'ಬೆಂಗಳೂರಿನ ಸಮಸ್ಯೆ ಬಗ್ಗೆ ಅನಂತ್ ಗೇನು ಗೊತ್ತು?'
ಬೆಂಗಳೂರು,ಏ.1: ಬೆಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಅವರ ಚುನಾವಣಾ ಭರವಸೆಗಳು ಅವರ ಆದ್ಯತೆಗಳು ಕ್ಷೇತ್ರದ ಮೇಲಿಲ್ಲ, ಬದಲಿಗೆ ಕೆಟ್ಟ ರಾಜಕೀಯ ಮಾಡೋದರಲ್ಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಕಿಡಿಕಾರಿದ್ದಾರೆ.
ಅನಂತ್ ಕುಮಾರ್ ಗಡಿ ನಿಯಂತ್ರಣಾ ರೇಖೆ ಸಮಸ್ಯೆ ಬಗ್ಗೆ, ಮಾಲ್ಡೀವ್ಸ್ ಬಗ್ಗೆ, ‘ರಾಷ್ಟ್ರೀಯ ಸುರಕ್ಷತೆ' ಬಗ್ಗೆ ಮಾತಾಡ್ತಾ ಇದ್ದಾರೆಯೇ ಹೊರತು ಬೆಂಗಳೂರಿನ ಸಮಸ್ಯೆಗಳೇನು ಎಂದು ಕಣ್ಣೆತ್ತಿಯೂ ನೋಡ್ತಾ ಇಲ್ಲ ಎಂದ ನಂದನ್ ನಿಲೇಕಣಿಯವರು ಮಾತು ಮುಂದುವರೆಸುತ್ತ,
‘ಅಂದ್ರೆ ರಾಷ್ಟ್ರೀಯ ಸುರಕ್ಷತೆ ಮಹತ್ವದ್ದಲ್ಲ ಎಂದು ನಾನು ಹೇಳ್ತಿಲ್ಲ. ಅದೂ ತುಂಬ ಮಹತ್ವದ್ದು. ಆದರೆ ನಮ್ಮ ಜನರ ದಿನನಿತ್ಯದ ಆರ್ಥಿಕ ಸುರಕ್ಷತೆ ಬಗ್ಗೆ, ನಮ್ಮ ಮಹಿಳೆಯರು ಮತ್ತು ಮಕ್ಕಳ ಬಗ್ಗೆಯೂ ನಾವು ಕಾಳಜಿಯೇ ತೋರಿಸೋದು ಬೇಡವೇ? ನಮ್ಮ ನಗರದ ಜ್ವಲಂತ ಸಮಸ್ಯೆಗಳಾದ ನೀರಿನ ಸಮಸ್ಯೆಗಳು, ಸಾರಿಗೆ ಸಮಸ್ಯೆಗಳು, ಉದ್ಯೋಗ ಸಮಸ್ಯೆ, ಹೀಗೆ ನಮ್ಮ ಕ್ಷೇತ್ರದ ಜನ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಯಾಕೆ ಮಾತಾಡ್ತಿಲ್ಲ? ಈ ಕ್ಷೇತ್ರದ ಹಾಲಿ ಸಂಸದರಾಗಿರೋ ಅವರಿಗೆ ಈ ಎಲ್ಲ ಸಮಸ್ಯೆಗಳ ಬಗ್ಗೆ ಹೊಣೆಗಾರಿಕೇನೆ ಇಲ್ಲವೇ? ಎಂದು ಪ್ರಶ್ನಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಬೆಂಗಳೂರು ದಕ್ಷಿಣ ಕ್ಷೇತ್ರದ ಜನರಿಗೆ ಅನಂತ್ ಕುಮಾರ್ ಬಂಡವಾಳ ಗೊತ್ತಾಗಿದೆ. ಸಂಸತ್ತಿನಲ್ಲಿ ಅನಂತ್ ಸಾಧನೆ ಬಗ್ಗೆ ವಿವರಿಸಬೇಕಾಗಿಲ್ಲ ಎಂದಿರುವ ನಂದನ್ ಬಿಚ್ಚಿಟ್ಟ ಇನ್ನಷ್ಟು ಮಾಹಿತಿ ಮುಂದಿದೆ ಓದಿ...

ಈಗಿನ ಸಂಸದರು ಯಾರು ಅಂತ್ಲೇ ಗೊತ್ತಿಲ್ಲ
ಬೆಂಗಳೂರು ದಕ್ಷಿಣ ಕ್ಷೇತ್ರದ ಹಲವಾರು ಜನರೊಂದಿಗೆ ಮಾತನಾಡಿದಾಗ, ಅವರಿಗೆ ತಮ್ಮ ಈಗಿನ ಸಂಸದರು ಯಾರು ಅಂತ್ಲೇ ಗೊತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಮನೆ ಬಾಗ್ಲಿಗೆ ಬಂದ್ರೆ ಜನಕ್ಕೆ ಹೆಂಗೆ ಗೊತ್ತಾಗುತ್ತೆ? ದೇಶಕ್ಕೆ ಎಷ್ಟೆಲ್ಲ ಕೊಡುಗೆ ನೀಡಿರೋ ಬೆಂಗಳೂರಿನಂತಹ ಬೃಹತ್ ನಗರದ ಸಂಸದರು ಸಂಸತ್ತಿನಲ್ಲಿ ಕಾರ್ಯಕ್ಷಮತೆಯ ಶ್ರೇಣಿಯಲ್ಲಿ 139ನೇ ಸ್ಥಾನದಲ್ಲಿದ್ದಾರೆ ಎನ್ನೋದು ತುಂಬಾ ನಾಚಿಕೆಗೇಡಿನ ವಿಚಾರ. ನಮಗೆ ನಮ್ಮ ಜನರ ಆದ್ಯತೆಗಳೇನು, ಏನು ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಅಂತ ಚಿಂತನೆ ಮಾಡಿ, ಕೆಲಸ ಮಾಡೋ ಅತ್ಯುನ್ನತ ಶ್ರೇಣಿಯ ಸಂಸದರು ನಮಗೆ ಬೇಕಾಗಿದ್ದಾರೆ.

ನಗರ ಸಮಸ್ಯೆ ಮೂಲೆಗುಂಪಾಗಿದೆ
* ಬೆಂಗಳೂರಿಗರು ನಗರದ ಸಮಸ್ಯೆ ಬಗ್ಗೆ ಅನಂತ್ ಕುಮಾರ್ ಅವರಿಗೆ ಕೇಳಿದ್ರೆ, ಅವರ ಸಮಸ್ಯೆಗಳೆಲ್ಲ ಕಾರ್ಪೋರೇಟರ್ ಮಟ್ಟದ ಸಮಸ್ಯೆಗಳು ಅಥವಾ ಶಾಸಕರ ಹಂತದ ಸಮಸ್ಯೆಗಳು ಅಂತ ಮೂಲೆಗುಂಪು ಮಾಡ್ತಾರೆ.
* ನಾನು ಇದನ್ನು ಒಪ್ಪೋದೆ ಇಲ್ಲ, ಇವೆಲ್ಲವೂ ನಮ್ಮ ಜನರು ದಿನನಿತ್ಯ ಇದುರಿಸೋ ಸಮಸ್ಯೆಗಳು. ಈ ಸಮಸ್ಯೆಗಳನ್ನು ಬಗೆಹರಿಸಲಿಕ್ಕೆ ಒಬ್ಬ ಸಂಸದರಾಗಿ ಬಹಳ ಕೆಲಸ ಮಾಡಬಹುದು.
* ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳೊಂದಿಗೆ, ಚುನಾಯಿತ ಜನಪ್ರತಿನಿಧಿಗಳೊಂದಿಗೆ ಕೆಲಸ ಮಾಡ್ತಾ ಇವನ್ನೆಲ್ಲ ಬಗೆಹರಿಸೋದಕ್ಕೆ ಕೆಲಸ ಮಾಡಬಹುದು.
* ಏನಾದ್ರೂ ಒಂದು ಬೃಹತ್ ಯೋಜನೆ ನಗರದಲ್ಲಿ ತರಲಿಕ್ಕೆ ಮತ್ತು ಉತ್ತಮ ಆಡಳಿತೆಯ ವ್ಯವಸ್ಥೆಗಳನ್ನು ಜಾರಿಗೊಳಿಸೋದ್ರಲ್ಲಿ ಸಂಸದರ ಪಾತ್ರ ಬಹಳ ಮಹತ್ವದ್ದಾಗಿರುತ್ತೆ.

ಬೆಂಗಳೂರಿಗಾಗಿ ಕಾಂಗ್ರೆಸ್ ಕನಸು, ಯೋಜನೆ
ಮುಂಬರುವ ಐದು ವರ್ಷಗಳಲ್ಲಿ ನಾವು ನಗರಕ್ಕೆ ಮಾಡಬಹುದಾದ ಕೆಲಸಗಳು ಸಾಕಷ್ಟಿವೆ. ಸ್ಥಳೀಯ ನೀರಿನ ಸಂಪನ್ಮೂಲಗಳ ಸೂಕ್ತ ಪುನಶ್ಚೇತನ ಮತ್ತು ಬಳಕೆಯ ಮೂಲಕ ಬೆಂಗಳೂರಿನ ಪ್ರತೀ ಮನೆಗೂ ಉತ್ತಮ ನೀರಿನ ಲಭ್ಯತೆ ನಿಟ್ಟಿನಲ್ಲಿ ನಂಗೆ ಕೆಲಸ ಮಾಡೋ ಉದ್ದೇಶವಿದೆ. ಅಲ್ಲದೇ ನಮ್ಮ ನಗರಕ್ಕೆ ಒಂದು ಸಮಗ್ರ ಸಾರಿಗೆ ಗ್ರಿಡ್ ಅಭಿವೃದ್ಧಿ ಪಡಿಸುವ ಉದ್ದೇಶವೂ ನನಗಿದೆ.
ಈ ಗ್ರಿಡ್ ಮೂಲಕ ರಸ್ತೆ, ಬಸ್ಸು, ಮೆಟ್ರೋ ಮತ್ತು ಕಮ್ಯೂಟರ್ ರೈಲು ಕುರಿತು ಒಂದು ಸಮಗ್ರ ಪರಿಹಾರ ಪಡೆದುಕೊಳ್ಳೋದಕ್ಕೆ ಸಾಧ್ಯವಾಗುತ್ತೆ. ಬೆಂಗಳೂರಿನ ನಾಗರಿಕರು ಸುಲಭವಾಗಿ, ಪಾರದರ್ಶಕವಾಗಿ ತಮ್ಮ ಜನಪ್ರತಿನಿಧಿಯನ್ನು ತಲುಪಲು ಸಾಧ್ಯವಾಗುವ ಹಾಗೆ ಒಂದು ವ್ಯವಸ್ಥೆಯನ್ನು ಹುಟ್ಟುಹಾಕಲಿದ್ದೇನೆ ಮತ್ತು ಈ ವ್ಯವಸ್ಥೆಯು ಜನರಿಗೆ ಬೇಗನೇ ಸ್ಪಂದಿಸಲು ಸರ್ಕಾರಕ್ಕೆ ಸಾಧ್ಯಗೊಳಿಸುತ್ತದೆ

ಸಂಸದರ ನಿಧಿಯನ್ನೂ ಅನಂತ್ ಬಳಕೆ ಮಾಡಿಲ್ಲ
ನಮ್ಮಲ್ಲಿ ಕೆಲವರು ಬರೀ ಗಡಿ ಸಮಸ್ಯೆಗಳ ಬಗ್ಗೆ ಹುರುಳಿಲ್ಲದೇ ಮಾತಾಡ್ತಾ, ನಮ್ಮ ದಿನನಿತ್ಯದ ಸಮಸ್ಯೆಗಳನ್ನು ಗಾಳಿಗೆ ತೇಲಿ ಬಿಡ್ತಾ ಇದ್ದಾರೆ. ಅವರ ನಿಷ್ಕ್ರಿಯತೆಯಿಂದ ಉಂಟಾಗಿರೋ ಸವಾಲನ್ನು ಕೈಬಿಟ್ಟು, ಸುಖಾಸುಮ್ಮನೇ ದೇಶದ ಸಮಸ್ಯೆಗಳ ಬಗ್ಗೆ ಭಾಳಾ ಕಾಳಜಿ ಇದ್ದವರಂತೆ ಮಾತಾಡ್ತಾರೆ. ಅನಂತ್ ಕುಮಾರ್ ತಮ್ಮ ಸಂಸದರ ನಿಧಿಯನ್ನೂ ಬೆಂಗಳೂರಿಗೆ ಪೂರ್ಣವಾಗಿ ಬಳಕೆ ಮಾಡಿಕೊಂಡಿಲ್ಲ ಎನ್ನೋದು ತುಂಬಾ ಜನರಿಗೆ ಗೊತ್ತಿಲ್ಲ ಎಂದು ನಂದನ್ ವಿವರಿಸಿದರು.












Click it and Unblock the Notifications