ವಾಹನಗಳಲ್ಲಿ ಅಕ್ರಮವಾಗಿ ಜಾಹೀರಾತು ಹಾಕಬೇಡಿ, ದಂಡ ಬೀಳುತ್ತೆ
ಬೆಂಗಳೂರು, ಅಕ್ಟೋಬರ್ 8: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್, ನಾಮಫಲಕಗಳ ವಿರುದ್ಧ ಸಮರ ಸಾರಿತ್ತು. ಇದೀಗ ವಾಹನಗಳ ಅಕ್ರಮ ಜಾಹೀರಾತಿಗೂ ಕಡಿವಾಣ ಹಾಕಲು ಸಾರಿಗೆ ಇಲಾಖೆ ಬಿಬಿಎಂಪಿಯೊಂದಿಗೆ ಕೈ ಜೋಡಿಸಿದೆ.
ಬೆಂಗಳೂರನ್ನು ಮತ್ತೆ ಸ್ವಚ್ಛ ನಗರವನ್ನಾಗಿ ಮಾಡಲು ಬಿಬಿಎಂಪಿ ಪಣ ತೊಟ್ಟಿದೆ ಹಾಗಾಗಿ ಒಂದಾದ ಮೇಲೊಂದು ನೂತನ ಕಾರ್ಯಗಳನ್ನು ಆರಂಭಿಸುತ್ತಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅನುಮತಿ ಪಡೆಯದೇ ಜಾಹೀರಾತುಗಳನ್ನು ಪ್ರದರ್ಶಿಸುವ ಸಾರಿಗೆ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಆಟೋ, ಟ್ಯಾಕ್ಸಿಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ಕಡ್ಡಾಯ
ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ರ ನಿಯಮ 127ರ ಪ್ರಕಾರ ಯಾವುದೇ ಸಾರಿಗೆ ವಾಹನ ಅಂದರೆ ಆಟೋ, ಟ್ಯಾಕ್ಸಿ, ಬಸ್, ಕ್ಯಾಬ್ ಗಳಲ್ಲಿ ಜಾಹೀರಾತು ಪ್ರದರ್ಶಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಆದರೆ ಬೆಂಗಳೂರಲ್ಲಿ ಬಹುತೇಕ ಸಾರಿಗೆ ವಾಹನಗಳು ಅನುಮತಿ ಪಡೆಯದೇ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿವೆ.

ಅಕ್ರಮ ಜಾಹಿರಾತು: 5 ಸಾವಿರ ರೂ ದಂಡ
ಸಾರ್ವಜನಿಕ ಸ್ಥಳ ಅಥವಾ ವಾಹನಗಳಲ್ಲಿ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವ ಹಾಗೂ ನಗರದ ಅಂದಕ್ಕೆ ಧಕ್ಕೆ ಉಂಟು ಮಾಡುವ ಜಾಹೀರಾತು, ಬರಹ ಮತ್ತು ಚಿತ್ರಗಳ ಪ್ರದರ್ಶನಕ್ಕೆ ನಿಷೇಧವಿದೆ. ಸಾರಿಗೆ ವಾಹನಗಳಲ್ಲಿ ಸಿನಿಮಾ, ಕಾರ್ಯಕ್ರಮ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಾಹೀರಾತು ಹಾಗೂ ಚಿತ್ರಗಳನ್ನು ಪ್ರದರ್ಶಿಸಬೇಕಾದರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲವಾದರೆ ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಲು ಅವಕಾಶವಿದೆ. ಜತೆಗೆ ನ್ಯಾಯಾಲಯದಲ್ಲಿ 5ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.

ಅನುಮತಿ ಪಡೆದಿರುವ ಸರ್ಕಾರಿ ಬಸ್ ಗಳು
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಗಳ ಹೊರ ಕವಚದಲ್ಲಿ ಜಾಹೀರಾತು ತುಂಬಿರುತ್ತವೆ. ಇದಕ್ಕೆ ನಿಯಮ ಅನ್ವಯವಾಗುವುದಿಲ್ಲವೇ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು ಆದರೆ ಇದು ಸಾರಿಗೆ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಒಂದಾಗಿದೆ. ನಿಯಮದ ಪ್ರಕಾರ ಟೆಂಡರ್ ಆಹ್ವಾನಿಸಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಅಕ್ರಮ ಜಾಹೀರಾತು ತಡೆಗೆ ಎರಡು ವರ್ಷಗಳಿಂದ ನಿರಂತರ ಪ್ರಯತ್ನ
ಸಾರಿಗೆ ಇಲಾಖೆಯು ಅಕ್ರಮ ಜಾಹೀರಾತು ತಡೆಗೆ ನಿರಂತರ ಪ್ರಯತ್ನ ಮಾಡುತ್ತಿದೆ. ಈ ಹಿಂದೆಯೂ ವಾಹನಗಳಲ್ಲಿ ಸಾರಿಗೆ ಇಲಾಖೆಯ ಅನುಮತಿ ಇಲ್ಲದೆ ಜಾಹೀರಾತುಗಳನ್ನು ಪ್ರದರ್ಶಿಸುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತಂದಿದ್ದರೂ ಈ ಕುರಿತು ಜಾಗೃತಿ ಮೂಡಿಸಲಾಗಿತ್ತು. ಆದರೆ ಟ್ಯಾಕ್ಸಿ, ಆಟೋಗಳ ಮೇಲಿನ ಜಾಹೀತಾಉಗಳು ಹಾಗೆಯೇ ಇದೆ. ಆದರೆ ಈ ಬಾರಿ ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಬಹುದು ಎಂದು ಕಾದು ನೋಡಬೇಕಿದೆ.












Click it and Unblock the Notifications