Bengaluru Airport: ಏರ್‌ಪೋರ್ಟ್ ರಸ್ತೆಯಲ್ಲಿ ಫುಲ್ ಸ್ಪೀಡ್ ಹೋಗುವ ಮುನ್ನ ಇರಲಿ ಎಚ್ಚರ!, ಕಾವಲು ಕಾಯಲಿವೆ ಕ್ಯಾಮೆರಾಗಳು
ಬೆಂಗಳೂರು, ಮೇ. 15: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಲಾಂಗ್ ಡ್ರೈವ್ ಹೋಗುವವರು ಅಥವಾ ಫುಲ್ ಸ್ಪೀಡ್‌ನಲ್ಲಿ ರೈಡ್ ಎಂಜಾಯ್ ಮಾಡುವ ಆಸೆಯಿಂದ ಹೋಗುವವರು ಇನ್ನು ಮುಂದೆ ಎಚ್ಚರಿಕೆ ವಹಿಸಬೇಕಿದೆ. ಏಕೆಂದರೆ, ಏರ್‌ಪೋರ್ಟ್ ರೋಡ್‌ನಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಕ್ಯಾಮೆರಾ ಕಣ್ಗಾವಲು ಕಾಯಲಿದೆ.
ಅಂತಾರಾಷ್ಟ್ರೀಯ ವಿಮಾನ ಮೆನಿಲ್ದಾಣದ ರಸ್ತೆಯಲ್ಲಿ ಎಂಟು ಎಐ ಚಾಲಿತ ಸ್ಪೀಡ್ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಬಳ್ಳಾರಿ ರಸ್ತೆಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಅನುಮತಿಸಲಾದ 80 ಕಿಮೀ ವೇಗದ ಮಿತಿಯನ್ನು ಮೀರಿದ ವಾಹನಗಳನ್ನು ಪತ್ತೆಹಚ್ಚಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಕಾರಣ ಜನನಿಬಿಡ ಪ್ರದೇಶದಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸ್ಪೀಡ್ ಟ್ರ್ಯಾಪ್ ಕ್ಯಾಮೆರಾಗಳು ವಾಹನದ ವೇಗವನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಮತ್ತು ಮಿತಿಮೀರಿದ ವೇಗದ ವಾಹನಕ್ಕೆ ದಂಡವನ್ನು ವಿಧಿಸುತ್ತದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ರಸ್ತೆ ಟ್ರಾಫಿಕ್ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ಗಂಟೆಗೆ 80 ಕಿಮೀ ವೇಗದ ಮಿತಿಯೊಂದಿಗೆ ಸ್ಪೀಡ್ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಕಮಿಷನರ್ ಎಂಎನ್ ಅನುಚೇತ್ ನೀಡಿದ ಮಾಹಿತಿಯಂತೆ, ಬೆಂಗಳೂರಿನಲ್ಲಿ ಸುಮಾರು 9 ಪ್ರತಿಶತ ಅಪಘಾತಗಳು ವಿಮಾನ ನಿಲ್ದಾಣದ ರಸ್ತೆಯಲ್ಲಿ ವರದಿಯಾಗುತ್ತಿವೆ. ಬಳ್ಳಾರಿ ರಸ್ತೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆಯು ನಗರದಲ್ಲಿ ಅತಿ ಹೆಚ್ಚು ಅಪಘಾತಕ್ಕೀಡಾಗುವ ಪ್ರದೇಶವಾಗಿದ್ದು, ವಾಹನ ಸವಾರರು ಆಗಾಗ್ಗೆ ವೇಗದ ಮಿತಿಯನ್ನು ಮೀರುತ್ತಾರೆ ಎಂದಿದ್ದಾರೆ.

ಬೆಂಗಳೂರು ಪೊಲೀಸರ ಅಧಿಕೃತ ದಾಖಲೆಯ ಪ್ರಕಾರ, ಅಪಾಯಕಾರಿ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಿದರೆ 1000 ಮತ್ತು ಅತಿವೇಗಕ್ಕೆ 2000 ದಂಡ ವಿಧಿಸಲಾಗುತ್ತದೆ. ಸಂಚಾರ ಪೊಲೀಸ್ ದಾಖಲೆಗಳ ಪ್ರಕಾರ, 2022 ರಲ್ಲಿ 278 ರಿಂದ 2023 ರಲ್ಲಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅಪಘಾತಗಳು 322 ಕ್ಕೆ ಏರಿದೆ. ಈ ವರ್ಷ, ಜನವರಿ ಮತ್ತು ಏಪ್ರಿಲ್ ನಡುವೆ ಈ ಒಂದೇ ರಸ್ತೆಯಲ್ಲಿ 110 ಅಪಘಾತಗಳು ವರದಿಯಾಗಿವೆ.












Click it and Unblock the Notifications