ಬೆಂಗಳೂರು; ಸುಮನಹಳ್ಳಿ ಫ್ಲೈ ಓವರ್ ಮತ್ತೆ ಬಂದ್
ಬೆಂಗಳೂರು, ಡಿಸೆಂಬರ್ 10 : ನಾಯಂಡಹಳ್ಳಿ ಮತ್ತು ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮನಹಳ್ಳಿ ಫ್ಲೈ ಓವರ್ ಮೇಲೆ ವಾಹನ ಸಂಚಾರ ಮತ್ತೆ ಬಂದ್ ಆಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫ್ಲೈ ಓವರ್ ದುರಸ್ತಿ ಕಾರ್ಯವನ್ನು ಕೈಗೊಳ್ಳಲಿದೆ.
ನವೆಂಬರ್ ತಿಂಗಳಿನಲ್ಲಿ ಫ್ಲೈ ಓವರ್‌ನಲ್ಲಿ 6*4 ಅಳತೆಯ ಗುಂಡಿ ಕಾಣಿಸಿಕೊಂಡಿತ್ತು. ಆದ್ದರಿಂದ, ಸುಮಾರು 15 ದಿನಗಳ ಕಾಲ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಿದ್ದರು.
ಈಗ ಒಂದು ತಿಂಗಳ ಕಾಲ ಸುಮನಹಳ್ಳಿ ಫ್ಲೈ ಓವರ್ ಬಂದ್ ಆಗಲಿದೆ. ಕಾಮಗಾರಿಯನ್ನು ಎಂದು ಆರಂಭಿಸಬೇಕು ಎಂದು ಬಿಬಿಎಂಪಿ ಇನ್ನು ಅಧಿಕೃತ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಡಿಸೆಂಬರ್ 20ರ ಬಳಿಕ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
2007ರಲ್ಲಿ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಾಗ ಫ್ಲೈ ಓವರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಯಿತು. ಬಿಡಿಎ ಫ್ಲೈ ಓವರ್ ನಿರ್ಮಾಣದ ಗುತ್ತಿಗೆಯನ್ನು ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ನೀಡಿತು. 2010ರಲ್ಲಿ ಫ್ಲೈ ಓವರ್ ಲೋಕಾರ್ಪಣೆಗೊಂಡಿತು. 2016ರ ತನಕ ಇದರ ನಿರ್ವಹಣೆ ಬಿಡಿಎ ಕೈಯಲ್ಲಿ ಇತ್ತು, ಬಳಿಕ ಬಿಬಿಎಂಪಿಗೆ ಹಸ್ತಾಂತರವಾಯಿತು.

ಒಂದು ಕಾಮಗಾರಿ ಮುಗಿದಿದೆ
ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ಬಿದ್ದಿದ್ದ ಗುಂಡಿಯನ್ನು ಮುಚ್ಚುವ ಕಾಮಗಾರಿಯನ್ನು ಈಗಾಗಲೇ ಬಿಬಿಎಂಪಿ ಪೂರ್ಣಗೊಳಿಸಿದೆ. ಈಗ ಫ್ಲೈ ಓವರ್‌ನ ಇತರ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ, ಒಂದು ತಿಂಗಳ ಕಾಲ ವಾಹನ ಸಂಚಾರ ಬಂದ್ ಆಗಲಿದೆ.

ವಾಹನಗಳ ಸಂಚಾರ ಸ್ಥಗಿತ
ನಾಯಂಡಹಳ್ಳಿ ಮತ್ತು ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮನಹಳ್ಳಿ ಫ್ಲೈ ಓವರ್ ಮೇಲೆ ವಾಹನ ಸಂಚಾರವನ್ನು ಪೊಲೀಸರು ನಿಷೇಧಿಸಲಿದ್ದಾರೆ. ಜನರು ಸರ್ವೀಸ್ ರಸ್ತೆಯನ್ನು ಬಳಸಿ ಸಂಚಾರವನ್ನು ನಡೆಸಬಹುದಾಗಿದೆ. ಇದರಿಂದಾಗಿ ಫ್ಲೈ ಓವರ್ ಬಂದ್ ಆದರೆ ಸರ್ವೀಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ.

ಏನು ಕಾಮಗಾರಿ ನಡೆಯಲಿದೆ
ಫ್ಲೈ ಓವರ್ ಬೀಮ್, ಸ್ಲ್ಯಾಬ್‌ಗಳಲ್ಲಿ ಕಾಂಕ್ರೀಟ್ ಪದರ ಟೊಳ್ಳಾಗಿದೆ. ಸೇತುವೆ ಪಿಲ್ಲರ್ ಮತ್ತು ರಸ್ತೆಯ ನಡುವಿನ ಬೇರಿಂಗ್ ಬದಲಾವಣೆ ಮಾಡಬೇಕಿದೆ. ಈ ಕಾಮಗಾರಿ ಕೈಗೊಳ್ಳುವ ಕಾರಣ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ.

ಬಿಬಿಎಂಪಿ ಹೇಳುವುದೇನು?
ಸುಮನಹಳ್ಳಿ ಫ್ಲೈ ಓವರ್ ನಿರ್ವಹಣೆಯನ್ನು ಸರಿಯಾಗಿ ಮಾಡಿಲ್ಲ. ಆದ್ದರಿಂದ, ಈಗ ಕಾಮಗಾರಿ ಕೈಗೊಂಡು ದುರಸ್ತಿ ಮಾಡುವುದು ಅನಿವಾರ್ಯವಾಗಿದೆ. ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು ಕಾಮಗಾರಿ ಆರಂಭದ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ.
|
ಮೇಯರ್ ಟ್ವೀಟ್
ಬಿಬಿಎಂಪಿ ಮೇಯರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ತಜ್ಞರ ತಂಡ ಫ್ಲೈ ಓವರ್ ಪರಿಶೀಲನೆ ನಡೆಸಿ ಕಾಮಗಾರಿಗೆ ಎಷ್ಟು ವೆಚ್ಚವಾಗಲಿದೆ ಎಂದು ವರದಿ ನೀಡಿದೆ.











Click it and Unblock the Notifications