ಕೆಪಿಎಸ್ಸಿ ಅಕ್ರಮ : ರಾಜ್ಯಾದ್ಯಂತ ಲೋಕಸತ್ತಾ ಹೋರಾಟ
ಬೆಂಗಳೂರು, ಜ.9 : ಕೆಪಿಎಸ್‍ಸಿಯಲ್ಲಿನ 2011ರ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸುತ್ತಿರುವ ಲೋಕಸತ್ತಾ ಪಕ್ಷ ಸದ್ಯ ತನ್ನ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾಗಿದೆ. ಕಳೆದ ಒಂದೂವರೆ ತಿಂಗಳಿಂದ ಸತತವಾಗಿ ಹೋರಾಡುತ್ತಾ ಬಂದಿರುವ ಪಕ್ಷ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಬಟ್ಟೆ ತೋರಿಸುವುದು ಮತ್ತು ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವುದು ಮುಂತಾದ ನಿರ್ಣಯಗಳನ್ನು ಕೈಗೊಂಡಿದೆ.
ಪಕ್ಷ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮೌನ ವಹಿಸಿದೆ. ಆದ್ದರಿಂದ, ಹೋರಾಟದ ಮುಂದುವರೆದ ಭಾಗವಾಗಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಸೋಮವಾರ ಧಾರವಾಡದಲ್ಲಿ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದೆ. [ಲೋಕಸತ್ತಾ ಹೋರಾಟ]

ಲೋಕಸತ್ತಾ ಪಕ್ಷ ಹಗರಣದ ಬಗ್ಗೆ ಸಿಐಡಿ ನೀಡಿದ ತನಿಖಾ ವರದಿಯನ್ನು ಮೊದಲು ಬಹಿರಂಗಗೊಳಿಸಿತ್ತು. ನಂತರ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ, ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿತು. ಹಗರಣದ ಪ್ರಮುಖ ಆರೋಪಿ ಮತ್ತು ಕೆಪಿಎಸ್‍ಸಿ ಮಾಜಿ ಅಧ್ಯಕ್ಷರಾದ ಗೋನಾಳ್ ಭೀಮಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಿತು. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹೋರಾಟ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಸಿಐಡಿ ಪೊಲೀಸರು ಹಗರಣದ ಬಗ್ಗೆ ಮಧ್ಯಂತರ ವರದಿ ಸಲ್ಲಿಸಿ ನಾಲ್ಕು ತಿಂಗಳು ಕಳೆದಿದೆ. ಆದರೆ, ಸರ್ಕಾರ ಅದರ ಬಗ್ಗೆ ಮಾತನಾಡುತ್ತಿಲ್ಲ. ಸದ್ಯ ಸಿಐಡಿ ಸುಮಾರು 1500 ಪುಟಗಳ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಆದರೆ, ಅದನ್ನು ಸಲ್ಲಿಸಬಾರದೆಂದು ಸರ್ಕಾರ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ. ಆದ್ದರಿಂದ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಕ್ಷ ಹೋರಾಟ ಆರಂಭಿಸಿದೆ.
ಚುನಾವಣೆಗೆ ಸಿದ್ಧತೆ : ಮುಂಬರುವ ಲೋಕಸಭಾ ಚುನಾವಣೆಗೆ ಲೋಕಸತ್ತಾ ಪಕ್ಷವು ಸಿದ್ಧತೆ ಆರಂಭಿಸಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಶ್ರೀವಾಸ್ತವ ಅವರ ನೇತೃತ್ವದಲ್ಲಿ ಬುಧವಾರ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಬೆಂಗಳೂರು ನಗರದ ಎಲ್ಲಾ ನಾಲ್ಕು ಕ್ಷೇತ್ರಗಳಿಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಸಿದ್ಧಪಡಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಿ ಮೌಲ್ಯಾಧಾರಿತ ರಾಜಕಾರಣದ ತತ್ವವನ್ನು ಪ್ರತಿಪಾದಿಸಿತ್ತು.











Click it and Unblock the Notifications