Ejipura flyover ಈಜಿದಲ್ಲೇ ಈಜ್ತಿದೆ ಈಜಿಪುರ ಮೇಲ್ಸೇತುವೆ ಕಾಮಗಾರಿ: ನೋಡಿನೇ ಸುಸ್ತಾಗ್ತಿದೆ ಅಂತಿದ್ದಾರೆ ಜನ!
ಬೆಂಗಳೂರಿನ ಈಜಿಪುರ ಮೇಲ್ಸೇತುವೆ ಕಾಮಗಾರಿ ಈಜಿದಲ್ಲೇ ಈಜ್ತಿದೆ. ಈ ಕಾಮಗಾರಿ ಅದ್ಯಾವಾಗ ಮುಗಿಯುತ್ತೋ ಅಂತ ಜನ ಬಿಬಿಎಂಪಿಗೆ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗೆ ಶಾಪ ಹಾಕುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಕಾಮಗಾರಿ ಪ್ರಾರಂಭವಾಗಿದ್ದು 2017ರಲ್ಲಿ ಅಲ್ಲಿಂದಲೂ ಈ ಕಾಮಗಾರಿ ಕುಂಟುತ್ತಲ್ಲೇ ಸಾಗುತ್ತಿದೆ. ಇದು ನಮ್ಮ ಕಾಲದಲ್ಲೇ ಮುಗಿಯುತ್ತಾ ಎಂದು ಜನ ಪ್ರಶ್ನೆ ಮಾಡುವ ಮಟ್ಟಕ್ಕೆ ಈ ಕಾಮಗಾರಿ ಆಮೆ ವೇಗದಲ್ಲೇ ಹೋಗುತ್ತಿದೆ. ಅಲ್ಲ ಅಲ್ಲ ಪಾಪ ಆಮೆಯನ್ನೂ ನಾಚಿಸುವ ವೇಗದಲ್ಲಿದೆ ಈ ಕಾಮಗಾರಿ.
ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಗ್ರಹಣ ಹಿಡಿದು ಬರೋಬ್ಬರಿ 7 ವರ್ಷಗಳೇ ಆಗಿವೆ. ಪಾಲಿಕೆಯ ಮೇಯರ್, ಸಂಸದರು, ಬಿಬಿಎಂಪಿ ಕಮಿಷನರ್, ಶಾಸಕರು ಹಾಗೂ ಖುದ್ದು ಮುಖ್ಯಮಂತ್ರಿ ಬಂದು ನಿರ್ದೇಶನ ನೀಡಿದ ಮೇಲೂ ಈ ಕಾಮಗಾರಿಯಲ್ಲಿ ಹೇಳಿಕೊಳ್ಳುವಂತಹ ಯಾವ ಬದಲಾವಣೆಯೂ ಆಗಿಲ್ಲ. ಈ ಈಜಿಪುರ ಸೇತುವೆ ಕಾಮಗಾರಿ ಒಂದೇ ಜಾಗದಲ್ಲಿ ಈಜಿ ಈಜಿತ್ತಿದ್ದರೆ, ಈ ಮಾರ್ಗದಲ್ಲಿ ಓಡಾಡುವ ಜನ ಈ ಕಾಮಗಾರಿಯನ್ನು ನೋಡಿಯೇ ಸುಸ್ತಾಗ್ತಿದ್ದಾರೆ.

ರಾಜಧಾನಿ ಬೆಂಗಳೂರಿನ ಎರಡನೇ ಅತಿ ಉದ್ದನೆಯ ಮೇಲ್ಸೇತುವೆ ಇದಾಗಿದೆ. ಆದರೆ, ಈ ಸೇತುವೆ ನಿರ್ಮಾಣದ ಕಾಮಗಾರಿ ಅದ್ಯಾವ ಕಾಲಕ್ಕೆ ಮುಗಿಯುತ್ತೋ ಎನ್ನುವಂತಾಗಿದೆ. ಅಪೂರ್ಣವಾಗಿದ್ದ ಕಾಮಗಾರಿಯನ್ನು ಪೂರ್ಣ ಮಾಡುವ ಉದ್ದೇಶದಿಂದಾಗಿ ಟೆಂಡರ್ ಪಡೆದಿರುವ ಕಂಪನಿ ಸಹ ಸ್ಲೋ ಆಗಿ ಕೆಲಸ ಮಾಡುತ್ತಿದೆ ಎನ್ನುವ ಆರೋಪದ ಮೇಲೆ ಗುತ್ತಿಗೆ ರದ್ದು ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ ಎನ್ನಲಾಗುತ್ತಿದೆ.
ಏನಿದು ಈಜಿಪುರ ಮೇಲ್ಸೇತುವೆ ಕಾಮಗಾರಿ: ಈಜಿಪುರ ಕಾಮಗಾರಿ ವಿವರ
ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಈಜಿಪುರ ಕಾಮಗಾರಿಯೂ ಒಂದಾಗಿದೆ. ಬೆಂಗಳೂರಿನ ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ನಿತ್ಯವೂ ಆಗುವ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವುದು ಇದರ ಉದ್ದೇಶವಾಗಿತ್ತು. ಈ ಬೃಹತ್ ಕಾಮಗಾರಿಯನ್ನು 2017ರಲ್ಲೇ ಪ್ರಾರಂಭಿಸಲಾಗಿತ್ತು. 2019ರ ವೇಳೆಗೆ ಈ ಕಾಮಗಾರಿ ಮುಗಿದು ಹೋಗಲಿದೆ ಎಂದು ಬಿಬಿಎಂಪಿ ಹೇಳಿಕೊಂಡಿತ್ತು. ನಿಗದಿತ ಅವಧಿಗಿಂತ ಒಂದು ಅಥವಾ ಎರಡು ವರ್ಷವಾದರೂ ಹೆಚ್ಚು ಸಮಯವಾಗಿದ್ದರೆ, ಸ್ವಲ್ಪ ವಿಳಂಬವಾಗಿದೆ ಎನ್ನಬಹುದಿತ್ತು. ಆದರೆ, ಈ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿಗಾಗಿ 203.20 ಕೋಟಿ ರೂ ಅನುದಾನ ನಿಗದಿ ಮಾಡಲಾಗಿತ್ತು. ಆದರೆ, ಅದರ ವೆಚ್ಚ ಈಗ ಹಲವು ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೆ.
ಕಾಮಗಾರಿಯ ಗುತ್ತಿಗೆ ತೆಗೆದುಕೊಂಡಿದ್ದ ಸಿಂಪ್ಲೆಕ್ಸ್ ಕಂಪನಿ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಲಿಲ್ಲ. ಹೀಗಾಗಿ, ಗುತ್ತಿಗೆ ರದ್ದು ಮಾಡಿ ಅಪೂರ್ಣಗೊಂಡ ಕಾಮಗಾರಿ ಪೂರ್ಣಕ್ಕೆ ಹೊಸದಾಗಿ ಟೆಂಡರ್ ಆಹ್ವಾನಿಸಲಾಯಿತು. ಇದನ್ನು 2023ರ ನವೆಂಬರ್‌ನಲ್ಲಿ ಬಿಎಸ್‌ಸಿಪಿಎಲ್ ಎನ್ನವು ಕಂಪನಿಗೆ ಗುತ್ತಿಗೆ ನೀಡಿತ್ತು ಬಿಬಿಎಂಪಿ. ಈ ಕಾಮಗಾರಿ ಪೂರ್ಣಕ್ಕಾಗಿ 176.11 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಅಂದರೆ ಮೊದಲು ಕಾಮಗಾರಿಗೆ ನಿಗದಿ ಮಾಡಿದ್ದಕ್ಕಿಂತಲೂ 48 ಕೋಟಿ ರೂಪಾಯಿ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಈ ಮೇಲ್ಸೇತುವೆಯಲ್ಲಿ ಒಟ್ಟು 81 ಪಿಲ್ಲರ್‌ಗಳ ಪೈಕಿ 67 ಪಿಲ್ಲರ್ ಅಷ್ಟೇ ಆಗಿರೋದು.
ಈ ಭಾಗದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಕಂಟ್ರೋಲ್‌ಗೆ ಬಿಬಿಎಂಪಿಯು ಈಜಿಪುರ ಮುಖ್ಯರಸ್ತೆಯ ಒಳ ವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಕೈಗೊಂಡಿದ್ದ 2.5 ಕಿ.ಮೀ. ಉದ್ದದ ಮೇಲ್ಸೇತುವೆಯ ಬಾಕಿ ಕಾಮಗಾರಿ ಮುಗಿಸಲು ಟೆಂಡರ್ ಆಹ್ವಾನಿಸಿತ್ತು. ಹೈದರಾಬಾದ್ ಮೂಲದ ಬಿಎಸ್‌ಸಿಪಿಎಲ್ ಪ್ರೈವೇಟ್ ಲಿಮಿಟೆಡ್‌ಗೆ ಗುತ್ತಿಗೆಯನ್ನೂ ನೀಡಲಾಗಿದೆ. 2023ರ ನ.15ಗೆ ಕಾರ್ಯಾದೇಶ ಪತ್ರವನ್ನು ಕೊಟ್ಟು 15 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ ಅಂತ ಸೂಚನೆ ನೀಡಲಾಗಿತ್ತು. ಇದಾಗಿ ಬರೋಬ್ಬರಿ 10 ತಿಂಗಳಾದರೂ ಆಮೆಗಿಂತ ಕಡಿಮೆ ವೇಗವಾಗಿ ಈ ಕಾಮಗಾರಿ ನಡಿತಿದೆ. ಬಿಬಿಎಂಪಿಯ ಯೋಜನಾ ವಿಭಾಗದವರು ಬೇಗ ಕೆಲಸ ಮುಗಸ್ರಿ ಅಂತ ಗುತ್ತಿಗೆದಾರರಿಗೆ ವಾರ್ನಿಂಗ್ ಕೊಟ್ಟಿದ್ದೂ ಆಗಿದೆ. ಆದರೆ, ಕಾಮಗಾರಿ ಮತ್ರ ನಡೆಸುತ್ತಿಲ್ಲ. ಇದೇ ಕಾರಣಕ್ಕೆ ಈ ಗುತ್ತಿಗೆದಾರರನ್ನೂ ರದ್ದುಪಡಿಸುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ ಎನ್ನಲಾಗಿದೆ.
ಮುಖ್ಯಮಂತ್ರಿಯೇ ಸೂಚನೆ ನೀಡಿದ್ದರು
ಈ ಕಾಮಗಾರಿಯನ್ನು ಬೇಗ ಮುಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿರ್ದೇಶನ ನೀಡಿದ್ದರು. ಈಚೆಗೆ ಸಿಟಿ ರೌಂಡ್ಸ್ ಮಾಡಿದಾಗ ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನಯ ಸಹ ಪರಿಶೀಲನೆ ಮಾಡಿದ್ದರು. ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಬಿಬಿಎಂಪಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಗುತ್ತಿಗೆದಾರರನ ವಿರುದ್ಧ ನೋಟಿಸ್ ಕೊಡ್ರಿ, ಕಾಮಗಾರಿ ಸ್ಟಾರ್ಟ್ ಮಾಡಲಿಲ್ಲ ಅಂದ್ರೆ, ಗುತ್ತಿಗೆಯನ್ನು ಕ್ಯಾನ್ಸಲ್ ಮಾಡ್ಸಿ ಹೊಸಬರಿಗೆ ಕೊಡಿ ಎಂದು ಸೂಚನೆ ನೀಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇಲೆ ಬಿಬಿಎಂಪಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications