ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ ಏಳು ಕೋಟಿ ಕನ್ನಡಿಗರ ಗೆಲುವು : ಸಿದ್ದರಾಮಯ್ಯ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ಸಿದ್ಧವಾಗಿದೆ. ಗೆಲುವಿನ ಹಿನ್ನಲೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲಾ ಕಾಂಗ್ರೆಸ್ ನಾಯಕರು ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಈಗಾಗಲೇ ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲಾ, ಡಿಕೆ ಶಿವಕುಮಾರ್ ಹೇಳಿದಂತೆ ಇದು ಕೇವಲ ಪಕ್ಷದ ಗೆಲುವಲ್ಲ ಬದಲಾಗಿ ಏಳು ಕೋಟಿ ಕನ್ನಡಿಗರ ಗೆಲುವು" ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಎಂದಿಗೂ ಸಂಪೂರ್ಣ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬಂದಿಲ್ಲ, ಅವರು ಆಪರೇಷನ್ ಕಮಲ ಎನ್ನುವ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದವು, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಆದಾಗೆಲ್ಲ ಸುಭದ್ರ ಸರ್ಕಾರ ರಚನೆ ಮಾಡಲು ಸಾಧ್ಯವಾಗಿಲ್ಲ ಎಂದರು.
2013ರಲ್ಲಿ ಜನ ಬಹುಮತ ನೀಡಿದ್ದರಿಂದ 5 ವರ್ಷ ಸುಭದ್ರ ಸರ್ಕಾರ ರಚನೆ ಮಾಡಿದ್ದೆವು, ನಮ್ಮ ಸರ್ಕಾರದ ಅವಧಿಯಲ್ಲಿ ಜನರ ಭರವಸೆಯನ್ನು ಈಡೇರಿಸಿದ್ದೇವೆ. ನಂತರ ಮೈತ್ರಿ ಸರ್ಕಾರ ಬಂದಿದ್ದರಿಂದ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಈಗ ಒಂದು ಪಕ್ಷಕ್ಕೆ ಅಧಿಕಾರ ನೀಡುವ ಮೂಲಕ ಬದಲಾವಣೆಗೆ ನಾಂದಿ ಹಾಡಿದ್ದಾರೆ ಎಂದರು.
ಬಿಜೆಪಿ, ಕುಮಾರಸ್ವಾಮಿ ಇದ್ದಾಗ ಸುಭದ್ರ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡಲು ಸಾಧ್ಯವಾಗಲಿಲ್ಲ. ಇದೆಲ್ಲವನ್ನೂ ನೋಡಿದ ಜನ ಒಂದು ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದು ನಿರ್ಧರಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು.
ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ: ಡಿಕೆಶಿ
ನಮ್ಮ ಸರ್ಕಾರ ಜಾರಿಗೆ ಬಂದರೆ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ನಾನು ಮತ್ತು ಸಿದ್ದರಾಮಯ್ಯ ನಾಡದೇವತೆ ಚಾಮುಂಡೇಶ್ವರಿ ಮುಂದು ಪ್ರಮಾಣ ಮಾಡಿದ್ದೇವೆ. ಎಲ್ಲಾ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಕಾಂಗ್ರೆಸ್‌ನಲ್ಲಿ ವ್ಯಕ್ತಿ ಪೂಜೆ ಇಲ್ಲ, ಪಕ್ಷದ ಪೂಜೆ ಮಾತ್ರ ಇದೆ ಎಂದರು.












Click it and Unblock the Notifications