Namma Metro: ಹಳದಿ ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ: ತಿಂಗಳಾಂತ್ಯಕ್ಕೆ 6ನೇ ರೈಲು ಆಗಮನ, ಸಮಯ ಉಳಿತಾಯ
RV Road-Bommasandra Metro Line: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಇತ್ತೀಚೆಗೆ ಐದನೇ ಡ್ರೈವರ್‌ಲೆಸ್ ರೈಲು ಕಾರ್ಯಾಚರಣೆ ಆರಂಭಿಸಿದೆ. ಇದೀಗ 06 ರೈಲಿನ ಎಲ್ಲ ಬೋಗಿಗಳು ಟಿಟಾಘರ್‌ನಿಂದ ಬೆಂಗಳೂರಿನತ್ತ ಬರುತ್ತಿವೆ. ಈ ರೈಲು ಬಂದು ಸೇವೆಗೆ ನಿಯೋಜನೆಗೊಂಡರೆ ಪ್ರಯಾಣಿಕರ ಕಾಯುವಿಕೆ ಸಮಯ ಗಣನೀಯವಾಗಿ ಇಳಿಕೆ ಆಗಲಿದೆ.
ಮೆಟ್ರೋ ಹಳದಿ ಮಾರ್ಗದಲ್ಲಿ ಐದು ರೈಲುಗಳು ಸೇವೆಗೆ ಲಭ್ಯವಿವೆ. ಕೊಂಚ ವಿಳಂಬದ ಹೊರತಾಗಿಯು ಆರನೇ ಮೆಟ್ರೋ ರೈಲಿನ ಮೂರು ಬೋಗಿಗಳನ್ನು ಇಂದು ನವೆಂಬರ್ 18ರಂದು ಕೊಲ್ಕತ್ತಾ ಟಿಟಾಘರ್ ರೈಲ್ ಸಿಸ್ಟಮ್ ಲಿಮಿಟೆಡ್ ಕಂಪನಿಯು ಕಳುಹಿಸಿದೆ. ಬಾಕಿ ಮೂರು ಮೆಟ್ರೋ ಬೋಗಿಗಳು ನಾಳೆ ಬುಧವಾರ ನವೆಂಬರ್ 19 ರಂದು ತಯಾರಿಕಾ ಕಂಪನಿ ಟಾಟಾಘರ್ ನಿಂದ ಹೊರಡಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೂಲಗಳು ಮಾಹಿತಿ ನೀಡಿವೆ.

ರೈಲಿನ ಆವರ್ತನ 10 ನಿಮಿಷಕ್ಕೆ ಇಳಿಕೆ ಯಾವಾಗ?
ಹೊಸ ಮೆಟ್ರೋ ಬೋಗಿಗಳು ಇದೇ ನವೆಂಬರ್ ತಿಂಗಳಾಂತ್ಯಕ್ಕೆ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಬಂದು ಸೇರುತ್ತವೆ. ಈ ರೈಲುಗಳು ಸೇವೆ ಆರಂಭಿಸಿದಲ್ಲಿ ಪ್ರಯಾಣಿಕರಿಗೆ ಹಾಲಿ ಇರುವ 15-17 ನಿಮಿಷಗಳ (ರೈಲು ಆವರ್ತನಕ್ಕಾಗಿ) ಕಾಯುವಿಕೆ ಮತ್ತಷ್ಟು ಇಳಿಕೆ ಆಗುತ್ತದೆ. ಆರನೇ ರೈಲಿನ ಕಾರ್ಯಾಚರಣೆಯಿಂದ ರೈಲು ಆವರ್ತನ ಸಮಯ 12-13ನಿಮಿಷಕ್ಕೆ ಇಳಿಕೆ ಆಗಲಿದೆ.
ಮುಂದಿನ ದಿನಗಳಲ್ಲಿ ಇನ್ನೆರಡು ರೈಲುಗಳು ಇದೇ ರೀತಿ ಮುಂದಿನ ಒಂದೆರಡು ತಿಂಗಳುಗಳ ಅಂತರದಲ್ಲಿ ಟಿಟಾಘರ್‌ನಿಂದ ಹೊರಟು ಬೆಂಗಳೂರು ಸೇರಿದರೆ 2026ರ ಆರಂಭದಲ್ಲಿ ಇತರ ಮೆಟ್ರೋ ಮಾರ್ಗಗಳಂತೆ ಹಳದಿ ಮಾರ್ಗದಲ್ಲೂ ಪ್ರತಿ 10 ನಿಮಿಷಕ್ಕೆ ಒಂದರಂತೆ ಮೆಟ್ರೋ ಸಂಚಾರ ಸಾಧ್ಯವಾಗುತ್ತದೆ.
ಡಿಸೆಂಬರ್ ಮಧ್ಯಕ್ಕೆ 6ನೇ ರೈಲಿನ ಸೇವೆ ನಿರೀಕ್ಷೆ
ಸದ್ಯ ಬರುತ್ತಿರುವ ಆರನೇ ರೈಲು ಕಾರ್ಯಾಚರಣೆ ಆರಂಭಿಸುವ ಮೊದಲು ವಿವಿಧ ಪರೀಕ್ಷೆಗಳಿಗೆ ಒಳಗಾಗುತ್ತದೆ. ಮೊದಲು ಹೊತ್ತು ತಂದ ಲಾರಿಯಿಂದ ಕೆಳಕ್ಕೆ ಇಳಿಸಿದ ಬೋಗಿಗಳನ್ನು ರೈಲಿನ ರೂಪದಲ್ಲಿ ಒಂದರ ಹಿಂದೊಂದರಂತೆ ಜೋಡಿಸಲಾಗುತ್ತದೆ. ಬಳಿಕ ರಾತ್ರಿ ವೇಳೆ ಸಿಗ್ನಲಿಂಗ್, ಸುರಕ್ಷತೆ, ಭಾರ ಇತರ ಪರೀಕ್ಷೆಗಳನ್ನು ಸಿಎಂಆರ್‌ಎಸ್ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ನಡೆಸುತ್ತಾರೆ. ಬಳಿಕವೇ ಅದನ್ನು ಸೇವೆ ನಿಯೋಜಿಸಲಾಗುತ್ತದೆ. ಡಿಸೆಂಬರ್ 2ನೇ ವಾರದ ಇದರ ಸೇವೆ ನಿರೀಕ್ಷಿಸಬಹುದಾಗಿದೆ.












Click it and Unblock the Notifications