ಬೆಂಗಳೂರಿಗರೇ ರುಚಿರುಚಿಯಾದ ಫಿಶ್ ಫ್ರೈ ತಿನ್ನಬೇಕಾ? ಇಲ್ಲಿದೆ ರಾಜಧಾನಿಯ ಬೆಸ್ಟ್ ಮೀನೂಟದ ಹೋಟೆಲ್‌ಗಳ ಪಟ್ಟಿ
ಬೆಂಗಳೂರು, ಜನವರಿ 18: ಕುಚಲಕ್ಕಿ ಅನ್ನ( Boiled Rice), ಬಿಸಿ ಬಿಸಿ ಮೀನುಸಾರು, ಮೀನು ಫ್ರೈ, ಕ್ರ್ಯಾಬ್ ಮಸಾಲಾ, ಸೀಗಡಿ ಫ್ರೈ ಈ ಹೆಸರುಗಳನ್ನು ಕೇಳುತ್ತಿದ್ದರೇ ಬಾಯಲ್ಲಿ ನೀರು ಬರುತ್ತದೆ. ಎಂತವರನ್ನಾದರೂ ತನ್ನ ರುಚಿಯಿಂದ ಹಿಡಿದಿಟ್ಟುಕೊಳ್ಳುವ ಶಕ್ತಿ ಕರಾವಳಿ ಖಾದ್ಯಗಳಿಗಿದೆ.
ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದು ಬೆಂಗಳೂರಿಗೆ ಬಂದು ಮೀನೂಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ..? ಬೆಂಗಳೂರು ನಗರದಲ್ಲಿದ್ದು ಒಂದೊಳ್ಳೆ ಮೀನೂಟ ಸವಿಯಬೇಕೆಂದುಕೊಳ್ಳುತ್ತಿದ್ದೀರಾ..? ಹಾಗಾದರೆ ಈ ಸ್ಟೋರಿಯನ್ನು ಮಿಸ್ ಮಾಡದೇ ಓದಿ. ಬೆಂಗಳೂರಿನಲ್ಲಿ ಶುಚಿ ರುಚಿಯಾದ ಮೀನೂಟ ನೀಡುವ ಹೋಟೆಲ್‌ಗಳ ಪಟ್ಟಿ ಇಲ್ಲಿದೆ.

1. ಹೋಟೆಲ್ ಫಿಶ್ ಲ್ಯಾಂಡ್ (Hotel Fish Land)
ಬೆಂಗಳೂರಿನ ಅತ್ಯಂತ ಹಳೆಯ ಮೀನೂಟದ ಹೋಟೆಲ್‌ಗಳಲ್ಲಿ ಹೋಟೆಲ್ ಫಿಶ್ ಲ್ಯಾಂಡ್ ಪ್ರಮುಖವಾದದು. ಕರಾವಳಿ ಶೈಲಿಯ ಸಾಂಪ್ರದಾಯಿಕ ಮೀನೂಟ ಹಾಗೂ ಮೀನಿನ ಇತರ ಖಾದ್ಯಗಳು, ವಿವಿಧ ಸೀ ಫುಡ್‌ಗಾಗಿ ಇಲ್ಲಿಗೆ ಮಿಸ್ ಮಾಡದೇ ಭೇಟಿ ನೀಡಿ. ಅತೀ ವೈಭವ ಇಲ್ಲದ ಈ ಹೋಟೆಲ್‌ನಲ್ಲಿ ವಾತಾವರಣ ಸಾಮಾನ್ಯ ಹೋಟೆಲ್‌ನಂತಿದ್ದು ರುಚಿಗೆ ಮಾತ್ರ ಬೆಸ್ಟ್ ಆಗಿದೆ. ಕುಟುಂಬಸ್ಥರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಒಂದೊಳ್ಳೆ ಮೀನೂಟ ಸವಿಯಲು ಇದು ಸೂಕ್ತವಾದ ಸ್ಥಳ.
ಇಲ್ಲಿ ಕೊಚಲಕ್ಕಿ ಅನ್ನ ಹಾಗೂ ಮೀನು ಸಾಂಬಾರ್ ಬೆಸ್ಟ್ ಕಾಂಬಿನೇಷನ್ ಆಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹೋಟೆಲ್ ಫಿಶ್ ಲ್ಯಾಂಡ್ ಹೆಸರಿನ ಹೋಟೆಲ್‌ಗಳನ್ನು ನೀವು ನೋಡಬಹುದು. ಇಲ್ಲಿಗೆ ಭೇಟಿ ನೀಡಿದಾಗ ಸೀಗಡಿ ಬಿರಿಯಾನಿ, ಕ್ರ್ಯಾಬ್ ಚಿಲ್ಲಿ, ಫಿಶ್ ಫ್ರೈ, ರವಾ ಫ್ರೈಡ್ ಫಿಶ್‌ಗಳನ್ನು ಮಿಸ್ ಮಾಡದೇ ಟ್ರೈ ಮಾಡಿ.

