Bengaluru Suburban Rail; ಕನಕ ಕಾರಿಡಾರ್ ಭೂ ಸ್ವಾಧೀನ ಅಪ್‌ಡೇಟ್
ಬೆಂಗಳೂರು, ಫೆಬ್ರವರಿ 04: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಲ್ಲಿ 4 ಕಾರಿಡಾರ್ ಇದ್ದು, ಸದ್ಯ ಕಾರಿಡಾರ್-4 (ಕನಕ ಲೈನ್) ಕುರಿತು ಅಪ್‌ಡೇಟ್ ಸಿಕ್ಕಿದೆ. ಈ ಕಾರಿಡಾರ್ ಇನ್ನೂ ಸಹ ಭೂ ಸ್ವಾಧೀನದ ಹಂತದಲ್ಲಿದೆ.
ಹೀಲಲಿಗೆ-ರಾಜನಕುಂಟೆ ನಡುವೆ ಕನಕ ಲೈನ್ ಸಂಪರ್ಕ ಕಲ್ಪಿಸುತ್ತದೆ. ಈ ಕಾರಿಡಾರ್‌ನಲ್ಲಿ 2026ರಲ್ಲಿ ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ. ಈ ಕಾರಿಡಾರ್ ನಿರ್ಮಾಣಕ್ಕಾಗಿ ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿಯು (ಕೆ-ರೈಡ್) ಭೂ ಸ್ವಾಧೀನವನ್ನು ಚುರುಕುಗೊಳಿಸಿದೆ.

ಕನಕ ಕಾರಿಡಾರ್ ನಿರ್ಮಾಣಕ್ಕೆ ಕೆ-ರೈಡ್ 48.122 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಭೂಮಿ ಯಲಹಂಕ, ಬೆಂಗಳೂರು ಪೂರ್ವ ಮತ್ತು ಆನೇಕಲ್ ವ್ಯಾಪ್ತಿಯಲ್ಲಿದೆ. ರೈಲ್ವೆ ಇಲಾಖೆ ಈಗಾಗಲೇ 115 ಎಕರೆ ಭೂಮಿಯನ್ನು ಕೆ-ರೈಡ್‌ಗೆ ಹಸ್ತಾಂತರ ಮಾಡಿದೆ.
2023ರಲ್ಲಿ ಟೆಂಡರ್: ಕನಕ ಕಾರಿಡಾರ್ ನಿರ್ಮಾಣಕ್ಕೆ ಕೆ-ರೈಡ್ 2023ರ ಡಿಸೆಂಬರ್‌ನಲ್ಲಿ ಎಲ್ & ಟಿ ಕಂಪನಿಗೆ ಟೆಂಡರ್ ನೀಡಿತ್ತು. ಈ ಯೋಜನೆಯ ವೆಚ್ಚ 1040.51 ಕೋಟಿ ರೂ.ಗಳು. 30 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಟೆಂಡರ್‌ನಲ್ಲಿ ತಿಳಿಸಲಾಗಿತ್ತು.
ಈ ಯೋಜನೆಗೆ ಅಗತ್ಯವಿರುವ ಶೇ 85ರಷ್ಟು ಭೂಮಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಉಳಿದ ಭೂಮಿಯನ್ನು ಖಾಸಗಿ ಅವರಿಂದ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಯೋಜನೆಯ ಪ್ರಾಥಮಿಕ ಕೆಲಸಗಳು ಆರಂಭವಾಗಿವೆ. 15 ಸಣ್ಣ ಸೇತುವೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.
ಬಿಎಸ್‌ಆರ್‌ಪಿ ಯೋಜನೆಗೆ ಮರಗಳನ್ನು ಕಡಿಯಲು ಬಿಬಿಎಂಪಿ ಅರಣ್ಯ ಘಟಕದ ಅನುಮತಿಗಾಗಿ ಕಾಯಲಾಗುತ್ತಿದೆ. ಬಿಎಸ್ಆರ್‌ಪಿ ಯೋಜನೆ 149.34 ಕಿ. ಮೀ. ಇದೆ. ಕಾರಿಡಾರ್-4 46.88 ಕಿ. ಮೀ. ಇದೆ. ಈ ಕಾರಿಡಾರ್‌ನಲ್ಲಿ 19 ನಿಲ್ದಾಣಗಳು ಇರಲಿವೆ.
ಕನಕ ಕಾರಿಡಾರ್‌ನಲ್ಲಿ ರಾಜನಕುಂಟೆ, ಮುದ್ದನಹಳ್ಳಿ, ಯಲಹಂಕ, ಜಕ್ಕೂರು, ಹೆಗ್ಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ, ಕಗ್ಗದಾಸನಪುರ, ಮಾರತ್‌ಹಳ್ಳಿ, ಬೆಳ್ಳಂದೂರು ರಸ್ತೆ, ಅಂಬೇಡ್ಕರ್ ನಗರ, ಹುಸ್ಕೂರು, ಸಿಂಗೇನ ಅಗ್ರಹಾರ ನಿಲ್ದಾಣಗಳು ಬರಲಿವೆ.
ಈ ಕಾರಿಡಾರ್‌ನಲ್ಲಿ ಯೋಜನೆಯು 8.96 ಕಿ.ಮೀ. ವಯಾಡಕ್ಟ್ (ಕಮಾನು ಸೇತುವೆಗಳು), ಎರಡು ಎತ್ತರಿಸಿದ ನಿಲ್ದಾಣಗಳನ್ನು ಒಳಗೊಂಡಿದೆ. ಈ ಯೋಜನಾ ವರದಿಯಲ್ಲಿ ಯಲಹಂಕ ಬಳಿ ಕಾರಿಡಾರ್-1 ಮತ್ತು ಕಾರಿಡಾರ್-4ಕ್ಕಾಗಿ 1.2 ಕಿ. ಮೀ. ಉದ್ದದ ಡಬಲ್ ಡೆಕ್ಕರ್ ಜೋಡಣೆ ಸಹ ಒಳಗೊಂಡಿದೆ.
ಯೋಜನೆಯಲ್ಲಿ ಬೆನ್ನಿಗಾನಹಳ್ಳಿ ಬಳಿ ಬಿಎಂಆರ್‌ಸಿಎಲ್ ವಯಡಕ್ಟ್ ಕೆಳಗೆ 500 ಮೀಟರ್ ಉದ್ದದ ಬಿಎಸ್‌ಆರ್‌ಪಿ ಎತ್ತರಿಸಿದ ಮಾರ್ಗ ನಿರ್ಮಾಣ ಮಾಡಲಿದೆ. ಈ ಮಾದರಿ ನಿರ್ಮಾಣ ಕಾಮಗಾರಿ ದೇಶದಲ್ಲೇ ಮೊದಲು ಎಂದು ಅಂದಾಜಿಸಲಾಗಿದೆ.
ಸಬ್ ಅರ್ಬನ್ ರೈಲು ಯೋಜನೆಗಾಗಿ ಕೆ-ರೈಡ್ 50 ಕೋಟಿ ಯುರೊ ಸಾಲಕ್ಕೆ ಜರ್ಮನಿಯ ಪ್ರತಿಷ್ಠಿತ ಬ್ಯಾಂಕ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಬ್ ಅರ್ಬನ್ ರೈಲು ಯೋಜನೆಗೆ ರೈಲು ಬೋಗಿ ಖರೀದಿ ಮಾಡಲು ಈಗಾಗಲೇ ಕರ್ನಾಟಕ ಸರ್ಕಾರ ಒಪ್ಪಿಗೆಯನ್ನು ನೀಡಿದೆ.












Click it and Unblock the Notifications