ಈಶಾನ್ಯ ಭಾರತ ಮೂಲದ ಇಬ್ಬರಿಗೆ ಚಿತ್ರ ಹಿಂಸೆ ನೀಡಿದ್ರಾ ಹೆಣ್ಣೂರು ಪೊಲೀಸ್ರು?
ಬೆಂಗಳೂರು, ಏಪ್ರಿಲ್ 23: ಹಳೇ ಏರ್ಪೋರ್ಟ್ ರೋಡ್ ನ ಪ್ರತಿಷ್ಟಿತ ಹೋಟೆಲ್ ನಲ್ಲಿ ಕೆಲಸ ಮಾಡುವ ಈಶಾನ್ಯ ಭಾರತ ಮೂಲದ ಇಬ್ಬರಿಗೆ ಹೆಣ್ಣೂರು ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Recommended Video
ಔಷಧಿ ಮತ್ತು ದಿನ ಬಳಕೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮುಂದಾಗಿದ್ದ ಇಬ್ಬರನ್ನು ಹೆಣ್ಣೂರು ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು 15 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರಂತೆ. ಹಾಗಂತ ಆ ಇಬ್ಬರು ಯುವಕರು ದೂರಿದ್ದಾರೆ.
ಸಾಲದಕ್ಕೆ, ''ನಮ್ಮಿಬ್ಬರನ್ನು ಸ್ಥಳೀಯರು 'ಕೊರೊನಾ ವೈರಸ್' ಎಂದು ಹೀಯಾಳಿಸಿದ್ದಾರೆ'' ಎಂದೂ ಆ ಯುವಕರು ಹೇಳಿದ್ದಾರೆ. ಅಸಲಿಗೆ ಏನಿದು ಪ್ರಕರಣ ಅಂತೀರಾ.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ಇಬ್ಬರು ಯುವಕರ ಪರಿಚಯ..
ಕಳೆದ ಒಂದು ವರ್ಷದಿಂದ ಡಾರ್ಜಿಲಿಂಗ್ ಮೂಲದ ಸಮ್ರಾಟ್ ಪ್ರಧಾನ್ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಆತನ ಸಂಬಂಧಿ ನಾಗಾಲ್ಯಾಂಡ್ ಮೂಲದ ಅಮಿತ್ ಖರ್ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮಿತ್ ಖರ್ ಕಣ್ಣಿಗೆ ಇನ್ಫೆಕ್ಷನ್ ಆಗಿದ್ದು, ಔಷಧಿಯನ್ನು ಪಡೆಯಲು ಇಬ್ರೂ ಬೈಕ್ ನಲ್ಲಿ ರಸ್ತೆಗಿಳಿದಿದ್ದರು.

ಅಷ್ಟಕ್ಕೂ, ನಡೆದಿದ್ದೇನು.?
ಸೋಮವಾರ ಬೆಳಗ್ಗೆ 7.30 ರ ಸುಮಾರಿಗೆ ಔಷಧಿ ಪಡೆಯಲು ಅಮಿತ್ ಖರ್ ಮತ್ತು ಸಮ್ರಾಟ್ ಪ್ರಧಾನ್ ಹೊರಟಾಗ, ಅವರ ಬೈಕ್ ಅನ್ನು ಅಡ್ಡಗಟ್ಟಿ ಪಾಸ್ ತೋರಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆಗ ಪಾಸ್ ಇಲ್ಲ ಎಂದು ಅವರಿಬ್ಬರು ಹೇಳಿದ್ದಾರೆ. ಕೂಡಲೆ, ''ಬೇರೆಯವರ ಬಳಿಯೂ ಪಾಸ್ ಇಲ್ಲ'' ಎಂದು ಆ ಇಬ್ಬರು ಯುವಕರು ಬೆಟ್ಟು ಮಾಡಿ ತೋರಿಸಿ, ವಾಹನ ಚಲಾಯಿಸುತ್ತಿದ್ದ ಓರ್ವ ಯುವತಿಯನ್ನೂ ನಿಲ್ಲಿಸಿದ್ದಾರೆ. ಈ ವೇಳೆ ''ಸ್ಥಳೀಯರು ಪೊಲೀಸರಿಗೆ ಸಪೋರ್ಟ್ ಮಾಡಲು ಶುರು ಮಾಡಿದರು'' ಎಂದಿದ್ದಾರೆ ಆ ಇಬ್ಬರು ಯುವಕರು.

