Actor Darshan Bail: ಪೊಲೀಸರು ಸಾಕ್ಷಿ ತಿರುಚಿದ್ರಾ? ದರ್ಶನ್ ಪರ ವಕೀಲರ ವಾದವೇನು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೊನೆಗೂ ನಡೆದಿದೆ. ಮೂರು ಬಾರಿ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಹಿರಿಯ ವಕೀಲ ಸಿ.ವಿ. ನಾಗೇಶ್ ದರ್ಶನ್ ಪರವಾಗಿ ವಾದ ಮಂಡಿಸಿದರು. ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ ಎಂದು ವಾದಿಸಿದರು.
ಈ ಪ್ರಕರಣದಲ್ಲಿ ಪೊಲೀಸರ ತನಿಖೆ ಬಗ್ಗೆ ಟೀಕಿಸಿದ ವಕೀಲ ನಾಗೇಶ್, ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ ಎಂದು ವಾದಿಸಿದರು. ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿರುವ ಮಾಹಿತಿಗಳಿಗೂ ಸಾಕ್ಷಿಗಳು ನೀಡಿರುವ ಹೇಳಿಕೆಗು ಸಾಕಷ್ಟು ವ್ಯತ್ಯಾಸ ಇದೆ ಎಂದು ವಾದ ಮಂಡಿಸಿದರು.

ದರ್ಶನ್ ಮನೆಯಿಂದ ಪೊಲೀಸರು ವಶಕ್ಕೆ ಪಡೆ ಬಟ್ಟೆ, ಶೂಗಳ ಬಗ್ಗೆ ಪ್ರಸ್ತಾಪಿಸಿದ ಸಿವಿ ನಾಗೇಶ್, ಪಂಚನಾಮೆಯಲ್ಲಿ ದರ್ಶನ್ ಚಪ್ಪಲಿ ಧರಿಸಿದ್ದರು ಎಂದು ಉಲ್ಲೇಖಿಸಲಾಗಿದೆ ಆದರೆ ರಿಕವರಿ ಮಾಡಿರುವುದು ಶೂಗಳನ್ನು, ಆ ಶೂಗಳಲ್ಲಿ ರಕ್ತದ ಕಲೆ ಇದೆ ಎಂದು ಹೇಳಲಾಗಿದೆ. ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಒಗೆದು ಒಣಗಿಸಿದ್ದಾರೆ ಎಂದು ಹೇಳಿಕೆ ನೀಡಿದ ಬಳಿಕ, ಬಟ್ಟೆಗಳನ್ನು ರಿಕವರಿ ಮಾಡಲಾಗಿದೆ, ಒಗೆದ ಬಟ್ಟೆಗಳಲ್ಲಿ ರಕ್ತದ ಕಲೆ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ದರ್ಶನ್ ಸಾಕ್ಷಿ ನಾಶ ಮಾಡಲು 37 ಲಕ್ಷ ಹಣ ಕೊಟ್ಟಿರುವ ಬಗ್ಗೆ ಆರೋಪಪಟ್ಟಿಯಲ್ಲಿ ಉಲ್ಲೇಖವಿದೆ. ಮೇ 2ರಂದು ದರ್ಶನ್‌ಗೆ ಈ ಹಣ ನೀಡಲಾಗಿದೆ. ಮೇ 2ರಂದೇ ಹಣವನ್ನು ಸಾಕ್ಷಿಗಳಿಗೆ ನೀಡಲು ಇಟ್ಟಿದ್ದರು ಎಂದು ಹೇಳಲಾಗಿದೆ, ಅಂದರೆ ಮೇ 2ರಂದೇ ಬಂದ ಹಣವನ್ನು ಕೊಲೆ ಪ್ರಕರಣ ಮುಚ್ಚಿಡಲು ಇಟ್ಟುಕೊಂಡಿರಲು ಸಾಧ್ಯವೇ ಎಂದು ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.
ಹೀಗೆ ವಶಕ್ಕೆ ಪಡೆದಿರುವ ವಸ್ತುಗಳನ್ನು ಸಾಕ್ಷಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಜೂನ್ 9ರಂದು ಪಟ್ಟಣಗೆರೆ ಶೆಡ್‌ಗೆ ಹೋಗಿದ್ದ ಪೊಲೀಸರು ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಸಾಕ್ಷಿಗಳ ಹೇಳಿಕೆಯಿಂದ ತಿಳಿದುಬಂದಿದೆ. ಆದರೆ ಜೂನ್ 12ರಂದು ದರ್ಶನ್‌ರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ ಎನ್ನುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಸಿವಿ ನಾಗೇಶ್ ಸುದೀರ್ಘವಾಗಿ ವಾದ ಮಂಡಿಸಿದ್ದು, ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 5ರಂದು ಮಧ್ಯಾಹ್ನ 12.30ಕ್ಕೆ ಮುಂದೂಡಿದರು. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಕೂಡ ನಾಳೆ ಮಧ್ಯಾಹ್ನಕ್ಕೆ ಮುಂದೂಡಿದ್ದಾರೆ. ನಾಳೆ ಸಿವಿ ನಾಗೇಶ್ ಮತ್ತೆ ವಾದ ಮಾಡಲಿದ್ದು ಬಳಿಕ ನ್ಯಾಯಾಲಯ ಜಾಮೀನು ಬಗ್ಗೆ ಆದೇಶ ನೀಡುವ ಸಾಧ್ಯತೆ ಇದೆ.












Click it and Unblock the Notifications