ಬೆಂಗಳೂರಲ್ಲಿ ಮೆಗಾ ರೈಲ್ವೆ ಕೋಚಿಂಗ್ ಟರ್ಮಿನಲ್; ಸ್ಥಳ, ಯೋಜನೆ ವಿವರ
ಬೆಂಗಳೂರು, ಡಿಸೆಂಬರ್ 28: ಕೇಂದ್ರ ಸರ್ಕಾರ ದೇಶಾದ್ಯಂತ ಮೆಗಾ ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಈ ಯೋಜನೆಯ ಭಾಗವಾಗಿ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಟರ್ಮಿನಲ್ ನಿರ್ಮಾಣವಾಗಲಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಈ ಟರ್ಮಿನಲ್ ತಲೆ ಎತ್ತಲಿದ್ದು, ಈ ಯೋಜನೆಗಾಗಿ ರೈಲ್ವೆ ಇಲಾಖೆ ಈಗಾಗಲೇ ಸ್ಥಳವನ್ನು ಸಹ ಗುರುತಿಸಿದೆ.
ಪ್ರಸ್ತಾವಿತ ಮೆಗಾ ರೈಲ್ವೆ ಕೋಚಿಂಗ್ ಟರ್ಮಿನಲ್ ಬೆಂಗಳೂರು ನಗರದ ಹೊರವಲಯದ ದೇವನಹಳ್ಳಿಯಲ್ಲಿ ನಿರ್ಮಾಣವಾಗಲಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ಈ ಕುರಿತು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲು ಸಿದ್ಧತೆಯನ್ನು ನಡೆಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಈ ಟರ್ಮಿನಲ್ ನಿರ್ಮಾಣವಾಗಲಿದೆ ಎಂಬುದು ಸದ್ಯದ ಮಾಹಿತಿ.

ಹೆಚ್ಚಳವಾಗುತ್ತಿರುವ ಪ್ರಯಾಣಿಕರ ಸಂಖ್ಯೆ, ರೈಲುಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ. ಆಯಾ ರೈಲ್ವೆ ವಲಯಗಳೇ ಈ ಟರ್ಮಿನಲ್ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲಿವೆ. ಸದ್ಯ ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿರುವ ಟರ್ಮಿನಲ್ ಮೇಲೆ ನಿರ್ವಹಣೆ ಒತ್ತಡ ಹೆಚ್ಚಿದ್ದು, ಬೆಂಗಳೂರು ನಗರಕ್ಕೆ ಹೊಸ ಟರ್ಮಿನಲ್ ಅತ್ಯಗತ್ಯವಾಗಿದೆ.
ಯೋಜನೆಯ ವಿವರಗಳು: ಯಲಹಂಕ, ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದ ನಡುವೆ ಪ್ರಸ್ತಾವಿತ ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದೆ ಎಂಬುದು ಸದ್ಯದ ಮಾಹಿತಿಯಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ನೈಋತ್ಯ ರೈಲ್ವೆಗೆ ಸೇರಿದ ಭೂಮಿ ಲಭ್ಯವಿದೆ. ಆದ್ದರಿಂದ ಇಲ್ಲಿಯೇ ಟರ್ಮಿನಲ್ ನಿರ್ಮಾಣ ಮಾಡಲು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲಾಗುತ್ತದೆ.
ಮಾಹಿತಿಗಳ ಪ್ರಕಾರ ಈ ಟರ್ಮಿನಲ್ 16 ಪ್ಲಾಟ್ ಫಾರಂ, 20 ಸ್ಟ್ಯಾಬಿಂಗ್ ಲೈನ್, 10 ಪಿಟ್‌ಲೈನ್, 2 ರನ್ ಥ್ರೂ ಲೈನ್, 2 ಬೋಗಿ ನಿರ್ವಹಣಾ ಶೆಡ್ ಒಳಗೊಂಡಿರಲಿದೆ. ಅಲ್ಲದೇ ಎಲ್ಲಾ ವಿಭಾಗಕ್ಕೂ ನಿರ್ವಹಣಾ ಕಛೇರಿ, ವಾಹನದ ಪಾರ್ಕಿಂಗ್ ಸ್ಥಳವನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಗೆ ಸುಮಾರು 1000 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ.
