SIR: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮಹತ್ವದ ಬದಲಾವಣೆ: ಸಹಿ ಇಲ್ಲದ ಅರ್ಜಿ ರಿಜೆಕ್ಟ್!
SIR: ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆದಿದೆ. ಗಣತಿ ನಮೂನೆ ಅರ್ಜಿಯಲ್ಲಿ ಮತದಾರರು ಮತ್ತು ಬಿಎಲ್ಓಗಳು ಕಡ್ಡಾಯವಾಗಿ ಸಹಿ ಮಾಡಿರುವ ಕುರಿತು ಡಿಜಿಟೈಜೇಷನ್ ಸಂದರ್ಭದಲ್ಲಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ವಿ ಅವರ ಅಧ್ಯಕ್ಷತೆಯಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯದ ಪ್ರಗತಿ ಪರಿಶೀಲನೆ ಸಭೆಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರ ಉಪಸ್ಥಿತಿಯಲ್ಲಿ ಎಂ.ಜಿ. ರಸ್ತೆಯಲ್ಲಿರುವ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಮಾನ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ವಿ ಅವರು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವನ್ನು ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಪಾರದರ್ಶಕವಾಗಿ, ನಿಖರವಾಗಿ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಸಾರ್ವಜನಿಕರಿಗೆ ತೊಂದರೆ ಆಗದಂತೆ SIR ಕಾರ್ಯ ನಡೆಸಲು ಸೂಚನೆ
ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ, ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಹಾಗೂ ಯಾವುದೇ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಪಾರದರ್ಶಕತೆಯಿಂದ ನಿಗಧಿತ ಅವಧಿಯಲ್ಲಿ ಗುರಿ ತಲುಪಲು ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ತಂಡಗಳಾಗಿ ಕಾರ್ಯನಿರ್ವಹಿಸಿ ಎಸ್.ಐ.ಆರ್ ಕಾರ್ಯಕ್ಕೆ ವೇಗ ನೀಡಿ
ಎಸ್.ಐ.ಆರ್ ಕಾರ್ಯವನ್ನು ನಿಗದಿತ ಅವಧಿಯೊಳಗೆ ನಿಖರವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ತಂಡಗಳಾಗಿ ಕಾರ್ಯನಿರ್ವಹಿಸಬೇಕು. ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದರೆ ಕಾರ್ಯವನ್ನು ವೇಗವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಸೂಚಿಸಿದರು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಗೈರುಹಾಜರು (Absent), ಸ್ಥಳಾಂತರಗೊಂಡ (Shifted) ಹಾಗೂ ಮೃತ (Dead) ಮತದಾರರ ಗುರುತಿಸುವಿಕೆಯನ್ನು ಅತ್ಯಂತ ಜಾಗರೂಕತೆಯಿಂದ ಕೈಗೊಳ್ಳಬೇಕು. ಮೃತ ಮತದಾರರ ಪ್ರಕರಣಗಳಲ್ಲಿ ಮರಣ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಒಂದು ವೇಳೆ ಅದು ಲಭ್ಯವಿಲ್ಲದಿದ್ದರೆ, ನೆರೆಹೊರೆಯವರು ಅಥವಾ ಬಿ.ಎಲ್.ಎ.ಗಳ (BLA) ಸಹಿಯೊಂದಿಗೆ 'ಮಹಾಜರ್' ಸಿದ್ಧಪಡಿಸುವಂತೆ ತಿಳಿಸಿದ್ದಾರೆ.
BLOಗಳನ್ನು ಸಂಯಮದಿಂದ ನಡೆಸಿಕೊಳ್ಳಿ
ಬಿ.ಎಲ್.ಓ. ಗಳು ಎಸ್.ಐ.ಆರ್. ನ ಯಶಸ್ವಿಗೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೇಲಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳು ಬಿ.ಎಲ್.ಓ. ಗಳೊಂದಿಗೆ ಸಂಯಮದಿಂದ ನಡೆದುಕೊಂಡು ಅವರಿಂದ ಎಸ್.ಐ.ಆರ್. ಕಾರ್ಯದ ಯಶಸ್ವಿಗೊಳಿಸಲು ಸೂಚಿಸಿದರು. ಮನೆ ಮನೆ ತೆರಳಿ SIR ಅರ್ಜಿಗಳ ವಿತರಣೆ ಹಾಗೂ ಸಂಗ್ರಹಣೆಯೊಂದಿಗೆ SIR ಕಾರ್ಯದ ಯಶಸ್ವಿಗೆ ಶ್ರಮಿಸುತ್ತಿರುವ ಎಲ್ಲಾ ಬಿ.ಎಲ್.ಓ. ಗಳಿಗೆ ನೀಡಬೇಕಾದ ಬಾಕಿ ಸಂಭಾವನೆಯನ್ನು ಕೂಡಲೇ ಬಿಡುಗಡೆ ಮಾಡಲು ಅಪರ ಜಿಲ್ಲಾ ಚುನಾವಣಾಧಿಕಾರಿ (ಕೇಂದ್ರ) ವ್ಯಾಪ್ತಿಯ ಎಲ್ಲಾ ಮತದಾರರ ನೋಂದಣಾಧಿಕಾರಿಗಳಿಗೆ ಸೂಚ ನೀಡಿದರು.
ಸಹಿ ಇರುವ ಅರ್ಜಿಗಳನ್ನಷ್ಟೇ ಡಿಜಿಟೈಸ್ ಮಾಡಿ
ಮತದಾರರ ಅರ್ಜಿಗಳನ್ನು ಡಿಜಿಟೈಸ್ ಮಾಡುವ ಮೊದಲು ಅವುಗಳಲ್ಲಿ ಮತದಾರರ ಸಹಿ ಹಾಗೂ ಬಿ.ಎಲ್.ಓ ಗಳ ಸಹಿ ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು. ಸಹಿ ಇಲ್ಲದ ಯಾವುದೇ ಫಾರಂಗಳನ್ನು ಡಿಜಿಟೈಸ್ ಮಾಡಬಾರದು ಎಂದು ಕಟ್ಟುನಿಟ್ಟಾಗಿ ನಿರ್ದೇಶಿಸಿದರು ಅಂತಹ ಅರ್ಜಿಗಳನ್ನು ಮಾನ್ಯತೇ ಇಲ್ಲವೆಂದು ಪರಿಗಣಿಸಲಾಗುವುದು.
ಮನೆ-ಮನೆ ಭೇಟಿ ಸುಗಮಗೊಳಿಸಲು ಮತದಾರರನ್ನು ಮುಂಚಿತವಾಗಿ ದೂರವಾಣಿ ಮೂಲಕ ತಿಳಿಸಿ
ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತಾನಾಡಿದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್ ರವರು ಎಲ್ಲಾ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ, ಸಮನ್ವಯ ಮತ್ತು ಕಾರ್ಯಕ್ಷಮತೆಯಿಂದ ಕೆಲಸ ನಿರ್ವಹಿಸುವ ಮೂಲಕ ನಿಗದಿತ ಅವಧಿಯೊಳಗೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಹಾಗೂ ಮನೆ-ಮನೆ ಭೇಟಿ ನೀಡುವ ಮುನ್ನ ಸಂಬಂಧಿಸಿದ ಮತದಾರರಿಗೆ ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿ, ತಮ್ಮ ಭೇಟಿ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ತಿಳಿಸಿದರು. ಅಲ್ಲದೆ, ಗಣತಿ ನಮೂನೆಯನ್ನು (Enumeration Form) ಪೂರ್ಣವಾಗಿ ಭರ್ತಿ ಮಾಡಿ ಸಿದ್ಧವಾಗಿಟ್ಟುಕೊಳ್ಳುವಂತೆ ನಾಗರಿಕರಲ್ಲಿ ವಿನಂತಿಸುವುದರಿಂದ ಮನೆ ಭೇಟಿ ವೇಳೆ ಕಾರ್ಯವು ಸುಗಮವಾಗಿ ಹಾಗೂ ವೇಗವಾಗಿ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ.


Click it and Unblock the Notifications