2. ಸನಡಿಗೆ ಹೋಟೆಲ್ (Sanadige)
ಒಂದೊಳ್ಳೆ ವಾತಾವರಣದಲ್ಲಿ ಮೀನೂಟ ಸವಿಯಬೇಕೆಂದು ಕೊಂಡವರು ಬೆಂಗಳೂರಿನ ವಿವಿಧ ಭಾಗದಲ್ಲಿರುವ ಸನಡಿಗೆ ಹೋಟೆಲ್‌ಗೆ ಭೇಟಿ ನೀಡಿ. ಆಹ್ಲಾದಕರ ವಾತಾವರಣದೊಂದಿಗೆ ರುಚಿರುಚಿಯಾದ ಸೀಫುಡ್ ಸವಿಯಲು ಇದೊಂದು ಸೂಕ್ತ ಸ್ಥಳ. ಇಲ್ಲಿನ ವಾತಾವರಣವೇ ನಿಮ್ಮನ್ನು ಮೊದಲು ಸೆಳೆಯುತ್ತದೆ. ಬಳಿಕ ಇಲ್ಲಿನ ಆಹಾರ ಬಡಿಸುವ ಪದ್ಧತಿ ನಿಮ್ಮನ್ನು ಆಕರ್ಷಿಸುವುದಂತೂ ಗ್ಯಾರಂಟಿ.
ಮಂಗಳೂರು, ಉಡುಪಿಯ ಕರಾವಳಿ ಊಟದಿಂದ ಹಿಡಿದು, ಗೋವಾ, ಕೇರಳ, ಮಹರಾಷ್ಟ್ರ ಶೈಲಿಯ ಮೀನೂಟ ಹಾಗೂ ಮೀನಿನ ವಿವಿಧ ಖಾದ್ಯಗಳು, ಸೀಗಡಿ, ಏಡಿಯ ಖಾದ್ಯಗಳು ಇಲ್ಲಿ ಲಭ್ಯವಿದೆ. ಇಲ್ಲಿನ ಆಹಾರಗಳ ರುಚಿ ನಿಮ್ಮ ಹಣಕ್ಕೆ ನ್ಯಾಯ ಒದಗಿಸಿಕೊಡುತ್ತದೆ. ಮರವಾಯಿ ಸುಕ್ಕ, ಕ್ರ್ಯಾಬ್, ಜಂಬೋ ಪಾಪ್‌ಲ್ಲೇಟ್, ಸೀಗಡಿ ಟಿಕ್ಕಾ ಹಾಗೂ ಕಾಣೆ ಮೀನಿನ ಫಿಶ್ ಫ್ರೈಯನ್ನು ಇಲ್ಲಿ ಮಿಸ್ ಮಾಡದೇ ಟ್ರೈ ಮಾಡಿ.

3. ಹೋಟೆಲ್ ವೆಮ್ಬನದ್( Vembanad)
ಬೆಂಗಳೂರಿನ ದೊಮ್ಮಲೂರಿನ ಕೃಷ್ಣಾ ರೆಡ್ಡಿ ಲೇಔಟ್‌ನಲ್ಲಿರುವ ಹೋಟೆಲ್ ವೆಮ್ಬನದ್ ಸೀ ಫುಡ್ ಪ್ರಿಯರಿಗೆ ಸೂಕ್ತವಾದ ಸ್ಥಳ. ಇಲ್ಲಿನ ವಾತಾವರಣವೇ ಹೈಲೆಟ್ ಆಗಿದ್ದು, ಕುಟುಂಬಸ್ಥರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಮೀನೂಟ ಸವಿಯುತ್ತಾ ಸಮಯ ಕಳೆಯಲು ಇದೊಂದು ಸೂಕ್ತವಾದ ಸ್ಥಳ. ಬೆಂಗಳೂರಿನ ಲಕ್ಸುರಿ ಮೀನೂಟದ ಹೋಟೆಲ್‌ಗಳಲ್ಲಿ ಇದು ಪ್ರಮುಖವಾಗಿದೆ. ಕರಾವಳಿ ಆಹಾರಗಳಲ್ಲದೇ ದೇಶದ ವಿವಿಧ ಕಡೆಯ ವಿವಿಧ ರೀತಿಯ ಸೀಫುಟ್‌ಗಳನ್ನು ಇಲ್ಲಿ ಸವಿಯಬಹುದು. ಸ್ವಲ್ಪ ಬೆಲೆ ಹೆಚ್ಚು ಏನಿಸಿದರೂ ರುಚಿಯಲ್ಲಿ ಮಾತ್ರ ರಾಜಿಇಲ್ಲ. ಇಲ್ಲಿಗೆ ಭೇಟಿ ನೀಡಿದಾಗ ಕೇರಳ ಶೈಲಿಯ ಆಹಾರಗಳನ್ನು ಮಿಸ್ ಮಾಡದೇ ಸವಿಯಿರಿ.

4. ಕರಾವಳಿ ಹೋಟೆಲ್ (Karavalli)
ಹೆಸರಿಗೆ ತಕ್ಕಂತೆ ಕರಾವಳಿ ಶೈಲಿಯ ಬೆಂಗಳೂರಿನಲ್ಲಿ ಬೆಸ್ಟ್ ಮೀನೂಟ ಬಿಡಿಸುವ ಸ್ಥಳವೆಂದರೆ ಕರಾವಳಿ ಹೋಟೆಲ್. ಬೆಂಗಳೂರು ನಗರದ ವಿವಿಧ ಕಡೆಯಲ್ಲಿ ಈ ಹೋಟೆಗಳನ್ನು ನೀವು ಕಾಣಬಹುದು. ಕರಾವಳಿ ಪಾಕಪದ್ಧತಿ ಅನುಸರಿಸಿ ತಯಾರಿಸುವ ಇಲ್ಲಿನ ಖಾದ್ಯಗಳು ಕೇವಲ ಘಮದಿಂದಲೇ ಬಾಯಲ್ಲಿ ನೀರೂರಿಸುತ್ತವೆ. ಕುಚಲಕ್ಕಿ ಜೊತೆಗೆ ಮೀನೂಟ, ನೀರು ದೋಸೆ ಕೋಳಿ ಸುಕ್ಕ, ಕೋರಿ ರೊಟ್ಟಿ ಚಿಕನ್ ಸಾಂಬಾರ್, ಮೀನು ಫ್ರೈ, ಸೀಗಡಿ ಫ್ರೈ, ಕ್ರ್ಯಾಬ್ ಮಸಾಲಾ ಹೀಗೆ ಇಲ್ಲಿನ ರುಚಿಕರವಾದ ಖಾದ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕಡಿಮೆ ದರದಲ್ಲಿ ಅತ್ಯುತ್ತಮ ಮೀನೂಟ ಸವಿಯಲು ಇದೊಮದು ಸೂಕ್ತವಾದ ಸ್ಥಳವಾಗಿದೆ.

