ಬೆಂಗಳೂರು ಸಬ್ ಅರ್ಬನ್ ರೈಲು: ಮಲ್ಲಿಗೆ ಮಾರ್ಗದ ಅಪ್‌ಡೇಟ್
ಬೆಂಗಳೂರು, ಜೂನ್ 17: ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ಇದಾಗಿದೆ.
ಒಟ್ಟು 4 ಮಾರ್ಗವಾಗಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈಗ ಕೆ-ರೈಡ್ 'ಮಲ್ಲಿಗೆ' ಮಾರ್ಗದ ಅಪ್‌ಡೇಟ್ ನೀಡಿದೆ. ಬೈಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಣಾವರ ನಡುವೆ ಸಂಪರ್ಕ ಕಲ್ಪಿಸುವ 25.01 ಕಿ. ಮೀ. ಮಾರ್ಗಕ್ಕೆ 'ಮಲ್ಲಿಗೆ' ಎಂದು ಹೆಸರಿಡಲಾಗಿದೆ.

ಕೆ-ರೈಡ್ ಜೂನ್ 15ರಂದು 'ಮಲ್ಲಿಗೆ' ಮಾರ್ಗದಲ್ಲಿ ಒಟ್ಟು 8 ಸಬ್ ಅರ್ಬನ್ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಲು ಟೆಂಡರ್ ಕರೆದಿದೆ. ಆಗಸ್ಟ್‌ನಲ್ಲಿ ಟೆಂಡರ್ ಅಂತಿಮಗೊಳ್ಳುವ ನಿರೀಕ್ಷೆ ಇದ್ದು, 24 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಷರತ್ತು ಹಾಕಲಾಗಿದೆ.
ನಿಲ್ದಾಣದ ವಿವರಗಳು: ಬೈಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಣಾವರ ನಡುವಿನ ಮಾರ್ಗದಲ್ಲಿ ಒಟ್ಟು 8 ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಈ ನಿಲ್ದಾಣಗಳ ನಿರ್ಮಾಣ ವೆಚ್ಚ ಸುಮಾರು 455.8 ಕೋಟಿ ಎಂದು ಅಂದಾಜಿಸಲಾಗಿದೆ.
ಟೆಂಡರ್ ಮಾಹಿತಿಯಂತೆ ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕ ನಗರ, ಹೆಬ್ಬಾಳ ಮತ್ತು ಮತ್ತಿಕೆರೆಯಲ್ಲಿ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕಿದೆ. ಯೋಜನೆಗೆ ವೇಗ ನೀಡಲು ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಉಳಿದ ನಿಲ್ದಾಣ ನಿರ್ಮಾಣಕ್ಕೂ ಶೀಘ್ರ ಟೆಂಡರ್ ಕರೆಯಲಾಗುತ್ತದೆ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ ಸರ್ಕಾರ 2028ರ ಅಂತ್ಯಕ್ಕೆ ಸಬ್ ಸರ್ಬನ್ ರೈಲು ಯೋಜನೆ 4 ಕಾರಿಡಾರ್‌ಗಳು ಸಿದ್ದವಾಗಬೇಕು ಎಂದು ಗಡುವು ನೀಡಿದೆ. ಆದ್ದರಿಂದ ಕಾಮಗಾರಿಗೆ ಚುರುಕು ನೀಡಲಾಗಿದೆ. ಎರಡು ಮಾರ್ಗದ ಟೆಂಡರ್ ಅನ್ನು ಪ್ರತಿಷ್ಠಿತ ಎಲ್ & ಟಿ ಪಡೆದುಕೊಂಡಿದ್ದು, ಈಗಾಗಲೇ ಕಾಮಗಾರಿ ಆರಂಭಿಸಿದೆ.
ಬೈಯಪ್ಪನಹಳ್ಳಿ-ಚಿಕ್ಕಬಣಾವರ ನಡುವಿನ 'ಮಲ್ಲಿಗೆ' ಮಾರ್ಗದ ಕಾಮಗಾರಿಗಾಗಿ ನೈಋತ್ಯ ರೈಲ್ವೆ ಈಗಾಗಲೇ 157 ಎಕರೆ ಭೂಮಿಯನ್ನು ಕೆ-ರೈಡ್‌ಗೆ ಹಸ್ತಾಂತರ ಮಾಡಿದೆ. ಈ ಭೂಮು ಕಾಮಗಾರಿ ನಡೆಸುತ್ತಿರುವ ಎಲ್ & ಟಿ ಕಂಪನಿಗೆ ಹಸ್ತಾಂತರ ಮಾಡಲಾಗುತ್ತದೆ.
