ಬೆಂಗಳೂರಿನಲ್ಲಿ ಭಯ: ಒಂದೇ ಕುಟುಂಬ 6 ಮಂದಿಗೆ ಕೊರೊನಾವೈರಸ್!
ಬೆಂಗಳೂರು, ಮಾರ್ಚ್.09: ರಾಜ್ಯದಲ್ಲಿ ಪ್ರತಿನಿತ್ಯ ವರದಿಯಾಗುವ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರಿನ ಪ್ರಕರಣಗಳದ್ದೇ ಸಿಂಹಪಾಲು ಇರುತ್ತದೆ. ಕಳೆದ 24 ಗಂಟೆಗಳಲ್ಲಿ 436 ಹೊಸ ಪ್ರಕರಣಗಳ ಪೈಕಿ 287 ಸೋಂಕಿತ ಪ್ರಕರಣಗಳು ಬೆಂಗಳೂರಿಗೆ ಸೇರಿವೆ. ಅತಿಹೆಚ್ಚು ಸೋಂಕಿತರು ಸಿಲಿಕಾನ್ ಸಿಟಿಯಲ್ಲೇ ಪತ್ತೆಯಾಗುತ್ತಿವೆ. ಅದನ್ನು ಸಾಕ್ಷೀಕರಿಸುವ ಒಂದು ಉದಾಹರಣೆ ಇಲ್ಲಿದೆ ನೋಡಿ.
ಬೆಂಗಳೂರಿನ ಥಣಿಸಂದ್ರದಲ್ಲಿ ಇರುವ ನವಗ್ರಹ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ಒಂದೇ ಕುಟುಂಬದ ಆರು ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಆಂಧ್ರ ಪ್ರದೇಶದ ತಿರುಪತಿಯಿಂದ ವಾಪಸ್ಸಾದ ಒಬ್ಬ ವ್ಯಕ್ತಿಯ ಜೊತೆಗೆ ಸಂಪರ್ಕದಲ್ಲಿದ್ದ ಇಡೀ ಕುಟುಂಬಕ್ಕೆ ಕೊರೊನಾವೈರಸ್ ಸೋಂಕು ತಗುಲಿರುವುದು ಗೊತ್ತಾಗಿದೆ. ಒಂದೇ ಕುಟುಂಬದ ಎಂಟು ಜನರ ಪೈಕಿ ಆರು ಮಂದಿ ತಿರುಪತಿಯಲ್ಲಿ ನೆಲೆಸಿದ್ದ ಸಂಬಂಧಿಯ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.

ಬಿಬಿಎಂಪಿ ಆಯುಕ್ತರು ಹೇಳುವುದೇನು?
ಬೆಂಗಳೂರಿಗೆ ತಿರುಪತಿಯಿಂದ ಆಗಮಿಸಿದ ವ್ಯಕ್ತಿಯೊಬ್ಬರನ್ನು RT-PCR ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ವ್ಯಕ್ತಿಯಲ್ಲಿ ಕೊರೊನಾವೈರಸ್ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತು. ನಂತರದಲ್ಲಿ ವ್ಯಕ್ತಿಯ ಕುಟುಂಬದ ಎಂಟು ಜನರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಖಾತ್ರಿಯಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಸೋಂಕಿತರ ಸಂಪರ್ಕದಲ್ಲಿ 204 ಜನ
ಕೊರೊನಾವೈರಸ್ ಸೋಂಕು ತಗುಲಿದ ಒಂದೇ ಕುಟುಂಬ ಆರು ಮಂದಿಯನ್ನು ಕಲ್ಯಾಣ್ ನಗರದಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಿರುಪತಿಯಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಯು 54 ಮಂದಿ ಪ್ರಾಥಮಿಕ ಸಂಪರ್ಕ ಮತ್ತು 150 ಜನರ ಜೊತೆಗೆ ದ್ವಿತೀಯ ಸಂಪರ್ಕವನ್ನು ಹೊಂದಿದ್ದನು ಎಂದು ಗೊತ್ತಾಗಿದೆ. ಈ ಎಲ್ಲ 204 ಜನರನ್ನು ರಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲರಿಗೂ ಸೋಂಕು ತಗುಲಿಲ್ಲ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಈ ಪ್ರದೇಶದಲ್ಲಿ ಎಂಟು ಸೋಂಕಿತ ಪ್ರಕರಣ
ಸಿಲಿಕಾನ್ ಸಿಟಿಯ ಚಿಕ್ಕಲಸಂದ್ರ ಮತ್ತು ವಸಂತ ನಗರದಲ್ಲಿನ ಅಪಾರ್ಟ್ ಮೆಂಟ್ ನಲ್ಲಿ ಎಂಟು ಮಂದಿಗೆ ನೊವೆಲ್ ಕೊರೊನಾವೈರಸ್ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲೋರ್ ಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಕಳೆದ ಗುರುವಾರ 160 ವಿದ್ಯಾರ್ಥಿಗಳನ್ನು ಕೊವಿಡ್-19 ಸೋಂಕಿನ ತಪಾಸಣೆಗೊಳಪಡಿಸಲಾಗಿದ್ದು, ಆರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿತ್ತು. ಸೋಂಕಿತ ವಿದ್ಯಾರ್ಥಿಗಳನ್ನು ಕೆ ಆರ್ ಪುರಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ ಹೇಗಿದೆ ಕೊರೊನಾವೈರಸ್ ಕಂಡೀಷನ್?
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 436 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನದಲ್ಲಿ ಮಹಾಮಾರಿ ಕೊರೊನಾವೈರಸ್ ಸೋಂಕಿಗೆ ಐವರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 12367ಕ್ಕೆ ಏರಿಕೆಯಾಗಿದೆ. ಒಂದೇ ದಿನ 478 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈವರೆಗೂ 936250 ಸೋಂಕಿತರಿಗೆ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 955451 ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ 6815 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಜಿಲ್ಲಾವಾರು ಕೊವಿಡ್-19 ಪ್ರಕರಣ
ರಾಜ್ಯದಲ್ಲಿ ಒಟ್ಟು 436 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು 287, ಬೀದರ್ 7, ಚಾಮರಾಜನಗರ 1, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 1, ಚಿತ್ರದುರ್ಗ 6, ದಕ್ಷಿಣ ಕನ್ನಡ 14, ದಾವಣಗೆರೆ 1, ಧಾರವಾಡ 9, ಗದಗ 5, ಹಾಸನ 5, ಹಾವೇರಿ 0, ಕಲಬುರಗಿ 22, ಕೊಡಗು 2, ಕೋಲಾರ 9, ಕೊಪ್ಪಳ 1, ಮಂಡ್ಯ 3, ಮೈಸೂರು 7, ರಾಯಚೂರು 1, ರಾಮನಗರ 0, ಶಿವಮೊಗ್ಗ 3, ತುಮಕೂರು 12, ಉಡುಪಿ 18, ಉತ್ತರ ಕನ್ನಡ 4, ವಿಜಯಪುರ 3, ಯಾದಗಿರಿ 0 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications