ಒಂದೇ ದಿನ ಗಾಂಧಿ ಜಯಂತಿ-ಪಿತೃಪಕ್ಷ; ಮಾಂಸಪ್ರಿಯರಿಂದ ದೊಡ್ಡ ಡಿಮ್ಯಾಂಡ್
ಈ ವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಜೊತೆಗೆ ಮಹಾಲಯ ಅಮಾವಾಸ್ಯೆ (ಪಿತೃಪಕ್ಷ) ಕೂಡ ಬಂದಿದೆ. ಇದು ಮಾಂಸಾಹಾರಿಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಗಾಂಧಿ ಜಯಂತಿ ಹಿನ್ನೆಲೆ ಪ್ರತಿ ವರ್ಷವೂ ಆ ದಿನ ಮಾಂಸಾಹಾರ ನಿಷೇಧ ಮಾಡಲಾಗುತ್ತದೆ. ಆದರೆ, ಪಿತೃಪಕ್ಷಕ್ಕೆ ಬಹುತೇಕರು ಮಾಂಸದ ಖಾದ್ಯಗಳನ್ನೇ ಮಾಡುವ ಪದ್ಧತಿಯಲ್ಲೇ ಬಂದಿದ್ದಾರೆ.
ಮನೆಯ ಹಿರಿಯರಿಗೆ ನೆಚ್ಚಿನ ಮಾಂಸಾಹಾರದ ಖಾದ್ಯಗಳನ್ನು ಸಿದ್ಧಪಡಿಸಿ, ಎಡೆಯಿಟ್ಟು ಮೂಳೆ ಕಡಿಯಬೇಕು ಅಂದುಕೊಂಡಿದ್ದವರಿಗೆ ಬಿಬಿಎಂಪಿ ರೂಲ್ಸ್ ನಿರಾಸೆ ಮೂಡಿಸುವ ಸಾಧ್ಯತೆ. ಇದಕ್ಕೆ ಮುಂಜಾಗ್ರತೆ ವಹಿಸಿರುವ ಮಾಂಸಹಾರಿಗಳು ದಯವಿಟ್ಟು ಮಹಾಲಯ ಅಮಾವಾಸ್ಯೆಯಂದು ಮಾಂಸ ಖರೀದಿಗೆ ಅನುಮತಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಕೂಡ ಅಕ್ಟೋಬರ್ 2ರಂದು ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ಪಿತೃಪಕ್ಷ ಹಬ್ಬ ಬಂದಿದೆ. ಹಾಗಾಗಿ ಈ ಬಾರಿ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದೆ.
ಪಿತೃಪಕ್ಷದ ಪ್ರಯುಕ್ತ ಬಹುತೇಕರು ಮಾಂಸಾಹಾರ ಸಿದ್ಧಪಡಿಸಿ, ಮನೆಯಲ್ಲಿ ಅಗಲಿದ ಹಿರಿಯರನ್ನು ನೆನೆದು ಎಡೆ ಹಾಕುತ್ತಾರೆ. ಇದನ್ನು ಜನ ಒಂದು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಪ್ರತಿ ವರ್ಷ ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಈ ಬಾರಿ ಅದೇ ದಿನ ಹಬ್ಬ ಬಂದಿದೆ. ಆ ನಿಯಮ ಹೇರಿದರೆ, ಪಿತೃಪಕ್ಷ ಆಚರಿಸುವವರಿಗೆ ಭಾರಿ ತೊಂದರೆಯಾಗಲಿದೆ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ನಾಗರಾಜು ಕಳವಳ ವ್ಯಕ್ತಪಡಿಸಿದ್ದಾರೆ.
ಹಬ್ಬದ ದಿನ ಮಾಂಸ ಮಾರಾಟಕ್ಕೆ ಅನುವು ಮಾಡಿಕೊಬೇಕು. ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಕೂಡ ಮಾಡಿದ್ದೇವೆ. ಆದರೆ ಅಲ್ಲಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಅಂದು ಮಾಂಸ ಮಾರಾಟಕ್ಕೆ ಅವಕಾಶ ನೀಡದಿದ್ದರೆ ಅದನ್ನು ಮೊದಲೇ ತಿಳಿಸಬೇಕು. ಹಬ್ಬ ಆಚರಿಸುವವರು ಮರುದಿನಕ್ಕೆ ಮುಂದೂಡಬಹುದು. ಆ ದಿನವೇ ಪಿತೃಪಕ್ಷವನ್ನು ಆಚರಿಸಿ ಮಾಂಸಾಹಾರದ ಎಡೆ ಇಟ್ಟು ಸಂಪ್ರದಾಯ ಪಾಲಿಸುವುದು ಒಳ್ಳೆಯ ಪರಿಹಾರ ಎಂದಿದ್ದಾರೆ.
ಮಹಾತ್ಮಾ ಗಾಂಧಿ ಅವರು ಶಾಂತಿ ಪ್ರಿಯರಾದ ಕಾರಣ ಆ ಅವರ ಹುಟ್ಟುಹಬ್ಬವನ್ನು ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾಗಿ ಅಕ್ಟೋಬರ್ 2ರಂದು ದೇಶದೆಲ್ಲೆಡೆ ಮಾಂಸ ಹಾಗೂ ಮದ್ಯ ಮಾರಾಟವನ್ನು ಪ್ರತಿ ವರ್ಷ ನಿಷೇಧಿಸಲಾಗುತ್ತದೆ. ಅಲ್ಲಿನ ಸ್ಥಳೀಯ ಆಡಳಿತಗಳು ಈ ಬಗ್ಗೆ ಆದೇಶ ಹೊರಡಿಸುತ್ತವೆ. ಹಾಗಾಗಿ ಅಂದು ಮಾಂಸ ಮಾರಾಟ ನಿಷಿದ್ಧ. ಈ ಬಾರಿ ಹಬ್ಬದ ಆಚರಣೆಯ ಹುರುಪಿನಲ್ಲಿದ್ದವರು, ಬಾಡೇ ನಮ್ ಗಾಡು...ಮಾಂಸವಿಲ್ಲದಿದ್ದರೆ ಹಬ್ಬವೇ ಅಪೂರ್ಣ ಎಂದು ಬೇಸರ ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications