Marathahalli: ಮಿನಿ ಆಂಧ್ರವಾಗುತ್ತಿದೆಯಾ ಮಾರತ್ತಹಳ್ಳಿ? ತೆಲುಗು ಭಾಷಿಕನ ಪುಂಡಾಟದ ವಿಡಿಯೋ ವೈರಲ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪರಭಾಷಿಕರ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ದೂರುತ್ತಲೇ ಇದ್ದಾರೆ. ವಲಸೆ ನಿಯಂತ್ರಿಸಿ ಎಂದು ಸರ್ಕಾರಕ್ಕೆ ಮನವಿಯೂ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಕನ್ನಡಿಗರನ್ನು ಬೆಚ್ಚಿಬೀಳಿಸುತ್ತಿವೆ. ಪರಭಾಷಿಕನೊಬ್ಬ ಸಾರ್ವಜನಿಕವಾಗಿ ಅವಾಚ್ಯವಾಗಿ ಮಾತನಾಡಿ ಪುಂಡಾಟ ನಡೆಸಿದ್ದಾನೆ. ಬೆಂಗಳೂರು ಪೊಲೀಸರಿಗೆ ಅವಾಜ್ ಕೂಡ ಹಾಕಿದ್ದಾನೆ.
ಮಾರತ್ತಹಳ್ಳಿಯಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ತೆಲುಗು ಭಾಷಿಕನೊಬ್ಬ ಬೆಂಗಳೂರಿನ ನೆಲದಲ್ಲಿ ನಿಂತು ದರ್ಪ ತೋರಿದ್ದಲ್ಲದೆ, ಬೆಂಗಳೂರು ಪೊಲೀಸರ ಬಗ್ಗೆ ನಾಲಿಗೆಹರಿಬಿಟ್ಟಿದ್ದಾನೆ. ಈ ಘಟನೆ ಮಾರತ್‌ಹಳ್ಳಿ ಬಳಿ ನಡೆದಿದೆ ಎಂದು ಹೇಳಲಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿ ಆಂಧ್ರಪ್ರದೇಶದ ಮೂಲದವನು ಎಂದು ಹೇಳಲಾಗುತ್ತಿದೆ. ಈತ ಬೆಂಗಳೂರು ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ಈತ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಆತ ಕಂಠಪೂರ್ತಿ ಕುಡಿದು ಪುಂಡಾಟ ಮೆರೆದಿದ್ದಾನೆ ಎಂದು ಹೇಳಿದ್ದಾರೆ. ಆಟೋ ಚಾಲಕನಾದರೂ ಯಾವುದೇ ಸಮವಸ್ತ್ರ ಧರಿಸದೆ, ಶರ್ಟ್ ಕಾಲರ್ ಎಗರಿಸಿ ಅವಾಜ್ ಹಾಕಿದ್ದಾನೆ.
ಕುಡಿದ ಮತ್ತಲ್ಲಿ ಡೆಲಿವರಿ ಬಾಯ್ ಬೈಕ್‌ಗೆ ಈತ ಗುದ್ದಿದ್ದಲ್ಲದೆ ಈ ರೀತಿ ವರ್ತಿಸಿದ್ದಾನೆ. ಇದನ್ನು ಪ್ರಶ್ನಿಸಿದಾಗ ಪೊಲೀಸರಿಗೆ ಹೇಳ್ತೀಯಾ ಎಂದು ಅವಾಜ್ ಹಾಕಿದ್ದಾನೆ. ಅಲ್ಲದೆ, ಪೊಲೀಸರಿಗೆ ತನ್ನ ಗಾಡಿ ಸಂಖ್ಯೆಯನ್ನೂ ಜೋರಾಗಿ ಹೇಳಿ, ಇದೇ ನನ್ನ ಗಾಡಿ, ಇಡೀ ಕರ್ನಾಟಕದಲ್ಲೇ ತಾಕತ್ತಿದ್ರೆ ನನ್ನ ಗಾಡಿಯನ್ನ ಇಡ್ಕೊಳ್ರೋ ಎಂದು ತೆಲುಗು ಭಾಷೆಯಲ್ಲೇ ಸವಾಲ್ ಹಾಕಿದ್ದಾನೆ. ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಲ್ಲಿಂದ ಹೊರಟಿದ್ದಾನೆ.

