ಮಕ್ಕಳ ಮಾರಾಟ ಜಾಲ ವಿರುದ್ಧ ಪೊಲೀಸರ ಸೀಕ್ರೇಟ್ ಆಪರೇಷನ್ ನಡೆದಿದ್ದು ಹೇಗೆ?
ಬೆಂಗಳೂರು, ಅ. 06: ಮುಂಬೈಯಿಂದ ಮಕ್ಕಳನ್ನು ಕದ್ದು ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಹಣಕ್ಕೆ ಮಾರಾಟ ಮಾಡುವ ಜಾಲವನ್ನು ದಕ್ಷಿಣ ವಿಭಾಗದ ಪೊಲೀಸರು ಪತ್ತೆ ಮಾಡಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಗು ಕಳ್ಳತನ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ತಲಘಟ್ಟಪುರದ ಸಬ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮಕ್ಕಳ ಮಾರಾಟ ಕರಾಳ ದಂಧೆ ಪತ್ತೆ ಮಾಡಿದ್ದಾರೆ. ಮಗು ಖರೀದಿಸುವವರ ಸೋಗಿನಲ್ಲಿ "ರಹಸ್ಯ ಕಾರ್ಯಾಚರಣೆ" ನಡೆಸಿ ದಂಧೆಯ ಕಿಂಗ್ ಪಿನ್ ಸೇರಿದಂತೆ ಆರೋಪಿಗಳನ್ನು ಬಂಧಿಸಿ ಒಂದು ತಿಂಗಳ ಕೂಸನ್ನು ರಕ್ಷಣೆ ಮಾಡಿದ್ದಾರೆ.
ಮುಂಬೈಯಲ್ಲಿ ಬಡತನದಲ್ಲಿರುವ ಪೋಷಕರನ್ನು ಪತ್ತೆ ಮಾಡಿ ಕಡಿಮೆ ಬೆಲೆ ಕೊಟ್ಟು ಮಕ್ಕಳನ್ನು ಖರೀದಿ ಮಾಡಿ ಬೆಂಗಳೂರಿಗೆ ಕರೆತರುವ ಕಾರ್ಯದಲ್ಲಿ ಒಂದು ಗ್ಯಾಂಗ್ ನಿರತವಾಗಿದೆ. ಇದಕ್ಕೆ ಸಹಕಾರವಾಗಿ ಬೆಂಗಳೂರಿನಲ್ಲಿ ಮಕ್ಕಳು ಇಲ್ಲದ ಪೋಷಕರನ್ನು ಪತ್ತೆ ಮಾಡಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಮಗುವನ್ನು ಕೊಡುವ ಕಾರ್ಯದಲ್ಲಿ ಮತ್ತೊಂದು ಗ್ಯಾಂಗ್ ನಿರತವಾಗಿತ್ತು. ಬಾಂಬೆ ಟು ಬೆಂಗಳೂರು ವರೆಗೂ ಹಬ್ಬಿರುವ ಮಕ್ಕಳ ಮಾರಾಟ ಜಾಲದ ಆರೋಪಿಗಳಾದ ಹೊಂಗಸಂದ್ರದ ನಿವಾಸಿ ರಂಜನಾ, ವಿಲ್ಸನ್ ಗಾರ್ಡನ್ ನಿವಾಸಿ ದೇವಿ ಷಣ್ಮುಗಮ್ಮ, ಮುಂಬಯಿ ನಿವಾಸಿ ಶಂಕರ್ ದಾಮೋದರ್ ನಾಯರ್, ಧನಲಕ್ಷ್ಮೀ ಹಾಗೂ ಜನಾರ್ಧನ್ ಬಂಧಿತ ಆರೋಪಿಗಳು. ಇವರು ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಲು ಬಾಂಬೆಯಿಂದ ತಂದಿದ್ದ ಒಂದು ತಿಂಗಳ ಕೂಸನ್ನು ರಕ್ಷಿಸಿದ್ದಾರೆ.
ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬಾಡಿಗೆ ತಾಯಿ ಮೂಲಕ ಮಗುವನ್ನು ಎತ್ತಿ ಕೊಡುತ್ತೇವೆ ಎಂದು ನಂಬಿಸಿ ಲಕ್ಷ ಲಕ್ಷ ಹಣ ಪಡೆಯುತ್ತಿದ್ದರು. ಮಕ್ಕಳು ಇಲ್ಲದ ದಂಪತಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಹೀಗೆ ಅವರಿಂದ ಹಣ ಪಡೆದು, ಬಾಂಬೆ ಸೇರಿದಂತೆ ಇತರೆ ಕಡೆ ಬಡ ದಂಪತಿಯನ್ನು ಗುರುತಿಸಿ ಅವರಿಂದ ಮಕ್ಕಳನ್ನು ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಹಲವು ವರ್ಷದಿಂದಲೂ ಈ ಜಾಲ ಸಕ್ರಿಯವಾಗಿತ್ತು.

ಚಾಮರಾಜಪೇಟೆ ಮಗು ಪ್ರಕರಣದ ತನಿಖೆಯಿಂದ ಜಾಲ ಬೆಳಕಿಗೆ: ವರ್ಷದ ಹಿಂದೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆರಿಗೆ ಆಸ್ಪತ್ರೆಯಲ್ಲಿ ಮಗು ಕಳ್ಳತನವಾಗಿತ್ತು. ಪ್ರಕರಣ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಆದೇಶಿಸಿದ್ದರು. ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದ ತಲಘಟ್ಟಪುರ ಠಾಣೆಯ ಪಿಎಸ್ಐ ಶ್ರೀನಿವಾಸ್ ಮಗು ಕದ್ದಿದ್ದ ಮನೋವೈದ್ಯೆಯ ರೇಖಾಚಿತ್ರವನ್ನು ಬಿಡಿಸಿ ಅದರ ಜಾಡು ಹಿಡಿದು ಪ್ರಕರಣ ಪತ್ತೆ ಮಾಡಿದ್ದರು. ಆಕೆಯನ್ನು ಬಂಧಿಸಿ ಕೊಪ್ಪಳದಲ್ಲಿದ್ದ ಮಗುವನ್ನು ರಕ್ಷಿಸಿ ಶಾಮಣ್ಣ ಗಾರ್ಡನ್‌ನಲ್ಲಿದ್ದ ದಂಪತಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣದ ತನಿಖೆ ನಡಸುವಾಗ ವಿಲ್ಸನ್ ಗಾರ್ಡನ್ ದೇವಿ ಷಣ್ಮುಗಮ್ಮ ಮಕ್ಕಳನ್ನು ಹಣಕ್ಕಾಗಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿರುವ ಬಗ್ಗೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಶ್ರೀನಿವಾಸ್ ಸಂಗ್ರಹಿಸಿದ್ದರು.
ಸೂಪರ್ ಕಾಪ್ ದೂರುದಾರ: ಇನ್ನೂ ಜಾಲವನ್ನು ಪತ್ತೆ ಮಾಡಿದ ಪ್ರಕರಣದ ದೂರುದಾರ ಪಿಎಸ್ಐ ಶ್ರೀನಿವಾಸ್ ತಲಘಟ್ಟಪುರದಲ್ಲಿ ಸಬ್ ಇನಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಾಮರಾಜಪೇಟೆಯ ಮಗು ಕಳ್ಳತನ ಜಾಡು ಹಿಡಿದು ತನಿಖೆ ನಡೆಸಿದಾಗ ವಿಲ್ಸನ್ ಗಾರ್ಡನ್ ನಿವಾಸಿ ದೇವಿ ಷಣ್ಮುಗಮ್ಮ ಮಕ್ಕಳ ಮಾರಾಟ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಡಿಸಿಪಿ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಜಾಲ ಬೇಧಿಸಲು ಯೋಜನೆ ರೂಪಿಸಿದ್ದ ವಿಶೇಷ ತಂಡ, ಮಗುವನ್ನು ಖರೀದಿ ಮಾಡುವ ಸೋಗಿನಲ್ಲಿ ಮಾತುಕತೆ ನಡೆಸಿದ್ದಾರೆ. ಮೂರು ಲಕ್ಷ ರೂಪಾಯಿಗೆ ಮಾತುಕತೆ ಆಗಿದೆ. ಮಗುವನ್ನು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಪಡೆಯುವ ಬಗ್ಗೆ ಮಾತುಕತೆ ಮಾಡಿದ್ದಾರೆ.

Recommended Video
ರಹಸ್ಯ ಕಾರ್ಯಾಚರಣೆ: ಮಗು ಖರೀದಿಸುವ ಸೋಗಿನಲ್ಲಿ ಮೆಜೆಸ್ಟಿಕ್‌ಗೆ ತೆರಳಿದ ಮಹಿಳಾ ಸಿಬ್ಬಂದಿ ಹಾಗೂ ಪಿಎಸ್ಐ ಶ್ರೀನಿವಾಸ್, ಹಣವನ್ನು ಕೊಟ್ಟು ಮಗು ಖರೀದಿಸುವ ಸೋಗಿನಲ್ಲಿ ಐವರನ್ನು ಲಾಕ್ ಮಾಡಿಸಿದ್ದಾರೆ. ಈ ರಹಸ್ಯ ಕಾರ್ಯಾಚರಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಮಕ್ಕಳು ಇಲ್ಲದ ಪೋಷಕರ ಪಾತ್ರದಾರಿಗಳಾಗಿ ನಟಿಸಿದ್ದಾರೆ. ಇನ್ನೂ ಕೆಲವರು ಪಕ್ಕದಲ್ಲಿ ಸಾರ್ವಜನಿಕರಂತೆ ಹಲವು ತಾಸು ರೈಲ್ವೇ ನಿಲ್ದಾಣದಲ್ಲಿ ಕೂತು ಶ್ರಮ ವಹಿಸಿ "ಮಕ್ಕಳು ಮಾರಾಟ ಜಾಲವನ್ನು ಪತ್ತೆ ಮಾಡಿದ್ದಾರೆ. ತಲಘಟ್ಟಪುರ ಶ್ರೀನಿವಾಸ್ ಹಾಗೂ ಮಹಿಳಾ ಸಿಬ್ಬಂದಿಯ ಪರಿಶ್ರಮವನ್ನು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಶ್ಲಾಘಿಸಿದ್ದಾರೆ.












Click it and Unblock the Notifications