ಕರ್ನಾಟಕ ಚುನಾವಣೆಗೆ: ಇವಿಎಂ ಸಂಗ್ರಹಕ್ಕೆ ಯಲಹಂಕದಲ್ಲಿ ಸ್ಟ್ರಾಂಗ್ ರೂಂ ಒಪನ್
ಬೆಂಗಳೂರು , ಮೇ.09: ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಕರುನಾಡು ಸಿದ್ಧವಾಗಿದೆ. ನಾಳೆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಮುನ್ನ ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ ಸ್ಥಾಪಿಸಲಾದ ಸ್ಟ್ರಾಂಗ್ ರೂಮ್ ಅನ್ನು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮಂಗಳವಾರ ಉದ್ಘಾಟಿಸಿದ್ದಾರೆ.
ಮತ ಎಣಿಕೆಗೂ ಮುನ್ನ ಮತ ಎಣಿಕೆ ಕೇಂದ್ರದಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಯಂತ್ರಗಳು, ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸಂಗ್ರಹಿಸಿಟ್ಟಿರುವ ಸ್ಟ್ರಾಂಗ್ ರೂಂನಿಂದ ಬಿಗಿ ಭದ್ರತೆಯೊಂದಿಗೆ ಇವಿಎಂಗಳನ್ನು ಮತಗಟ್ಟೆಗೆ ತರಲಾಗುತ್ತದೆ. ಮತದಾನದ ನಂತರ ಇವಿಎಂಗಳನ್ನು ಸ್ಟ್ರಾಂಗ್ ರೂಮ್‌ಗೆ ತಂದು ಇಟ್ಟಿರಲಾಗುತ್ತದೆ. ಇನ್ನೂ ಮತದಾನ ಮುಗಿದ ನಂತರ ಸ್ಟ್ರಾಂಗ್ ರೂಮ್ ಗೆ ಇವಿಎಂ ಮಿಷನ್ ಇಟ್ಟರೆ ಆ ಮಿಷನ್ ಗಳನ್ನ ಮತ ಎಣಿಕೆಯ ಸಂದರ್ಭದಲ್ಲಿ ಮಾತ್ರ ತೆಗೆಯಲಾಗುತ್ತದೆ.

ಕರ್ನಾಟಕದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಭರದ ಸಿದ್ಧತೆ ನಡೆಸಿದೆ. ಮೇ 10 ರ ವಿಧಾನಸಭಾ ಚುನಾವಣೆಯ ಹೈವೋಲ್ಟೇಜ್ ಪ್ರಚಾರ ಸೋಮವಾರ ಅಂತ್ಯವಾಗಿದೆ. ಇಂದಿನಿಂದ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು, ಇಂದು ಸಂಜೆಗೆ ಅದು ಕೂಡ ಕೊನೆಗೊಂಡಿದೆ.
ರಾಜ್ಯದ ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಮತದಾರರನ್ನು ಓಲೈಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಬಹುಮತವನ್ನು ಪಡೆಯಲು ಭರವಸೆಗಳನ್ನು ನೀಡುತ್ತಾ ಪರಸ್ಪರ ಆರೋಪಗಳನ್ನು ಮಾಡುತ್ತಿವೆ. ರಾಜ್ಯದ 224 ಸ್ಥಾನಗಳ ವಿಧಾನಸಸಭೆಯಲ್ಲಿ ಅಧಿಕಾರ ಪಡೆಯಲು ಹರಸಾಹಸ ಪಡುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರು 19 ಸಾರ್ವಜನಿಕ ಸಭೆಗಳು ಮತ್ತು ಆರು ರೋಡ್‌ಶೋಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 12 ದಿನಗಳ ಕಾಲ ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಸರ್ಕಾರ ರಚಿಸಲು ಬಹುಮತದ 113 ಸ್ಥಾನಗಳನ್ನು ಪಡೆಯಬೇಕಿದೆ.












Click it and Unblock the Notifications