ಮಾ.22ಕ್ಕೆ ಮೆಟ್ರೋ ರೈಲು ಸಿಬ್ಬಂದಿ ಮುಷ್ಕರ ಖಚಿತ
ಬೆಂಗಳೂರು ಮಾರ್ಚ್ 08: ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ಮೆಟ್ರೋ ನಿಗಮ ಸಿಬ್ಬಂದಿಗಳು ಮುಷ್ಕರ ನಡೆಸಲು ಸಿದ್ಧತೆ ನಡೆಸಿದ್ದಾರೆ.
ನಿಗಮದ ಕಾರ್ಯಾಚರಣೆ ವಿಭಾಗದ ಸುಮಾರು 1200ಕ್ಕೂ ಅಧಿಕ ಸಿಬ್ಬಂದಿ ಕಳೆದ ಎಂಟು ವರ್ಷಗಳಿಂದ ಬಿಎಂಆರ್ ಸಿಎಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಸೇವೆಯಲ್ಲಿರುವ ಸಿಬ್ಬಂದಿಗೆ ಬಡ್ತಿ ನೀಡಿ ನಿಲ್ದಾಣ ನಿಯಂತ್ರಣಾಧಿಕಾರಿ, ಸೆಕ್ಷನ್ ಎಂಜಿನಿಯರ್ ಗಳಿಗೆ ಸಹಾಯ ವ್ಯವಸ್ಥಾಪಕರಾಗಿ ಬಡ್ತಿ ನೀಡಲು ಅವಕಾಶವಿದೆ.
ಆದರೆ ನಿಗಮವು ಸ್ಟೇಷನ್ ಕಂಟ್ರೋಲರ್, ಜ್ಯೂನಿಯರ್ ಎಂಜಿನಿಯರ್ ಗಳು ಸೇರಿದಂತೆ ಹಲವು ಹುದ್ದೆಗಳಿಗೆ ಸುಮಾರು 780 ಮಂದಿಯನ್ನು ಗುತ್ತಿಗೆ ನೌಕರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಇವರಲ್ಲಿ ಬಹುತೇಕರು ಹೊರ ರಾಜ್ಯದವರಾಗಿದ್ದು, ಸಂಸ್ಥೆಯ ಅಧಿಕಾರಿಗಳ ಆಪ್ತರು ಇಲ್ಲವೇ ಅಧಿಕಾರಿಗಳ ಸಂಬಂಧಿಕರರಿಗೆ ಅವಕಾಶ ನೀಡಲಾಗಿದೆ ಎಂದು ಆರೋಪ ಕೇಳಿಬಂದಿದೆ.

ಈಗಾಗಲೇ ಬಿಎಂಆರ್ ಸಿಎಲ್ ಮತ್ತು ಕಾರ್ಮಿಕ ಇಲಾಖೆಗೂ ಮಾ.20ರೊಳಗೆ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ಕಳುಹಿಸಿದ್ದೇವೆ. ನಿಗದಿತ ಸಮಯದೊಳಗೆ ಬೇಡಿಕೆ ಈಡೇರದಿದ್ದರೆ ಮಾ.22ರಂದು ಮೆಟ್ರೋ ರೈಲು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ. ಹಲವು ಬಾರಿ ನಿಗಮಕ್ಕೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ನಿಗಮದ ಸಿಬ್ಬಂದಿ ಕುರಿತು ಆಡಳಿತ ಮಂಡಳಿಗೆ ಇರುವ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂದು ಬಿಎಂಆರ್ ಸಿಎಲ್ ಎಂಪ್ಲಾಯೀಸ್ ಯೂನಿಯನ್ ಉಪಾಧ್ಯಕ್ಷ ಸೂರ್ಯನಾರಾಯಣ ಆರೋಪಿಸಿದ್ದಾರೆ.












Click it and Unblock the Notifications