ಬೆಂಗಳೂರಿನಲ್ಲಿ ನೇಣಿಗೆ ಶರಣಾದ ಟೆಕ್ಕಿ

ಮಡಿವಾಳದ ಸೋಮೇಶ್ವರ ಕಾಲೋನಿ ನಿವಾಸಿ ಜಯರಾಮ್ (26) ನೇಣಿಗೆ ಶರಣಾದ ಟೆಕ್ಕಿ. ಜಯರಾವ್ ಅವರ ಪತ್ನಿ ಕಳೆದ ವಾರ ತವರಿಗೆ ತೆರಳಿದ್ದರು. ಸೆ.12 ರಂದು ಪತಿ ಮೊಬೈಲ್‌ಗೆ ಅವರು ಹಲವಾರು ಬಾರಿ ಕರೆ ಮಾಡಿದ್ದಾರೆ.
ಆದರೆ, ಯಾವುದೇ ಕರೆಯನ್ನು ಜಯರಾಂ ಸ್ವೀಕರಿಸಲಿಲ್ಲ. ಇದರಿಂದ ಆತಂಕಗೊಂಡ ಅವರು, ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಜಯರಾಂ ಸ್ನೇಹಿತರು, ಮಡಿವಾಳ ಪೊಲೀಸರ ನೆರವಿನೊಂದಿಗೆ ಶನಿವಾರ ಜಯರಾಂ ಅವರ ಮನೆಗೆ ಆಗಮಿಸಿದ್ದಾರೆ.
ಜಯರಾಂ ಮನೆಯ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಮನೆಯ ಕಿಟಕಿ ಒಡೆದು ನೋಡಿದಾಗ ಜಯರಾಂ ಮನೆಯೊಳಗೆ ನೇಣು ಹಾಕಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ಜಯರಾವ್ ಶವದ ಬಳಿ ಡೆತ್ ನೋಟ್ ಸಿಕ್ಕಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟಿದ್ದಾರೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಮೂಲದವರಾದ ಜಯರಾಮ್ ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು, ಇತ್ತೀಚೆಗೆ ವಿವಾಹವಾಗಿದ್ದರು. ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಲಾಗಿದೆ.












Click it and Unblock the Notifications