ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಮತ್ತೆ ಬಿರುಕು: ಪ್ರಯಾಣಿಕರಲ್ಲಿ ಮಡುಗಟ್ಟಿದ ಆತಂಕ
ಬೆಂಗಳೂರು, ಆಗಸ್ಟ್ 2: ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಈ ವಿಚಾರವನ್ನು ಮುಚ್ಚಿಟ್ಟು, ತಾಂತ್ರಿಕ ಕಾಮಗಾರಿ ನೆಪವೊಡ್ಡಿ ದುರಸ್ತಿ ಕಾಮಗಾರಿಯನ್ನು ಸದ್ದಿಲ್ಲದೇ ಆರಂಭಿಸಿದೆ.
ಇಂದಿರಾನಗರ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬಿಎಂಆರ್‌ಸಿಎಲ್ ಕಳಪೆ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ನಿರ್ವಹಣೆ ಮಾಡುವ ನೆಪದಲ್ಲಿ ಮಾರ್ಗ ಬಂದ್ ಮಾಡಲಾಗಿತ್ತು. ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿಕ ಇಂದಿರಾನಗರ ಮೆಟ್ರೋ ಸ್ಟೇಷನ್ ಬಳಿ ಬಿರುಕು ಕಾಣಿಸಿಕೊಂಡಿದೆ.
ಮೆಟ್ರೋ ಕಾಮಗಾರಿ ನಿಮಿತ್ತ ಆಗಸ್ಟ್ 3ರಿಂದ ಆಗಸ್ಟ್ 4ರ ಬೆಳಗ್ಗೆ 11ಗಂಟೆವರೆಗೆ ಮೆಟ್ರೋ ಸ್ಥಗಿತಗೊಳಿಸುವುದಾಗಿ ಜುಲೈ 30ರಂದೇ ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿತ್ತು.

ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಆ.3ರ ರಾತ್ರಿ 9.30ರಿಂದ ಆ.4ರ ಬೆಳಗ್ಗೆ 11ರವರೆಗೆ ರೈಲು ಸೇವೆ ಸ್ಥಗಿತಗೊಳಿಸುತ್ತಿರುವುದರಿಂದ ಬಿಎಂಟಿಸಿಯು ಪ್ರಯಾಣಿಕರ ದಟ್ಟಣೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ತೀರ್ಮಾನಿಸಿದೆ.
ನಮ್ಮ ಮೆಟ್ರೋ ಸಂಚಾರ ಭಾಗಶಃ ರದ್ದು ಬೈಯಪ್ಪನಹಲ್ಳಿಯಿಂದ ಎಂಜಿ ರಸ್ತೆ ಮಾರ್ಗದಲ್ಲಿ ಪ್ರಯಾಣಿರ ದಟ್ಟಣೆ ಇರುವುದು ಕಂಡುಬಂದರೆ, ಹೆಚ್ಚುವರಿ ಬಸ್‌ಗಳನ್ನು ಆಚರಣೆ ಮಾಡಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿತ್ತು.
ಇಂದಿರಾನಗರ ಮೆಟ್ರೋ ನಿಲ್ದಾಣದ ಪಿಲ್ಲರ್‌ನಲ್ಲಿ ಬಿರುಕುಬಿದ್ದಿಲ್ಲ, ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ಯಶವಂತ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
ನೇರಳೆ ಮಾರ್ಗದಲ್ಲಿ ಎಂ.ಜಿ.ರಸ್ತೆಯಿಂದ ಮೈಸೂರು ರಸ್ತೆ ನಿಲ್ದಾಣದ ತನಕ ಮೆಟ್ರೋ ಎಂದಿನಂತೆ ಸಂಚಾರ ನಡೆಸಲಿವೆ. ಅದೇ ರೀತಿ ಹಸಿರು ಮಾರ್ಗದ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ.
ಎಂ. ಜಿ. ರಸ್ತೆ-ಬೈಯಪ್ಪನಹಳ್ಳಿ ನಡುವಿನ ಮಾರ್ಗದಲ್ಲಿ ಆಗಸ್ಟ್ 3 ಮತ್ತು 4ರಂದು ನಮ್ಮ ಮೆಟ್ರೋ ರೈಲು ಸಂಚಾರ ಭಾಗಶಃ ರದ್ದಾಗಲಿದೆ.
ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ಕಾರಣ ಮೆಟ್ರೋ ರೈಲಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಎಂ. ಜಿ. ರಸ್ತೆ-ಮೈಸೂರು ರಸ್ತೆ ನಡುವೆ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ತಿಳಿಸಲಾಗಿತ್ತು.
ಆದರೆ ಪದೇ ಪದೇ ಒಂದೊಂದು ಮೆಟ್ರೋ ನಿಲ್ದಾಣದ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದರಿಂದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಮೆಟ್ರೋ ಹತ್ತುವುದೊ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ. ಬಿಎಂಆರ್‌ಸಿಎಲ್ ಕಳಪೆ ಕಾಮಗಾರಿಯೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.
ಇದೀಗ ಬೇರೆ ಕಡೆಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಅಲ್ಲೂ ಹಾಗೆಯೇ ಆದರೆ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಈ ಯೋಜನೆ ನೆಲಕಚ್ಚುವುದು ಗ್ಯಾರಂಟಿ.
ಈಗಲೇ ಎಚ್ಚೆತ್ತುಕೊಂಡು ಅಧಿಕಾರಿಗಳು ಈಗ ನಿರ್ಮಾಣ ಮಾಡಲಾಗುತ್ತಿರುವ ಮೆಟ್ರೋ ಕಾಮಗಾರಿಯನ್ನಾದರೂ ಅಚ್ಚುಕಟ್ಟಾಗಿ ನಿರ್ಮಿಸಲಿ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.












Click it and Unblock the Notifications