ಸಬ್ ಅರ್ಬನ್ ರೈಲು ಯೋಜನೆ ಕಾರಿಡಾರ್-2 'ಮಲ್ಲಿಗೆ' ಬೈಯಪ್ಪನಹಳ್ಳಿ, ಬಾಣಸವಾಡಿ, ನಾಗವಾರ, ಹೆಬ್ಬಾಳ, ಯಶವಂತಪುರ, ಜಾಲಹಳ್ಳಿ, ಶೆಟ್ಟಿಹಳ್ಳಿ ಮೂಲಕ ಚಿಕ್ಕಬಣಾವರ ತಲುಪಲಿದೆ. ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳ ವಿನ್ಯಾಸಗಳನ್ನು ಅಂತಿಮಗೊಳಿಸಲಾಗಿದೆ.
ಮಾರ್ಗದಲ್ಲಿ ಬೆನ್ನಿಗಾನಹಳ್ಳಿ, ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ, ಮತ್ತಿಕೆರೆ, ಯಶವಂತರಪುರ, ಶೆಟ್ಟಿಹಳ್ಳಿ ನಿಲ್ದಾಣಗಳ ವಿನ್ಯಾಸ ಅಂತಿಮಗೊಂಡಿದ್ದು, 2 ಎತ್ತರಿಸಿದ ನಿಲ್ದಾಣ, ಎರಡು ಇಂಟರ್‌ಚೇಂಜ್ ನಿಲ್ದಾಣ, 8 ನೆಲಸ್ತರದ ನಿಲ್ದಾಣ ನಿರ್ಮಾಣವಾಗುತ್ತಿದೆ.
2022ರಲ್ಲಿ 'ಮಲ್ಲಿಗೆ' ಕಾರಿಡಾರ್ ಸಿವಿಲ್ ಕಾಮಗಾರಿಗೆ ಎಲ್ & ಟಿ ಕಂಪನಿಗೆ ಕೆ-ರೈಡ್ ಟೆಂಡರ್ ನೀಡಿದೆ. 27 ತಿಂಗಳಿನಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂದು ಷರತ್ತು ಹಾಕಲಾಗಿತ್ತು. ಆದರೆ ನೈಋತ್ಯ ರೈಲ್ವೆ ಜೊತೆಗೆ ಭೂಮಿ ಹಸ್ತಾಂತರ ಮಾಡುವ ಪ್ರಕ್ರಿಯೆ ವಿಳಂಬವಾದ ಕಾರಣ ತಡವಾಗಿ ಕಾಮಗಾರಿ ಆರಂಭವಾಗಿದೆ.
ಸಬ್ ಅರ್ಬನ್ ರೈಲು ಯೋಜನೆಯಲ್ಲಿನ ನಿಲ್ದಾಣಗಳು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಫ್ಲಾಟ್ ಫಾರ್ಮ್ ಸ್ಕ್ರೀನ್‌ಗಳನ್ನು ಒಳಗೊಂಡಿರಲಿವೆ. ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆ, ಫ್ಲಾಟ್ ಫಾರ್ಮ್ ಸ್ಕ್ರೀನ್ ಅಳವಡಿಕೆ ಮಾಡಲು ಶೀಘ್ರದಲ್ಲೇ ಕೆ-ರೈಡ್ ಟೆಂಡರ್ ಕರೆಯಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚ ಹಂಚಿಕೆ ಮಾಡಿಕೊಂಡು ಬೆಂಗಳೂರು ಉಪನಗರ ರೈಲು ಯೋಜನೆ ಕೈಗೊಂಡಿವೆ. 1983ರಲ್ಲಿ ಮೊದಲು ಪ್ರಸ್ತಾವಿತವಾಗಿದ್ದ ಯೋಜನೆ ಇದು. 2022ರ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಚಾಲನೆ ನೀಡಿದ್ದರು.












Click it and Unblock the Notifications