ರಾಜ್ಯ ಸರ್ಕಾರದಿಂದ ಸಿಗದ ಸ್ಪಂದನೆ; ಮತ್ತೆ ಮುಷ್ಕರಕ್ಕೆ ಸಿದ್ಧರಾದ ನಾಲ್ಕು ನಿಗಮಗಳ ಸಾರಿಗೆ ನೌಕರರು
ಇತ್ತೀಚೆಗಷ್ಟೇ ಹಲ;ವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪ್ರತಿಬಟನೆ ನಡೆಸಿದ್ದ ಸಾರಿಗೆ ನೌಕರರು ಮತ್ತೆ ಆಂದೋಲನ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ. 06: ಸಾರಿಗೆ ನೌಕರರ ಮುಷ್ಕರಕ್ಕೆ ಕೊನೆಯೆ ಇಲ್ಲದಂತಾಗಿದೆ. ತಮ್ಮ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುವುದು, ಮತ್ತೆ ಆಶ್ವಾಸನೆಗೆ ಬಿದ್ದು ಧರಣಿ ಕೈಬಿಟ್ಟು ಕೆಲಸ ಮಾಡುವುದು, ಮತ್ತೆ ಸಮಸ್ಯೆಗಳಾದಾಗ ಪ್ರತಿಭಟನೆ ನಡೆಸುವುದು ನಡೆಯುತ್ತಲೇ ಇದೆ.
ಈಗ ವೇತನ ಪರಿಷ್ಕರಣೆ ಹಾಗೂ ಇತರೆ 15 ಬೇಡಿಕೆಗಳ ಕುರಿತು ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನಾಲ್ಕು ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಮತ್ತು ಕೆಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಅಲ್ಪಾವಧಿಯಲ್ಲಿ ಮುಷ್ಕರ ನಡೆಸಲಿದ್ದಾರೆ.
ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಶನ್ ಬ್ಯಾನರ್ ಅಡಿಯಲ್ಲಿ ಇತರ ಐದು ಒಕ್ಕೂಟಗಳನ್ನು ಬೆಂಬಲಿಸಿ ಜಂಟಿ ಕ್ರಿಯಾ ಸಮಿತಿಯಡಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ವೇತನ ಪರಿಷ್ಕರಣೆ ಸೇರಿದಂತೆ ತಮ್ಮ 16 ಬೇಡಿಕೆಗಳನ್ನು ಈಡೇರಿಸುವಂತೆ ಫೆಬ್ರವರಿ 4 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈ ಸಂಘಟನೆ ಮತ್ತೊಮ್ಮೆ ಪತ್ರ ಬರೆದಿದೆ.

ರಾಜ್ಯವು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾದರೆ, ಚುನಾವಣೆ ಮುಗಿಯುವವರೆಗೆ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಸಾರಿಗೆ ಸಚಿವ ಬಿ ಶ್ರೀರಾಮುಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಮ್ಮ ಸಭೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನಿಡಿದ್ದರು. ಆದರೆ, ಸಭೆ ನಡೆದಿಲ್ಲ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಶನ್ (ಎಐಟಿಯುಸಿ ಸಂಯೋಜಿತ) ಪ್ರಧಾನ ವಿಭಾಗದ ವಿಜಯಭಾಸ್ಕರ್ ಡಿ ಎ ಕಿಡಿಕಾರಿದ್ದಾರೆ.
ಜನವರಿ 24 ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ರಾಜ್ಯಾದಂತ್ಯ ಎಲ್ಲ ನಿಗಮಗಳ ವಿಭಾಗೀಯ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಬೆಳಗ್ಗೆ 11 ರಿಂದ ಸಂಜೆ 5.30ರವರೆಗೆ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳ ವ್ಯಾಪ್ತಿಯ ವಿಭಾಗೀಯ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಆದರೆ ಈ ಧರಣಿ ಸತ್ಯಗ್ರಹದಿಂದಾಗಿ ಯಾವುದೇ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರಲಿಲ್ಲ.












Click it and Unblock the Notifications