ಮಹಾರಾಷ್ಟ್ರದ ಕನ್ನಡ ಶಾಲೆಗೆ ವಿಶೇಷ ಅನುದಾನ, ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು: ಸಿಎಂ
ಬೆಂಗಳೂರು, ನವೆಂಬರ್ 22: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಮಹಾರಾಷ್ಟ್ರದಲ್ಲಿ ಕನ್ನಡ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರ ವತಿಯಿಂದ ವಿಶೇಷ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದರು.
ಇಷ್ಟೇ ಅಲ್ಲದೇ ಕರ್ನಾಟಕ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮತ್ತು ಗೋವಾ ವಿಮೋಚನೆಗೆ ಕೆಲಸ ಮಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು. ಈ ಸಂಬಂಧ ಹೋರಾಟಗಾರರ ಅಗತ್ಯ ದಾಖಲೆಗಳನ್ನು ಸರ್ಕಾರ ತರಿಸಿಕೊಳ್ಳಲಿದೆ. ಆದಷ್ಟು ಶೀಘ್ರವೇ ನೆರೆ ರಾಜ್ಯದ ಕನ್ನಡಪರ ಹೋರಾಟಗಾರರಿಗೆ ಪಿಂಚಣಿ ನೀಡುವ ಯೋಜನೆ ಕಾರ್ಯಗತಗೊಳಿಸಲಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಇದೆ. ಎಲ್ಲಾ ಭಾಷಿಕರನ್ನು ನಾವು ಒಂದೇ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇದ್ದಾರೆ. ಅವರೆಲ್ಲರ ಹಿತರಕ್ಷಣೆ ಮಾಡುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜತ್ ತಾಲ್ಲೂಕು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಗಂಭೀರ ಪರಿಗಣನೆ
ಮಹಾರಾಷ್ಟ್ರದ ಗಡಿ ಭಾಗದ ಜತ್ ತಾಲ್ಲೂಕಿನಲ್ಲಿ ತೀವ್ರ ಬರಗಾಲವಿತ್ತು. ಅಲ್ಲಿನ ಜನ ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸಿದ್ದರು. ನಾವು ಆ ತಾಲೂಕಿನ ಜನರಿಗೆ ನೀರು ಕೊಟ್ಟು ಸಹಾಯ ಮಾಡಬೇಕೆಂದು ಯೋಜನೆಗಳನ್ನು ರೂಪಿಸಿದ್ದೇವೆ. ಜತ್ ತಾಲ್ಲೂಕು ಕರ್ನಾಟಕಕ್ಕೆ ಸೇರಬೇಕೆಂದು ಅಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಗಳು ನಿರ್ಧರಿಸಿವೆ. ನಾವು ಈ ಸೇರ್ಪಡೆ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದರು.

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳು ಎರಡು ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸವನ್ನು ಮಾಡಬಾರದು. ಈಗಾಗಲೇ ಎರಡು ರಾಜ್ಯಗಳು ಸೌಹಾರ್ದಯುತವಾಗಿ ಇವೆ. ನಾವು ಎಲ್ಲ ಭಾಷಿಗರನ್ನು ಒಂದೇ ರೀತಿಯಲ್ಲಿ ಕಾಣುತ್ತೇವೆ. ವಿವಾದ ಹುಟ್ಟುಹಾಕಿ ರಾಜಕೀಯ ಮಾಡಬಾರದು ಎಂದು ಗಡಿಭಾಗದಲ್ಲಿ ಉಂಟಾಗುತ್ತಿರುವ ಘಟನೆಗಳು ಹಾಗೂ ಮಹಾರಾಷ್ಟ್ರ ಸರ್ಕಾರದ ನಡೆಗೆ ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.












Click it and Unblock the Notifications