KEA: ಸೀಟು ಹಂಚಿಕೆಯಾದ 774 ಮಂದಿಗೆ ಕ್ವಿಟ್ ಆಯ್ಕೆ ಅವಕಾಶ ಕೊಟ್ಟ ಕೆಇಎ...UGNEET 2025
ಬೆಂಗಳೂರು, ಸೆಪ್ಟಂಬರ್ 22: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ ಪೂರ್ವ (UGNEET 2025) ಎಂಸಿಸಿ ನಡೆಸಿದ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ 774 ಮಂದಿಗೆ ಕ್ವಿಟ್ ಆಯ್ಕೆ ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹೇಳುವಂತೆ ಸೀಟು ಬಿಟ್ಟು ಹೋಗುವವರಿಗೆ ಅವಕಾಶ ನೀಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎರಡನೇ ಸುತ್ತಿನಲ್ಲೂ ವೈದ್ಯಕೀಯ ಕೋರ್ಸ್ ಸೀಟು ಹಂಚಿಕೆ ಮಾಡಿದೆ. ಅಂತಹವರಿಗೆ ಉಚಿತವಾಗಿ ಹೊರ ಹೋಗುವುದಕ್ಕೆ Quit Option ಅನ್ನು ಸಹ ನೀಡಿದೆ. ಅಖಿಲ ಭಾರತ ಮಟ್ಟದ ಕೋಟಾದ ಸೀಟಿಗೆ ಪ್ರವೇಶ ಪಡೆಯುವವರು ಕೆಇಎ ಸೀಟನ್ನು ಬಿಟ್ಟು ಹೊರ ಹೋಗುವುದಕ್ಕೆ ಸೆಪ್ಟಂಬರ್ 22ರಂದು ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ.

ಅಷ್ಟು ಮಾತ್ರವಲ್ಲದೇ ಸೀಟು ಬಿಟ್ಟು ಹೋಗುವವರ ಅನುಕೂಲಕ್ಕಾಗಿ ಪರೀಕ್ಷಾ ಪ್ರಾಧಿಕಾರವು ತನ್ನಲ್ಲಿ ಪಾವತಿಸಿದ್ದ ಶುಲ್ಕ/ಕಾಷನ್ ಡೆಪಾಸಿಟ್ ಅನ್ನು ಕೂಡ ಆದಷ್ಟು ಬೇಗ ಹಿಂದಿರುಗಿಸುವ ಕೆಲಸವನ್ನೂ ಮಾಡುತ್ತದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಹೇಳಿದ್ದಾರೆ.
ಅಭ್ಯರ್ಥಿಗಳು ಸೀಟು ಬಿಟ್ಟು ಹೋದ ನಂತರ ಉಳಿಯುವ ಸೀಟುಗಳನ್ನು 2ನೇ ಸುತ್ತಿನ ಫಲಿತಾಂಶಕ್ಕೆ ಪರಿಗಣಿಸಿ ಪುನಃ ಮರು ಫಲಿತಾಂಶವನ್ನು ಸೆಪ್ಟಂಬರ್ 23ರಂದು ಬೆಳಿಗ್ಗೆ 11ಗಂಟೆ ನಂತರ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಬಳಿಕ ಸೆಪ್ಟಂಬರ್ 26ರೊಳಗೆ ಶುಲ್ಕ ಪಾವತಿಸಿ, ಸೀಟು ಖಾತರಿ ಸೀಟು ಡೌನ್‌ಲೋಡ್ ಮಾಡಿಕೊಂಡು, ಸೆಪ್ಟಂಬರ್ 28ರೊಳಗೆ ವರದಿ ಮಾಡಿಕೊಳ್ಳಬೇಕೆಂದು ಅವರು ಸೋಮವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಅಭ್ಯರ್ಥಿಗಳು ಗಮನಿಸಿ
ಗಮನಿಸಬೇಕಾದ ಅಂಶವೆಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಮೊದಲ ಸುತ್ತಿನಲ್ಲಿ ಹಂಚಿಕೆಯಾದ ವೈದ್ಯಕೀಯ ಸೀಟಿಗೆ ಛಾಯ್ಸ್-1 ನೀಡಿ ಕಾಲೇಜಿಗೆ ವರದಿ ಮಾಡಿಕೊಂಡಿರುವ ಅಭ್ಯರ್ಥಿಗಳು ಇತರೆ ಕಾರಣಗಳಿಂದ ಪ್ರಾಧಿಕಾರದ ಸೀಟನ್ನು ರದ್ದು ಪಡಿಸಿಕೊಳ್ಳಲು ಇಚ್ಚಿಸಿದಲ್ಲಿ ಈಗಾಗಲೇ ರದ್ದುಪಡಿಸಿಕೊಳ್ಳಬಹುದಾಗಿತ್ತು. ಆದರೂ ಅಂತಹ ಅಭ್ಯರ್ಥಿಗಳು ರದ್ದು ಪಡಿಸಿಕೊಳ್ಳಬೇಕಾದಲ್ಲಿ ತಕ್ಷಣವೇ ಪ್ರಾಧಿಕಾರದಲ್ಲಿ ಖುದ್ದಾಗಿ ಬಂದು ಎಲ್ಲ ಅಗತ್ಯ ದಾಖಲೆಗಳನ್ನು ನೀಡಿ ರದ್ದು ಪಡಿಸಿಕೊಳ್ಳಲು ಸೂಚಿಸಿದೆ.












Click it and Unblock the Notifications