ಬೆಂಗಳೂರು ಎಟಿಎಂ ದಾಳಿಗೆ 2 ವರ್ಷ, ಇನ್ನೂ ಸಿಕ್ಕಿಲ್ಲ ಆರೋಪಿ
ಬೆಂಗಳೂರು, ನವೆಂಬರ್ 19 : 2013ರ ನವೆಂಬರ್ 19ರಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಂದು ಎಟಿಎಂ ದಾಳಿಗೆ ಎರಡು ವರ್ಷ ತುಂಬಿದೆ. ಆದರೆ, ಆರೋಪಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್‌ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ 2013ರ ನ.19ರಂದು ಬೆಳಗ್ಗೆ 7.10ರ ಸುಮಾರಿಗೆ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಅವರು ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿದ್ದಾರೆ. [ಎಟಿಎಂ ದಾಳಿಗೆ ಒಂದು ವರ್ಷ]

ಇಂದು ದಾಳಿಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಚೇತರಿಸಿಕೊಂಡಿದ್ದು, ಬ್ಯಾಂಕಿನಲ್ಲಿ ಕೆಲಸ ಮುಂದುವರೆಸಿದ್ದಾರೆ. ಆದರೆ, ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಯ ಕುರಿತು ಇದುವರೆಗೂ ಸುಳಿವು ಪತ್ತೆಯಾಗಿಲ್ಲ. ಎರಡು ವರ್ಷಗಳು ಕಳೆದರೂ ಆತನ ಬಂಧನವಾಗಿಲ್ಲ. ಆರೋಪಿ ಬದುಕಿದ್ದಾನೆಯೇ? ಎಂಬುದೇ ಇನ್ನೂ ತಿಳಿಯುತ್ತಿಲ್ಲ. [ಘಟನೆ ಬಗ್ಗೆ ಜ್ಯೋತಿ ಉದಯ್ ಹೇಳಿದ್ದೇನು?]
10 ಲಕ್ಷ ಬಹುಮಾನ : ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ. ದಾಳಿ ನಡೆದು ಎರಡು ವರ್ಷಗಳು ಕಳೆದರೂ ಆರೋಪಿಯ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.

ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆದ ಬಳಿಕ ಪೊಲೀಸರು ಎಟಿಎಂಗಳಲ್ಲಿ ಜನರ ಸುರಕ್ಷತೆಗಾಗಿ ನೀಡಿರುವ ಮಾರ್ಗಸೂಚಿ ಎಲ್ಲಾ ಎಟಿಎಂಗಳಲ್ಲೂ ಪಾಲನೆಯಾಗುತ್ತಿಲ್ಲ. ಇಂದಿಗೂ ಹಲವು ಎಟಿಎಂಗಳಲ್ಲಿ ಸೈರನ್, ಸಿಸಿಟಿವಿ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳಿಲ್ಲ.












Click it and Unblock the Notifications