ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ
ಬೆಂಗಳೂರು, ಏಪ್ರಿಲ್ 10: ಒಂದೂವರೆ ವರ್ಷದ ಪುಟ್ಟ ಹೆಣ್ಣು ಮಗು ಆಟವಾಡುತ್ತಿದ್ದ ವೇಳೆ ಮನೆಯ ಮೊದಲ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆ ಬೆಂಗಳೂರಿನ ನಾಯಂಡಳ್ಳಿಯಲ್ಲಿ ನಡೆದಿದೆ. ಇನ್ನೂ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾದ ತಾಯಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ.
ಮಾಹಿತಿ ಪ್ರಕಾರ, ಏಪ್ರಿಲ್ 6ರಂದು ಸಂಜೆ ಸುಮಾರು 6:30ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಹನಾ ಎಂಬ ಈ ಮಗು ಮನೆಯೊಳಗೆ ಆಟವಾಡುತ್ತಿತ್ತು. ಈ ವೇಳೆ ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಗು ಹೊರಗಡೆ ಬಂದಿದೆ.

ಮನೆಯ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಮಗು
ಬಳಿಕ ಮಗು ಮನೆಯ ಹೊರಗಡೆ ಇಟ್ಟಿದ್ದ ಕುರ್ಚಿಯ ಮೇಲೆ ಹತ್ತಿ, ಅಲ್ಲಿಂದ ಕಿಟಕಿಯ ಗ್ರಿಲ್ ಮೂಲಕ ಹೊರಕ್ಕೆ ಇಣುಕಿ ನೋಡಲು ಹೋದಾಗ ಆಯತಪ್ಪಿ ಮೊದಲ ಮಹಡಿಯಿಂದ ನೇರವಾಗಿ ಕೆಳಗೆ ಬಿದ್ದಿದೆ.
ಮಗು ಕೆಳಗೆ ಬೀಳುತ್ತಿದ್ದಂತೆಯೇ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ಇದನ್ನು ಕಂಡ ನೆರೆಹೊರೆಯವರು ಕೂಡಲೇ ಪೋಷಕರಿಗೆ ತಿಳಿಸಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದ ಮಗುವಿನ ತಾಯಿ
ಓಡಿಬಂದ ತಾಯಿ ಜಯಶ್ರೀ ಅವರು ಮಗುವಿನ ಸ್ಥಿತಿಯನ್ನು ಕಂಡು ತೀವ್ರ ಆಘಾತಕ್ಕೊಳಗಾಗಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಸ್ಥಳೀಯರು ತಾಯಿ ಮತ್ತು ಮಗು ಇಬ್ಬರನ್ನೂ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಮಗುವನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಾಣಾಪಾಯದಿಂದ ಪಾರಾದ ಮಗು
ಮಗುವಿನ ತಂದೆ ನವೀನ್ ಕುಮಾರ್ ಅವರು ತಮ್ಮ ಮಗಳು ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಮಗುವಿನ ತಲೆಗೆ ಏಟಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿ ಮೂರು ಹೊಲಿಗೆ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಅಂತಾ ವರದಿಯಾಗಿದೆ. ಜೊತೆಗೆ ಅದೃಷ್ಟವಶಾತ್ ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಈಗ ಪ್ರಾಣಾಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಪೂರ್ಣ ಘಟನೆಯು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಅಪಾರ್ಟ್‌ಮೆಂಟ್ ಮತ್ತು ಮನೆಗಳಲ್ಲಿ ಪುಟ್ಟ ಮಕ್ಕಳಿರುವ ಪೋಷಕರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.












Click it and Unblock the Notifications