Biriyani: ಭಾನುವಾರದ ಬಾಡೂಟಕ್ಕೆ ಬೆಂಗಳೂರಿನ ಟಾಪ್ ಬೆಸ್ಟ್ ಬಿರಿಯಾನಿಗಳಿವು
ಭಾನುವಾರ ಬಂತೆಂದರೆ ಸಾಕು ಎಲ್ಲಾ ಕೆಲಸಕ್ಕೂ ಫುಲ್‌ಸ್ಟಾಪ್ ಹಾಕಿ ನಮಗಾಗಿ ನಾವು ಸಮಯಕೊಡಬೇಕು ಎಂದು ಹಲವರು ಕಾದು ಕುಳಿತಿರುತ್ತಾರೆ. ಭಾನುವಾರ ಸಂಪೂರ್ಣವಾಗ ಬೇಕಾದರೆ ಒಂದೊಳ್ಳೆ ಬಾಡೂಟವಾಗಲೇ ಬೇಕು. ಕುಟುಂಬಸ್ಥರ ಅಥವಾ ಸ್ನೇಹಿತರ ಜೊತೆ ರುಚಿರುಚಿಯಾದ ಒಂದು ಬಾಡೂಟ ಸವಿದರೆ ಆ ವಾರದ ಒತ್ತಡವೆಲ್ಲ ಕಳೆದಂತೆ.
ಬಾಡೂಟ ಅಂದರೆ ಸಾಕು ಮೊದಲಿಗೆ ನೆನಪಿಗೆ ಬರುವುದೇ ಬಿರಿಯಾನಿ. ಹೀಗಾಗಿ ಭಾನುವಾರ ದಿನ ನಿಮ್ಮ ಮನೆಯ ಅಡುಗೆ ಮನೆ ಕೆಲಸಕ್ಕೆ ಬ್ರೇಕ್ ಕೊಟ್ಟು ಬೆಂಗಳೂರಿನ ಬೆಸ್ಟ್ ಸ್ಥಳಗಳಲ್ಲಿ ಬಿರಿಯಾನಿ ಸವಿಯಿರಿ. ಬಿರಿಯಾನಿ ಪ್ರಿಯರಿಗಾಗಿ ಬೆಂಗಳೂರಿನಲ್ಲಿ ರುಚಿರುಚಿಯಾದ ಬಿರಿಯಾನಿ ಸಿಗುವ ಟಾಪ್ ಐದು ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಹೊಸಕೋಟೆ ಬಿರಿಯಾನಿ
ಬೆಂಗಳೂರಿನಲ್ಲಿ ಬಿರಿಯಾನಿ ಅಂದ ತಕ್ಷಣ ನೆನಪಿಗೆ ಬರುವುದೇ ಹೊಸಕೋಟೆ ಬಿರಿಯಾನಿ. ಇಲ್ಲಿ ಮೂರ್ನಾಲ್ಕು ಫೇಮಸ್ ಬಿರಿಯಾನಿ ಸೆಂಟರ್‌ಗಳಿದ್ದು, ಬೆಳಗ್ಗೆ 4 ಗಂಟೆ ಬಿರಿಯಾನಿ ಅಂತಾಲೇ ಜನಪ್ರಿಯತೆ ಪಡೆದಿವೆ. ಹೊಸಕೋಟೆಯಲ್ಲಿ ಭಾನುವಾರ ಬೆಳಗ್ಗೆ 4 ಗಂಟೆಯಿಂದಲೇ ಬಿರಿಯಾನಿ ಮರಾಟ ಆರಂಭವಾಗುತ್ತದೆ.
ಈ ಬಿರಿಯಾನಿ ಸವಿಯಲು ಜನ ಅಂಗಡಿಗಳು ತೆರೆಯುವ ಅರ್ಧ ಗಂಟೆಗೂ ಮುನ್ನ ಅಂದರೆ ಬೆಳಗಿನ ಜಾವ 3;30 ಗಂಟೆಗೆಲ್ಲ ಬಂದು ಕಾಯುತ್ತಾರೆ. ಇಲ್ಲವಾದರೆ ಕಿಲೋ ಮೀಟರ್ ಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದರೆ. ಕೆಲವೊಮ್ಮೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತರೂ ಕೂಡ ಬಿರಿಯಾನಿ ಸಿಗದೇ ಹಾಗೇ ತೆರಳ ಬೇಕಾಗುತ್ತದೆ. ಈ ಕಾರಣದಿಂದ ಗ್ರಾಹಕರು ಮುಂಜಾನೆಯೇ ಬಂದು ಕಾಯುತ್ತಾರೆ.
ಮಣಿ, ಆನಂದ್, ಅಕ್ಷಯ್, ರಾಜ್‌ಕುಮಾರ್ ಹೆಸರಿನ ಬಿರಿಯಾನಿ ಸೆಂಟರ್‌ಗಳು ಹೊಸಕೋಟೆ ಮಾತ್ರವಲ್ಲದೇ ಬೆಂಗಳೂರು ನಗರ ಹಾಗೂ ಬೆಂಗಳೂರಿನ ಸುತ್ತಲಿನ ನಗರದಲ್ಲೂ ಹೆಚ್ಚು ಜನಪ್ರಿಯತೆ ಪಡೆದಿವೆ. ನೈಟ್‌ಔಟ್ ಹೋದವರು ಒಂದೆಡೆಯಾದರೆ ಈ ಬಿರಿಯಾನಿಗಾಗಿಯೇ ನಿದ್ದೆಗೆಟ್ಟು ಬಂದವರ ಸಾಲನ್ನು ನೀವಿಲ್ಲಿ ಕಾಣಬಹುದು. ಅಂದಹಾಗೆ ಹೊಸಕೋಟೆ ಬೆಂಗಳೂರಿನಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿದೆ.

2. ಹೈದರಾಬಾದ್ ಬಿರಿಯಾನಿ
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ನಾಟಿ ಸ್ಟೈಲ್, ಧಮ್ ಬಿರಿಯಾನಿ, ಚಿಕನ್, ಮಟನ್ ಪಲಾವ್‌ಗಳು ಹೆಚ್ಚಾಗಿ ಸಿಗುತ್ತದೆ. ಈ ಎಲ್ಲಾ ಬಿರಿಯಾನಿಗಳ ನಡುವೆ ಆಹಾರ ಪ್ರಿಯರಿಗೆ ಅಚ್ಚುಮೆಚ್ಚಾಗಿರುವ ಬಿರಿಯಾನಿ ಎಂದರೆ ಹೈದರಾಬಾದ್ ಬಿರಿಯಾನಿ. ಹೆಸರಿಗೆ ತಕ್ಕಂತೆ ಇದು ಹೈದರಾಬಾದ್ ನಿಜಾಮರ ಆಸ್ಥಾನದ ಪಾಕಶಾಲೆಯಲ್ಲಿ ಹುಟ್ಟಿಕೊಂಡ ಬಿರಿಯಾನಿ ಶೈಲಿಯಾಗಿದೆ. ಬೆಂಗಳೂರಿನ ಹಲವು ಹೋಟೆಲ್‌ಗಳಲ್ಲಿ ಈ ಹೈದರಾಬಾದ್ ಬಿರಿಯಾನಿ ಸಿಗುತ್ತದೆ. ಆದರೆ ಹೈದರಾಬಾದ್ ಬಿರಿಯಾನಿ ಹೆಸರಿನಲ್ಲೇ ಹೋಟೆಲ್‌ಗಳಿದ್ದು, ಇಲ್ಲಿ ನೀವು ಒಂದೊಳ್ಳೆ ಹೈದರಾಬಾದ್ ಬಿರಿಯಾನಿ ರುಚಿಯನ್ನು ಸವಿಯಬಹುದು.
3. ಮಲ್ಲಿಕಾ ಬಿರಿಯಾನಿ
ಬೆಂಗಳೂರು ಸಿಟಿಯಿಂದ ದೂರದಲ್ಲಿರುವ ಬಿಳೇಶಿವಾಲೆಯಲ್ಲಿ ಮಲ್ಲಿಕಾ ಬಿರಿಯಾನಿ ಹೋಟೆಲ್‌ಯಿದ್ದು, ಇಲ್ಲಿ ನೀವು ಪಕ್ಕಾ ನಾಟಿ ಸ್ಟೈಲ್ ಅಥವಾ ಸೌದೆ ಒಲೆ ಬಿರಿಯಾನಿ ಸವಿಯಬಹುದು. ಭಾನುವಾರ ಬೆಳ್ಳಂಬೆಳಗ್ಗೆ ಬಿರಿಯಾನಿ ಮಿಸ್ ಮಾಡಿಕೊಂಡವರು ಸಮಯಕೊಟ್ಟು ಈ ಸ್ಥಳಕ್ಕೆ ಭೇಟಿ ನೀಡಿದರೆ, ನಿಮ್ಮ ಸಮಯ ಹಾಗೂ ಹಣಕ್ಕೆ ಇಲ್ಲಿನ ಬಿರಿಯಾನಿ ರುಚಿ ನ್ಯಾಯ ಒದಗಿಸುವುದಂತೂ ಗ್ಯಾರಂಟಿ. ಇಲ್ಲಿನ ಚಿಕನ್ ಬಿರಿಯಾನಿ ಹಾಗೂ ಮಟನ್ ಬಿರಿಯಾನಿ ಸವಿಯಲು ನಗರದ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಬಿರಿಯಾನಿ ಜೊತೆಗೆ ಇಲ್ಲಿ ಸಿಗುವ ಗೋಲಿಸೋಡ ಸಕ್ಕತ್ ಕಾಂಬಿನೇಷನ್ ಆಗಿದ್ದು, ಇಲ್ಲಿ ಬೇರೆ ನಾನ್‌ವೆಜ್ ಖಾದ್ಯಗಳು ಕೂಡ ಸಿಗುತ್ತದೆ.
4. ನವಯುಗ ಬಿರಿಯಾನಿ
ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್‌ನಲ್ಲಿರುವ ನವಯುಗ ಬಿರಿಯಾನಿ ಬೆಂಗಳೂರಿನ ದಿ ಬೆಸ್ಟ್ ಬಿರಿಯಾನಿಗಳಲ್ಲಿ ಒಂದು ನವಯುವ ಹೋಟೆಲ್‌ನ ಚಿಕನ್ ಬಿರಿಯಾನಿ ಹಾಗೂ ನಾಟಿ ಶೈಲ್ ಚಿಕನ್ ಊಟಕ್ಕೆ ಜನಸಾಮಾನ್ಯರಿಗಷ್ಟೇ ಅಲ್ಲದೇ, ಸಿಸಿಮಾ ನಟ-ನಟಿಯರಿಗೆ, ರಾಜಕೀಯ ನಾಯಕರಿಗೂ ಕೂಡ ಫಿದಾ ಆಗಿದ್ದಾರೆ. ಮೆಜೆಸ್ಟಿಕ್ ಬಸ್‌ನಿಲ್ದಾಣದ ಸಮೀಪದಲ್ಲೇ ಈ ಹೋಟೆಲ್ ಇರುವ ಕಾರಣ ಭಾನುವಾರ ನಿಮ್ಮ ಪ್ರಯಾಣ ಎಲ್ಲಿಗೆ ಇದ್ದರೂ ಒಂದಿಷ್ಟು ಸಮಯ ಬ್ರೇಕ್ ತೆಗೆದುಕೊಂಡು ನವಯುಗ ಹೋಟೆಲ್‌ಗೆ ಭೇಟಿ ನೀಡಿ ಬಿರಿಯಾನಿ ಸವಿಯಿರಿ.

5. ಅಂಬೂರ್ ಬಿರಿಯಾನಿ
ಬೆಂಗಳೂರಿನ ಮತ್ತೊಂದು ಜನಪ್ರಿಯ ಬಿರಿಯಾನಿ ಎಂದರೆ ಅದು ಅಂಬೂರ್ ಬಿರಿಯಾನಿ. ಬೆಂಗಳೂರಿನ ವಿವಿಧ ಕಡೆಗಳಲ್ಲಿ ಅಂಬೂರ್ ಬಿರಿಯಾನಿ ಸೆಂಟರ್‌ಗಳಿದ್ದು, ಇಲ್ಲಿನ ಖುಷ್ಕಾ, ಕಬಾಬ್, ಚಿಕನ್ ಮಟನ್ ಬಿರಿಯಾನಿಗೆ ಜನ ಫಿದಾ ಆಗಿದ್ದಾರೆ. ಬೆಳಗ್ಗೆಯಿಂದಲೇ ಆರಂಭವಾಗುವ ಈ ಅಂಬೂರ್ ಬಿರಿಯಾನಿ ಹೋಟೆಲ್‌ಗಳು ಮಧ್ಯಾಹ್ನ ಊಟದ ಸಮಯದಲ್ಲಿ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಪಾರ್ಸಲ್ ತಂದು ಮನೆಯಲ್ಲೇ ಎಲ್ಲರ ಜೊತೆ ಬಿರಿಯಾನಿ ಸವಿಯಬೇಕೆಂದುಕೊಂಡವರು ಇಲ್ಲಿದೆ ಭೇಟಿ ನೀಡಬಹುದು.












Click it and Unblock the Notifications