ಸದ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್‌ಆರ್ ಬೆಂಗಳೂರು) ಕರ್ನಾಟಕದಲ್ಲಿ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ. 10 ಪ್ಲಾಟ್ ಫಾರಂ, 6 ಸ್ಟ್ಯಾಬಿಂಗ್ ಲೈನ್, 5 ಪಿಟ್ ಲೈನ್‌ಗಳನ್ನು ಈ ನಿಲ್ದಾಣ ಹೊಂದಿದ್ದು, ನಿಲ್ದಾಣ, ನಿರ್ವಹಣಾ ಶೆಡ್ ಸೇರಿ ಸುಮಾರು 107 ಎಕರೆ ಪ್ರದೇಶವನ್ನು ಇದು ಒಳಗೊಂಡಿದೆ. ಸ್ಟ್ಯಾಬಿಂಗ್ ಲೈನ್‌ಗಳಲ್ಲಿ ನಿರ್ವಹಣೆಯಾದ ರೈಲುಗಳನ್ನು ನಿಲ್ಲಿಸಲಾಗುತ್ತದೆ. ಪಿಟ್‌ಲೈನ್‌ನಲ್ಲಿ ರೈಲಿನ ನಿರ್ವಹಣೆ, ಸ್ವಚ್ಛತೆಯನ್ನು ಮಾಡಲಾಗುತ್ತದೆ.
ಸದ್ಯ ಸ್ಥಳ ಗುರುತಿಸಿರುವ ರೈಲ್ವೆ ಕೋಚಿಂಗ್ ಟರ್ಮಿನಲ್ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಾಗಿದೆ. ಅಲ್ಲದೇ ಬೆಂಗಳೂರಿನ ಉಪನಗರ ವರ್ತುಲ ರಸ್ತೆ ಯೋಜನೆ (ಎಸ್‌ಟಿಆರ್‌ಆರ್)ನಿಂದ 7 ಕಿ. ಮೀ. ದೂರದಲ್ಲಿದೆ. ಕೆಐಎ ವಿಮಾನ ನಿಲ್ದಾಣಕ್ಕೆ 15 ಕಿ. ಮೀ. ದೂರದಲ್ಲಿದೆ.
ಅಧಿಕಾರಿಗಳು ಯೋಜನೆ ಕುರಿತು ಮಾಹಿತಿ ನೀಡಿದ್ದು, ಬೆಂಗಳೂರಿಗೆ ರೈಲ್ವೆ ಕೋಚಿಂಗ್ ಟರ್ಮಿನಲ್ ಅತ್ಯಗತ್ಯವಾಗಿದೆ. ಕಾರ್ಯಸಾಧ್ಯತಾ ವರದಿಯನ್ನು ಅಗತ್ಯವಿರುವ ಭೂಮಿ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು, ಪರಿಸರದ ಮೇಲೆ ಉಂಟಾಗುವ ಪರಿಣಾಮ, ಪ್ರಯಾಣಿಕ ಮತ್ತು ಸಂಚಾರ ದಟ್ಟಣೆ ಕುರಿತು ಮಾಹಿತಿ ಸಂಗ್ರಹ ಮಾಡಲು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಇದು ಸುಮಾರು 1,500 ಕೋಟಿ ರೂ.ಗಳ ಯೋಜನೆಯಾಗಿದೆ. ಕೆಎಸ್ಆರ್ ಬೆಂಗಳೂರು, ಯಶವಂತಪುರ ನಿಲ್ದಾಣಗಳ ಮೇಲೆ ಸದ್ಯ ಇರುವ ಒತ್ತಡ ಕಡಿಮೆ ಮಾಡಲು ಈ ಟರ್ಮಿನಲ್ ಸಹಾಯಕವಾಗಲಿದೆ. ಒಂದು ವೇಳೆ ಪ್ರಸ್ತಾವಿತ ಸ್ಥಳದಲ್ಲಿಯೇ ನಿರ್ಮಾಣ ಮಾಡಲು ಒಪ್ಪಿಗೆ ಸಿಕ್ಕಿದರೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಬೆಂಗಳೂರು ನಗರದ 2ನೇ ರೈಲ್ವೆ ಕೋಚಿಂಗ್ ಟರ್ಮಿನಲ್ ಆಗಲಿದೆ. ಮೊದಲ ಟರ್ಮಿನಲ್ ಈಗಾಗಲೇ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗಿದೆ. 50ಕ್ಕೂ ಅಧಿಕ ರೈಲುಗಳನ್ನು ಇದು ನಿರ್ವಹಣೆ ಮಾಡುತ್ತಿದೆ. 2023-24ರಲ್ಲಿ ಇಲ್ಲಿಗೆ 44.49 ಲಕ್ಷ ಪ್ರಯಾಣಿಕರು ಭೇಟಿ ನೀಡಿದ್ದಾರೆ.











Click it and Unblock the Notifications