ಗಲಾಟೆ ಶುರು
''ಪೊಲೀಸ್ ಪರ ನಿಂತ ಪಬ್ಲಿಕ್ ಪಾಸ್ ತೋರಿಸಲು ನಮ್ಮ ಮೇಲೆ ಒತ್ತಡ ಹೇರಿದರು. ಕೆಲ ಸ್ಥಳೀಯರು ನಮ್ಮನ್ನ 'ಕೊರೊನಾ ವೈರಸ್' ಅಂತ ಕರೆಯಲು ಶುರು ಮಾಡಿದರು. ಮಾಸ್ಕ್ ಇಲ್ಲದೆ ಎಷ್ಟೋ ಜನ ಹೊರಗೆ ಬಂದಿದ್ದಾರೆ ಅಂತ ನಾವು ಹೇಳಿದಾಗ, ಕಾನ್ಸ್ ಸ್ಟೇಬಲ್ ಕನ್ನಡದಲ್ಲಿ ನಿಂದಿಸಿದರು. ಜೊತೆಗೆ ಅಮಿತ್ ಮೇಲೆ ಹಲ್ಲೆ ಮಾಡಿದರು. ಕೂಡಲೆ ನಾನು ಮೊಬೈಲ್ ಫೋನ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದೆ. ಆಗ ಸ್ಥಳೀಯರು ನನ್ನನ್ನ ಆಟೋದಲ್ಲಿ ಹೆಣ್ಣೂರು ಪೊಲೀಸ್ ಠಾಣೆಗೆ ಕರೆತಂದರು. ನಾನು ಅಲ್ಲಿಗೆ ಬರುವಷ್ಟರಲ್ಲಿ ಅಮಿತ್ ನನ್ನೂ ರಾಣೆಗೆ ಕರೆತರಲಾಗಿತ್ತು. ಅವನನ್ನು ಪೊಲೀಸರು ಥಳಿಸಿದ್ದರು'' ಎಂದು ಸಮ್ರಾಟ್ ಪ್ರಧಾನ್ ಹೇಳಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ
''ವಿಡಿಯೋ ಡಿಲೀಟ್ ಮಾಡಬಾರದು ಅಂತ ನಾನು ಅಂದುಕೊಂಡಿದ್ದೆ. ಆದ್ರೆ, ನಮಗೆ ಅವರು ಕೊಟ್ಟ ಚಿತ್ರಹಿಂಸೆ ತಡೆಯಲಾಗಲಿಲ್ಲ. ಕೊನೆಗೆ ಒತ್ತಾಯಪೂರ್ವಕವಾಗಿ ವಿಡಿಯೋ ಡಿಲೀಟ್ ಮಾಡಿಸಿದರು. ಡಿಲೀಟ್ ಆದ್ಮೇಲೆ ನಮಗೆ ಊಟ ಕೊಟ್ಟರು. ಲಾಕ್ ಅಪ್ ಒಳಗೆ ನಮ್ಮನ್ನ ದಬ್ಬಿದರು. ಮಂಗಳವಾರ ಬೆಳಗ್ಗೆ 11.30 ರ ಸುಮಾರಿಗೆ ನಮ್ಮನ್ನ ಬಿಡುಗಡೆ ಮಾಡಿದರು. ನಮ್ಮ ಬೈಕ್ ಅನ್ನು ಅವರು ವಶಪಡಿಸಿಕೊಂಡಿದ್ದಾರೆ. ಮೇ 3 ರ ಬಳಿಕ ಬಿಡಿಸಿಕೊಳ್ಳುವಂತೆ ಹೇಳಿದ್ದಾರೆ. ಚಿತ್ರಹಿಂಸೆ ಅನುಭವಿಸಿದ ಬಳಿಕ ಮನೆ ತಲುಪಲು 5 ಕಿ.ಮಿ ನಡೆದುಕೊಂಡು ಹೋದ್ವಿ'' ಎಂದಿದ್ದಾರೆ ಸಮ್ರಾಟ್ ಪ್ರಧಾನ್.

ಡಿಸಿಪಿ ಹೇಳುವುದೇನು.?
ಘಟನೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಪೂರ್ವ ವಿಭಾಗದ ಡಿ.ಸಿ.ಪಿ ಶರಣಪ್ಪ, ''ಪೊಲೀಸ್ ಸ್ಟೇಷನ್ ಒಳಗೆ ಯಾರಿಗೂ ಹಿಂಸೆ ಮಾಡಿಲ್ಲ. ಪಾಸ್ ಇಲ್ಲದೆ ರಸ್ತೆಯಲ್ಲಿ ಆ ಇಬ್ಬರು ಯುವಕರು ಸೀನ್ ಕ್ರಿಯೇಟ್ ಮಾಡಿದ್ದಾರೆ. ಬಳಿಕ ಸ್ಥಳೀಯರು ಆ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯನ್ನು ತಪ್ಪಿಸಲು ಯುವಕರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ'' ಎಂದು ತಿಳಿಸಿದ್ದಾರೆ.












Click it and Unblock the Notifications