'ಸಿದ್ದರಾಮಯ್ಯ ಕರೆದರೆ ಬಿಜೆಪಿಗೆ ಹೋದವರು ಬರುತ್ತಾರೆ'
ಬೆಂಗಳೂರು ಫೆಬ್ರವರಿ 29; ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಶುಕ್ರವಾರ ಬೆಂಗಳೂರಿನಲ್ಲಿ ಆಡಿದ ಮಾತೊಂದು ಕಾಂಗ್ರೆಸ್ ಒಳಗೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಮಹಿಳಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಅವರು, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಸಚಿವರಾಗಿರುವವರನ್ನು ಸಿದ್ದರಾಮಯ್ಯ ಅವರು ಕರೆದರೆ ಪುನಃ ಪಕ್ಷಕ್ಕೆ ವಾಪಸು ಬರುತ್ತಾರೆ ಎಂದು ಹೇಳಿ ಅಚ್ಚರಿಗೆ ಕಾರಣರಾಗಿದ್ದಾರೆ. ಮಾರ್ಗರೇಟ್ ಆಳ್ವಾ ಅವರು ಈ ಮಾತು ಕೇಳಿಸಿಕೊಂಡು ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಅವರು ನಸುನಕ್ಕು ಸುಮ್ಮನಾಗಿದ್ದರು.
ಪ್ರಸ್ತುತ ರಾಜಕಾರಣವು ಹೀನಾಯ ಸ್ಥಿತಿಯನ್ನು ತಲುಪಿದೆ. ಆಪರೇಷನ್ ಕಮಲದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಇನ್ನೂ ಚೆನ್ನಾಗಿ ತಿಳಿದಿದೆ. ಆದರೆ ಅವರು ಕರೆದರೆ ಬಿಜೆಪಿಗೆ ಹೋದವರು ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಮಾರ್ಗರೇಟ್ ಆಳ್ವ ಹೇಳಿರುವುದರಲ್ಲಿ ಸತ್ಯಾಂಶ ಇರಬಹುದು. ಸುಳ್ಳು ಹೇಳಲು ಸಾಧ್ಯವೇ? ಎಂದಿದ್ದಾರೆ. ಇಂತಹ ವಿಚಾರಗಳಲ್ಲಿ ಯಾರೂ ಸುಮ್ಮನೇ ಹೇಳಿಕೆ ಕೊಡುವುದಿಲ್ಲ. ಸತ್ಯಾಂಶ ಇರುತ್ತದೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡುತ್ತೇನೆ ಎಂದಿದ್ದಾರೆ.












Click it and Unblock the Notifications