ಬೆಂಗಳೂರು: ಕಾರಿನ ಟೈರ್ ಸ್ಫೋಟಗೊಂಡು ಮೂವರು ಸ್ಥಳದಲ್ಲೇ ದಾರುಣ ಸಾವು
ಬೆಂಗಳೂರು, ಸೆಪ್ಟೆಂಬರ್ 18: ಕಾರಿನ ಟೈರ್ ಸ್ಫೋಟಗೊಂಡು ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ ಗ್ರಾಮದ ಬಳಿ ಘಟನೆ ನಡೆದಿದೆ. ಆಗಸ್ಟಿನ್, ದಾದರೆಡ್ಡಿ, ನಿರೋಷ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಇಂಜಿನಿಯರ್ಸ್ ಆಗಿದ್ದು, ಮಾನ್ಯತ ಟೆಕ್ ಪಾರ್ಕ್ ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಐವರು ಸ್ನೇಹಿತರು ಮೈಸೂರು ಪ್ರವಾಸ ಮುಗಿಸಿ ವಾಪಸ್ ಬರುವ ವೇಳೆ ಅಂಚೆಪಾಳ್ಯ ಗ್ರಾಮದ ಬಳಿಕಾರಿನ ಟೈರ್ ಸ್ಫೋಟಗೊಂಡು ಕಾರು ಡಿವೈಡರ್ಗೆ ಡಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಗಳನ್ನು ದಾಸರಹಳ್ಳಿಯ ನಿವಾಸಿ ಮಿಥುನ್ ಯಾದವ್ (27) ಹಾಗೂ ನಾಗವಾರ ನಿವಾಸಿ ಶತ್ರುಘ್ನ (30) ಎಂದು ಗುರುತಿಸಲಾಗಿದೆ. ಸದ್ಯ ಗಂಭೀರ ಗಾಯಗೊಂಡ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀನೆ ನಡೆಸಿದ್ದಾರೆ.












Click it and Unblock the Notifications