್ ದಾಖಲಿಸಬೇಕು.
ಆಪ್ಷನ್ಸ್ ದಾಖಲಿಸಿ, ಸೀಟು ಹಂಚಿಕೆ ನಂತರ ದಾಖಲೆ ಇಲ್ಲದೆ ಪರದಾಡಬೇಡಿ. ಒಮ್ಮೆ ಆಯುಷ್ ಸೀಟು ಹಂಚಿಕೆ ನಂತರ ಹಿಂದಿನ ಸೀಟು ತನ್ನಿಂದಾನೆ ರದ್ದಾಗಲಿದೆ. ಹೆಚ್ಚಿನ ಮಾಹಿತಿಗೆ ನೀವು ಕನಾ್ಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/indexnew ಗಮನಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
