ಹೊಂಗಸಂದ್ರದಿಂದ ದಂಪತಿಗಳು ಪರಾರಿ; ಕಡ್ಡಾಯ ಕ್ವಾರಂಟೈನ್!
ಬೆಂಗಳೂರು, ಮೇ 01 : ಸಂಪೂರ್ಣ ಸೀಲ್ ಡೌನ್ ಆಗಿರುವ ಹೊಂಗಸಂದ್ರ ವಾರ್ಡ್‌ನಿಂದ ಇಬ್ಬರು ದಂಪತಿಗಳು ಬೈಕ್ ಮೂಲಕ ಪರಾರಿಯಾಗಿದ್ದಾರೆ. ಕೊರೊನಾ ಹರಡುವ ಭೀತಿಯಿಂದ ಪರಾರಿಯಾಗಿದ್ದವರನ್ನು ಹುಡುಕಿ ಕಡ್ಡಾಯ ಕ್ವಾರಂಟೈನ್‌ಗೆ ಹಾಕಲಾಗಿದೆ.
ಬಿಹಾರ ಮೂಲದ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದ ಬಳಿಕ ಹೊಂಗಸಂದ್ರ ವಾರ್ಡ್‌ಅನ್ನು 'ಕಂಟೈನ್ಮೆಂಟ್ ಝೋನ್' ಎಂದು ಘೋಷಣೆ ಮಾಡಲಾಗಿದೆ. ಪ್ರದೇಶ ಸಂಪೂರ್ಣ ಸೀಲ್ ಡೌನ್ ಆಗಿದ್ದು, ಅಗತ್ಯ ವಸ್ತುಗಳ ಖರೀದಿಗೂ ಜನರು ಹೊರಬರುವಂತಿಲ್ಲ.
ಎರಡು ಬೈಕ್‌ಗಳಲ್ಲಿ ಇಬ್ಬರು ದಂಪತಿಗಳು ಸುಮಾರು 100 ಕಿ. ಮೀ. ದೂರದಲ್ಲಿರುವ ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರಿನಿಂದ ಬಂದಿದ್ದಾರೆ ಎಂದು ತಿಳಿದ ಸ್ಥಳೀಯ ಆಡಳಿತ ನಾಲ್ವರಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಿ, ಕಡ್ಡಾಯ ಕ್ವಾರಂಟೈನ್‌ಗೆ ಹಾಕಿದೆ.
ನಾಲ್ವರ ಪರೀಕ್ಷೆಯ ವರದಿಯೂ ನೆಗೆಟೀವ್ ಬಂದಿದೆ. ಆದರೆ, ಬೆಂಗಳೂರಿನ ಅದರಲ್ಲೂ ಸೀಲ್ ಡೌನ್ ಪ್ರದೇಶದಿಂದ ಬಂದ ಇವರು ಗ್ರಾಮದಲ್ಲಿ ಆತಂಕ ಸೃಷ್ಟಿ ಮಾಡಿದ್ದರು. ನಾಲ್ವರ ವಿರುದ್ಧವೂ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ.

ಕಂಟೈನ್ಮೆಂಟ್ ಝೋನ್
ಒಮ್ಮೆ 'ಕಂಟೈನ್ಮೆಂಟ್ ಝೋನ್' ಎಂದು ಘೋಷಣೆಯಾದರೆ ಇಲ್ಲಿಂದ ಯಾರೂ ಹೊರ ಹೋಗುವಂತಿಲ್ಲ, ಒಳ ಬರುವಂತಿಲ್ಲ. ತಡರಾತ್ರಿ ಇವರು ಪೊಲೀಸರು ಕಣ್ಣು ತಪ್ಪಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕೊರೊನಾ ಸೋಂಕು ತಗುಲುವ ಭೀತಿಯಿಂದ ಅಲ್ಲಿಂದ ಓಡಿ ಬಂದೆವು ಎಂದು ದಂಪತಿಗಳು ಹೇಳಿದ್ದಾರೆ.

ಇತರರಿಗೂ ಹಬ್ಬುವ ಸಾಧ್ಯತೆ
'ಕಂಟೈನ್ಮೆಂಟ್ ಝೋನ್'ನಿಂದ ಹೊರಬರುವ ಅಗತ್ಯವೇ ಇಲ್ಲ. ದಂಪತಿಗಳ ಬೇಜವಾಬ್ದಾರಿ ನಡೆಯಿಂದಾಗಿ ಇತರರಿಗೆ ಸಹ ಸೋಂಕು ಹರಡುವ ಅಪಾಯವಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಓ ಹೇಳಿದ್ದಾರೆ. ಆಶಾ ಕಾರ್ಯಕರ್ತೆಯಿಂದ ಇವರು ಬೆಂಗಳೂರಿನಿಂದ ಓಡಿ ಬಂದಿರುವ ವಿಚಾರ ಬೆಳಕಿಗೆ ಬಂದಿದ್ದು, ಈಗ ದೂರು ದಾಖಲಾಗಿದೆ.

ಬಿಬಿಎಂಪಿ ವ್ಯವಸ್ಥೆ ಮಾಡಿದೆ
ಹೊಂಗಸಂದ್ರ ವಾರ್ಡ್ ಅನ್ನು 'ಕಂಟೈನ್ಮೆಂಟ್ ಝೋನ್' ಎಂದು ಬಿಬಿಎಂಪಿ ಘೋಷಣೆ ಮಾಡಿದೆ. ಜನರು ಅಗತ್ಯ ವಸ್ತುಗಳನ್ನು ತರಲು ಸಹ ಹೊರಬರಬಾರದು ಎಂದು ಸೂಚಿಸಲಾಗಿದ್ದು, ಆಹಾರದ ಕಿಟ್‌ಗಳನ್ನು ಮನೆ-ಮನೆಗೆ ತಲುಪಿಸಲಾಗುತ್ತಿದೆ. ಆದರೂ, ದಂಪತಿಗಳು ಇಲ್ಲಿಂದ ಪರಾರಿಯಾಗಿ ಆತಂಕ ಮೂಡಿಸಿದ್ದಾರೆ.

ಕಡ್ಡಾಯ ಕ್ವಾರಂಟೈನ್, ಕೇಸು
'ಕಂಟೈನ್ಮೆಂಟ್ ಝೋನ್'ನಿಂದ ಯಾರಾದರೂ ಪರಾರಿಯಾದರೆ ಐಪಿಸಿ ಸೆಕ್ಷನ್ 188, 269, 270, 271 ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ. ಅವರನ್ನು ಕಡ್ಡಾಯ ಕ್ವಾರಂಟೈನ್‌ಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.












Click it and Unblock the Notifications