ಈ ವಿಡಿಯೋ ಅನ್ನು ಸ್ಥಳೀಯರು ರೆಕಾರ್ಡ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಇದು ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಈ ದುಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಿಂದಲೋ ಅನ್ನಕ್ಕಾಗಿ ಬೆಂಗಳೂರಿಗೆ ಬಂದವರಿಂದ ಇಂತಹ ಮರ್ಯಾದೆ ಕನ್ನಡಿಗರಿಗೆ ಆಗಲೇಬೇಕು. ಇಲ್ಲಿ ಆಶ್ರಯ ಕೊಟ್ಟಿದ್ದಕ್ಕೆ ಪರಭಾಷಿಕರು ಕೊಡುವ ಬೆಲೆ ಇದೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಈ ಘಟನೆ ಮಾರತ್ತಹಳ್ಳಿಯಲ್ಲಿ ನಡೆದಿರುವುದರಿಂದ ಹಲವು ಚರ್ಚೆಗಳು ಕೂಡ ನಡೆದಿವೆ. 'ಮಾರತ್ತಹಳ್ಳಿಯಲ್ಲಿ ತೆಲುಗು ಭಾಷಿಕರು ಮಿತಿಮೀರಿದ್ದಾರೆ. ಎಲ್ಲೆಲ್ಲಿಂದಲೋ ಬಂದು ತುಂಬಿಕೊಂಡಿದ್ದಾರೆ. ಮಾರತ್ತಹಳ್ಳಿ ಈಗ ಅಕ್ಷರಶಃ ಮಿನಿ ಆಂಧ್ರವಾಗಿ ಬದಲಾಗಿದೆ. ಅಲ್ಲಿ ಕನ್ನಡ ಕೇಳೋದೆ ಅಪರೂಪ, ಅಲ್ಲಿ ತೆಲುಗು ಭಾಷಿಕರ ದೌಲತ್ತು ಕಡಿಮೆಯೇನಿಲ್ಲ' ಎಂದು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಮಿನಿ ಆಂಧ್ರ ಮಾರತ್ತಹಳ್ಳಿಯಲ್ಲಿ ಇಂತಹ ಘಟನೆಗಳಲ್ಲ ಕಾಮನ್. ಅಲ್ಲಿ ಮಾತನಾಡುವುದು ತೆಲುಗಲ್ಲೇ, ಮೆರೆಯುತ್ತಿರುವುದೂ ತೆಲುಗು ಭಾಷಿಕರೇ ಎಂದು ದೂರಿದ್ದಾರೆ. ಪೊಲೀಸರಿಗೇ ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕುತ್ತಾನೆ ಎಂದರೆ, ಇನ್ನು ಅಲ್ಲಿರುವವರು ಕನ್ನಡಿಗರನ್ನು ಹೇಗೆ ನಡೆಸಿಕೊಳ್ಳುತ್ತಾರೆ? ನೀವೇ ಯೋಚಿಸಿ' ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಈ ವಿಡಿಯೋ ಅನ್ನು ಹಲವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೆಲವರು 'ಇವನು ಕನ್ನಡದವನಲ್ಲ, ಹಾಗಾಗಿ ಇವನ ಮೇಲೆ ಯಾವ ಕ್ರಮ ಕೂಡ ತಗೋಳಲ್ಲ, ಇವನನ್ನ ಹಿಡಿದು ಅದಕ್ಕೆ ಬಿಫೋರ್ ಆಫ್ಟರ್ ಸಾಂಗ್ ಹಾಕಿ ಯಾವುದೇ ರೀಲ್ಸ್ ಮಾಡಿ ಹಾಕಲ್ಲ ಅಲ್ವ?' ಎಂದು ಪೊಲೀಸರ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ. ಆದರೆ, ಮಾರತ್ತಹಳ್ಳಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಆತನಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications