ಬೆಂಗಳೂರಿನಲ್ಲಿ ಜನ ಮೆಚ್ಚಿದ ಐದು ಬಿರಿಯಾನಿಗಳು: ಅಪ್ಪು, ಅಣ್ಣಾವ್ರಿಗೂ ಈ ಹೋಟೆಲ್ ಬಲು ಪ್ರಿಯ
ಬೆಂಗಳೂರು, ಜನವರಿ 17: ಬಿರಿಯಾನಿ..ಆಹಾ..! ಬಿರಿಯಾನಿ ಎನ್ನುವ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿಯ ರುಚಿಗೆ ಮನಸೋಲದವರಿಲ್ಲ. ದೇಶದಲ್ಲಿ ಅಂತ್ಯಂತ ಹೆಚ್ಚು ಜನರು ಇಷ್ಟಪಡುವ ಹಾಗೂ ಅಂತ್ಯಂತ ಹೆಚ್ಚು ಮಾರಾಟವಾಗುವ ಖಾದ್ಯವೆಂದರೆ ಅದು ಬಿರಿಯಾನಿ. ವೆಜ್ ಬಿರಿಯಾನಿಗಿಂತಲೂ ನಾನ್ ವೆಜ್ ಬಿರಿಯಾನಿ ಬಲು ಜನಪ್ರಿಯ.
ಬಿರಿಯಾನಿ ಒಂದೇ ಖಾದ್ಯವಾದರೂ ಇದನ್ನು ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತದೆ. ಹೈದರಬಾದ್ ಬಿರಿಯಾನಿ, ಧಮ್ ಬಿರಿಯಾನಿ, ದೊಣ್ಣೆ ಬಿರಿಯಾನಿ, ಬ್ಯಾಂಬೂ ಬಿರಿಯಾನಿ, ನಾಟಿ ಶೈಲ್ ಬಿರಿಯಾನಿ, ಅಂಬೂರ್ ಬಿರಿಯಾನಿ, ಮಲಬಾರ್ ಬಿರಿಯಾನಿ ಹೀಗೆ ಬಿರಿಯಾನಿಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅಂದಹಾಗೆ ಬೆಂಗಳೂರಿನಲ್ಲೂ ಅಂತ್ಯಂತ ಹೆಚ್ಚು ಮಾರಾಟವಾಗುವ ಹಾಗೂ ಬೇಡಿಕೆಯಿರುವ ಖಾದ್ಯವೆಂದರೆ ಅದು ಬಿರಿಯಾನಿಯೇ. ಹಾಗದರೆ ಬೆಂಗಳೂರಿನಲ್ಲಿ ಅತ್ಯಂತ ರುಚಿಕರವಾದ ಬಿರಿಯಾನಿ ಸಿಗುವ ಸ್ಥಳಗಳು ಯಾವುವು..? ಬೆಂಗಳೂರಿನ ಜನರು ಮೆಚ್ಚಿ ಬೆಳೆಸಿಕೊಂಡು ಬರುತ್ತಿರುವ ಬಿರಿಯಾನಿ ಹೋಟೆಲ್‌ಗಳು ಯಾವುವು..? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಬೆಂಗಳೂರಿನಲ್ಲಿ ಜನ ಸ್ನೇಹಿಯಾಗಿರುವ ಬೆಸ್ಟ್ ಬಿರಿಯಾನಿ ಹೋಟೆಲ್‌ಗಳ ಪಟ್ಟಿ ಇಲ್ಲಿದೆ.
ನವಯುಗ ಬಿರಿಯಾನಿ, ಮೆಜೆಸ್ಟಿಕ್
ನವಯುಗ ಬಿರಿಯಾನಿ ಬೆಂಗಳೂರಿನ ದಿ ಬೆಸ್ಟ್ ಬಿರಿಯಾನಿಗಳಲ್ಲಿ ಒಂದು. ಇಲ್ಲಿನ ಬಿರಿಯಾನಿ ರುಚಿಗೆ ಮನಸೋಲದವರಿಲ್ಲ. ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್‌ನಲ್ಲಿರುವ ನವಯುಗ ಬಿರಿಯಾನಿ ಜನಸಾಮಾನ್ಯರಿಗಷ್ಟೇ ಅಲ್ಲದೇ, ಸಿಸಿಮಾ ನಟ-ನಟಿಯರಿಗೆ, ರಾಜಕೀಯ ನಾಯಕರಿಗೂ ಕೂಡ ಅತ್ಯಂತ ಪ್ರಿಯ. ನವಯುವ ಹೋಟೆಲ್‌ನ ಚಿಕನ್ ಬಿರಿಯಾನಿ ಹಾಗೂ ನಾಟಿ ಶೈಲ್ ಚಿಕನ್ ಊಟ ಹೆಚ್ಚು ಜನಪ್ರಿಯತೆ ಪಡೆದಿದೆ.

ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಕೂಡ ಇಲ್ಲಿನ ಬಿರಿಯಾನಿಯ ರುಚಿಗೆ ಮನಸೋತಿದ್ದರು. ನವಯುಗ ಹೋಟೆಲ್‌ಗೂ ಅಣ್ಣಾವ್ರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. 1981ರಲ್ಲಿಯೇ ಈಗಿನ ನವಯುಗ ಹೋಟೆಲ್ ಮಾಲೀಕರ ಕೈ ರುಚಿಗೆ ಮನಸೋತಿದ್ದ ಡಾ.ರಾಜ್‌ಕುಮಾರ್ ಇಲ್ಲಿನ ಖಾಯಂ ಗ್ರಾಹಕರಾಗಿದ್ದರು. ಇನ್ನು ತಂದೆಯಂತೆಯೇ ಭೋಜನ ಪ್ರಿಯರಾಗಿದ್ದ ಅಪ್ಪು ಕೂಡ ಅನೇಕ ಬಾರಿ ನವಯುಗ ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಜನಸಮಾನ್ಯರಿಗೂ ಕೈಗೆಟುಕುವ ದರದಲ್ಲಿ ಸಿಗುವ ನವಯುಗ ಬಿರಿಯಾನಿ ಬೆಂಗಳೂರಿನ ಬಿರಿಯಾನಿ ಪ್ರಿಯರ ಮೆಚ್ಚುನ ಹೋಟೆಲ್ ಆಗಿದೆ.
ಮಲ್ಲಿಕಾ ಬಿರಿಯಾನಿ, ಬಿಳೇಶಿವಾಲೆ
ಪಕ್ಕಾ ನಾಟಿ ಸ್ಟೈಲ್ ಅಥವಾ ಸೌದೆ ಒಲೆ ಬಿರಿಯಾನಿ ಸವಿಯಬೇಕೆಂದುಕೊಂಡವರು ಮಿಸ್ ಮಾಡದೇ ಮಲ್ಲಿಕಾ ಬಿರಿಯಾನಿಗೆ ಭೇಟಿ ನೀಡಿ. ಒಮ್ಮೆ ಇಲ್ಲಿನ ಬಿರಿಯಾನಿ ರುಚಿ ಸವಿದವರು ಖಾಯಂ ಗ್ರಾಹಕರಾಗುವುದಂತೂ ಗ್ಯಾರಂಟಿ. ಬೆಂಗಳೂರು ಸಿಟಿಯಿಂದ ದೂರದಲ್ಲಿರುವ ಬಿಳೇಶಿವಾಲೆಯಲ್ಲಿ ಮಲ್ಲಿಕಾ ಬಿರಿಯಾನಿ ಹೋಟೆಲ್‌ಯಿದ್ದು, ನಗರದ ಮೂಲೆ ಮೂಲೆಯಿಂದ ಜನ ಇಲ್ಲಿಗೆ ಬಂದು ಬಿರಿಯಾನಿ ತಿನ್ನುತ್ತಾರೆ. ಇಲ್ಲಿನ ಚಿಕನ್ ಬಿರಿಯಾನಿಯೇ ಅತಿ ರುಚಿ ಅಂದರೆ ಮಟನ್ ಬಿರಿಯಾನಿ ಇನ್ನೂ ಒಂದು ಕೈ ಮೇಲೆ. ಇಲ್ಲಿನ ನಾಟಿ ಸ್ಟೈಲ್ ಮಟನ್ ಬಿರಿಯಾನಿಗೆ ನಾನ್ ವೆಜ್ ಪ್ರಿಯರು 10 ರಲ್ಲಿ 10 ಅಂಕ ನೀಡಿದ್ದಾರೆ. ಇಲ್ಲಿನ ವಾತಾವರಣವೂ ಕೂಡ ಆಹ್ಲಾದಕರವಾಗಿದ್ದು, ನೀವು ನೀಡುವ ಹಣಕ್ಕೆ ಇಲ್ಲಿನ ಬಿರಿಯಾನಿ ರುಚಿ ನ್ಯಾಯ ಒದಗಿಸುತ್ತದೆ.

ಗುಂಡಪ್ಪ ಬಿರಿಯಾನಿ, ಶೇಷಾದ್ರಿಪುರಂ
ಶೇಷಾದ್ರಿಪುರಂನಲ್ಲಿರುವ ಗುಂಡಪ್ಪ ಬಿರಿಯಾನಿ ಬೆಂಗಳೂರಿನ ಅತ್ಯಂತ ಹಳೆಯ ಬಿರಿಯಾನಿ ಹೋಟೆಲ್‌ಗಳಲ್ಲಿ ಒಂದು. ಇಲ್ಲಿನ ದೊನ್ನೆ ಬಿರಿಯಾನಿ ಹಾಗೂ ಕಬಾಬ್ ಹೆಚ್ಚು ಜನಪ್ರಿಯವಾಗಿದೆ. ಹೋಟೆಲ್ ಚಿಕ್ಕದಾದರೂ ಇಲ್ಲಿನ ರುಚಿ ಮಾತ್ರ ಅದ್ಭುತ. ಬರುವ ಗ್ರಾಹಕರನ್ನು ಇಲ್ಲಿನ ರುಚಿ ಹಿಡಿದಿಟ್ಟುಕೊಂಡಿದ್ದು, ಹೀಗಾಗಿ ಜನರು ಕಾದು ತಿಂದು ಹೋಗುತ್ತಾರೆ. ಸೌದೆ ಒಲೆಯಲ್ಲಿ ಬೇಯಿಸಿದ ಬಿರಿಯಾನಿಯನ್ನು ಬಾಳೆಎಲೆಯ ದೊನ್ನೆಯಲ್ಲಿಟ್ಟು ಬಡಿಸಲಾಗುತ್ತದೆ.
ಬಿಸಿಬಿಸಿ ಹೊಗೆಯಾಡುವ ಬಿರಿಯಾನಿ ಜೊತೆಗೆ ಇಲ್ಲಿ ಸಿಗುವ ಚಿಲ್ಲಿಯ ಶೇರ್ವವನ್ನು ಹಾಕಿ ಕಲಿಸಿ ತಿನ್ನುತ್ತಿದ್ದರೆ ಆಹಾರ ಪ್ರಿಯರಿಗೆ ಇದೇ ಸ್ವರ್ಗವೆನಿಸುತ್ತದೆ. ದೊನ್ನೆ ಬಿರಿಯಾನಿ ಜೊತೆಗೆ, ಚಿಲ್ಲ, ಕಬಾಬ್, ಚಿಕನ್ 65 ಸೇರಿದಂತೆ ವಿವಿಧ ರೀತಿಯ ನಾನ್ ವೆಜ್ ಖಾದ್ಯಗಳು ಇಲ್ಲಿ ದೊರೆಯುತ್ತದೆ. ಈ ಚಿಕ್ಕ ಹೋಟೆಲ್‌ನ ಪ್ರಮುಖ ಆಕರ್ಷಣೆ ಎಂದರೆ ಗೋಡೆ ಮೇಲಿನ ಚಿತ್ರ. ಗುಂಡು ಗುಂಡಾದ ವ್ಯಕ್ತಿಯೊಬ್ಬ ಚಿಕನ್ ಸ್ವಚ್ಛಗೊಳಿಸುತ್ತಿರುವ ಚಿತ್ರವೊಂದು ಇಲ್ಲಿ ನಿಮ್ಮ ಗಮನ ಸೆಳೆಯುತ್ತದೆ.

ಚಿಕ್ಕಪೇಟೆ ದೊನ್ನೆ ಬಿರಿಯಾನಿ
ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೋಟೆಲ್‌ಗಳು ಬಿರಿಯಾನಿ ಪ್ರಿಯರಿಗೆ ಸೂಕ್ತವಾದ ಸ್ಥಳ. ರುಚಿ-ರುಚಿಯಾದ ಬಿರಿಯಾನಿ ಸವಿಯಬೇಕೆಂದುಕೊಂಡವರು ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೋಟೆಲ್‌ಗೆ ತಪ್ಪದೇ ಭೇಟಿ ನೀಡಿ. ಇಲ್ಲಿ ಬಹಳ ಸರಳವಾಗಿ ಬಿರಿಯಾನಿ ತಯಾರಿಸಲಾಗುತ್ತದೆ. ಹೆಚ್ಚಿನ ಮಸಾಲೆ ಇಲ್ಲದೇ ಬಿಸಿಬಿಸಿಯಾದ ಬಿರಿಯಾನಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ.
ಚಿಕ್ಕಪೇಟೆ ಹೆಸರಿನಲ್ಲಿ ಆರಂಭವಾದ ಈ ಹೋಟೆಲ್ ಈಗ ಬೆಂಗಳೂರಿನ ಪ್ರತಿ ನಗರದಲ್ಲೂ ಒಂದೊಂದು ಇರುವಂತಿದೆ. ಇತ್ತೀಚಿಗೆ ತೆರೆಯುತ್ತಿರುವ ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೋಟೆಲ್‌ಗಳ ರುಚಿಯ ಬಗ್ಗೆ ಗ್ರಾಹಕರಿಗೆ ಅಸಮಾಧನವಿದ್ದರೂ, ಹಳೆಯ ಹೋಟೆಲ್‌ಗಳು ಇಂದಿಗೂ ತಮ್ಮ ರುಚಿ ಹಾಗೂ ಮಸಾಲೆಯ ಘಮವನ್ನು ಉಳಿಸಿಕೊಂಡು ಬಂದಿವೆ. ಒಂದೊಳ್ಳೆ ದೊನ್ನೆ ಬಿರಿಯಾನಿ ಸವಿಯಬೇಕೆಂದುಕೊಂಡವರು ಮಿಸ್ ಮಾಡದೇ ಈ ಹೋಟೆಲ್‌ಗೆ ಭೇಟಿ ನೀಡಿ.
ಶಿವಾಜಿ ಮಿಲಿಟರಿ ಹೋಟೆಲ್ ಬಿರಿಯಾನಿ, ಜಯನಗರ
ಬೆಂಗಳೂರಿನ ಜನಪ್ರಿಯವಾದ ಹೋಟೆಲ್‌ಗಳಲ್ಲಿ ಶಿವಾಜಿ ಮಿಲಿಟರಿ ಹೋಟೆಲ್ ಕೂಡ ಒಂದು. ನಗರದ ಹಲವು ಕಡೆ ಈ ಹೆಸರಿನ ಹೋಟೆಲ್‌ಗಳಿವೆ. ಆದರೆ ಜಯನಗರದ ಶಿವಾಜಿ ಮಿಲಿಟರಿ ಹೋಟೆಲ್ ಬಿರಿಯಾನಿಗೆ ಸಖತ್ ಜನಪ್ರಿಯವಾಗಿದೆ. 1935ರಲ್ಲಿ ಈ ಹೋಟೆಲ್ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಅದೇ ರುಚಿಯನ್ನು ಉಳಿಸಿಕೊಂಡು ಬಂದಿದೆ. ಮರಾಠ ಪಾಕ ಪದ್ಧತಿಯಲ್ಲಿ ಇಲ್ಲಿನ ಆಹಾರಗಳನ್ನು ತಯಾರಿಸಲಾಗುತ್ತದೆ. ಸದಾ ಜನರಿಂದ ತುಂಬಿ ತುಳುಕುವ ಈ ಹೋಟೆಲ್‌ನಲ್ಲಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಸವಿಯಲು ಜನ ಕನಿಷ್ಠ 30 ನಿಮಿಷವಾದರೂ ಕಾಯುತ್ತಾರೆ. ಆದರೆ ನಿಮ್ಮ ಹಣ ಮತ್ತು ನೀವು ಕಾದ ಸಮಯಕ್ಕೆ ಇಲ್ಲಿನ ಬಿರಿಯಾನಿ ರುಚಿ ನ್ಯಾಯ ಒದಗಿಸುತ್ತದೆ.












Click it and Unblock the Notifications