5. ಮತ್ಸ್ಯ ದರ್ಶಿನಿ, ಕಬ್ಬನ್ ಪಾರ್ಕ್ (Mathsya Darshini)
ಮತ್ಸ್ಯ ದರ್ಶಿನಿ ಎನ್ನುವುದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ಸ್ಥಾಪಿಸಿದ ಬೆಂಗಳೂರು ನಗರದ ಅತ್ಯಂತ ಹಳೆಯ ಮೀನು ಕ್ಯಾಂಟೀನ್‌ಗಳಲ್ಲಿ ಒಂದಾಗಿದೆ. ಕಡಿಮೆ ಬಜೆಟ್‌ನಲ್ಲಿ ಹೊಟ್ಟೆ ತುಂಬುವ ತೃಪ್ತಿಕರ ಊಟವನ್ನು ಇಲ್ಲಿ ಸವಿಯಬಹುದಾಗಿದೆ. ಕೆಎಫ್‌ಡಿಸಿಯ ಬೇರೆ ಮೀನಿನ ಕ್ಯಾಂಟೀನ್‌ಗಳಿಗಿಂತ ಈ ಹೋಟೆಲ್ ಅನುಕೂಲಕರವಾಗಿದೆ. ಇಲ್ಲಿ ಗ್ರಾಹಕರಿಗೆ ಕುಳಿತು ತಿನ್ನುವ ವ್ಯವಸ್ಥೆ ಇದ್ದು, ಶುಚಿತ್ವವನ್ನು ಕಾಪಾಡಿಕೊಳ್ಳಲಾಗಿದೆ.
ಮೀನು ಸಾರು ಜೊತೆಗೆ ರಾಗಿ ಮುದ್ದೆ, ಏಡಿ, ಹಾಗೂ ಸೀಗಡಿಯಂತರ ಇತರ ಖಾದ್ಯಗಳ ಸಹ ಲಭ್ಯವಿರುತ್ತದೆ. ಕೇವಲ ನೂರು ರೂಪಾಯಿಂದ ವಿವಿಧ ಬಗೆ ಇರುವ ಇಲ್ಲಿನ ಮೀನೂಟ ಆರಂಭವಾಗುತ್ತದೆ. ಕಬ್ಬನ್ ಪಾರ್ಕ್, ವಿಧಾನ ಸೌಧ ಹಾಗೂ ಹೈಕೋರ್ಟ್ ಹತ್ತಿರ ಇರುವುದರಿಂದ ಮಧ್ಯಾಹ್ನದ ಊಟದ ಸಮಯಲ್ಲಿ ಸರ್ಕಾರಿ ನೌಕರರು ಅಥವಾ ವಕೀಲರು ಹಾಗೂ ಕಬ್ಬನ್ ಪಾರ್ಕ್‌ಗೆ ಬಂದ ಪ್ರವಾಸಿಗರಿಂದ ಈ ಕ್ಯಾಂಟೀನ್ ತುಂಬಿ ತುಳುಕುತ್ತಿರುತ್ತದೆ.

6. ಪಿಂಗಾರ ಹೋಟೆಲ್ (Pingara Hotel)
ಪಿಂಗಾರ ಹೋಟೆಲ್ ಕರಾವಳಿಗರಿಗೆ ಚಿರಪರಿಚಿತವಾಗಿರಬಹುದು. ಏಕೆಂದರೆ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಪಿಂಗಾರ ಹೆಸರಿನ ಹೋಟೆಲ್‌ಗಳು ಹೆಚ್ಚು ಜನಪ್ರಿಯ. ಬೆಂಗಳೂರಿನಲ್ಲೂ ಪಿಂಗಾರ ಹೆಸರಿನ ರೆಸ್ಟೋರೆಂಟ್‌ಗಳಿದ್ದು, ಇಲ್ಲಿ ಪಕ್ಕಾ ಕರಾವಳಿ ಶೈಲಿ ಮೀನೂಟ ನೀಡಲಾಗುತ್ತದೆ. ಇದೊಂದು ಫ್ಯಾಮಿಲಿ ರೆಸ್ಟೋರೆಂಟ್ ಆಗಿದ್ದು, ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ಕರಾವಳಿ ಶೈಲಿಯ ಮೀನೂಟದ ಜೊತೆಗೆ ಚಿಕನ್ ಖಾದ್ಯಗಳು ಕೂಟ ಲಭ್ಯವಿದೆ. ಒಮ್ಮೆ ಇಲ್ಲಿನ ಆಹಾರಗಳ ರುಚಿ ಸವಿದವರು ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡುತ್ತಾರೆ.












Click it and Unblock the Notifications