Silk Board Flyover: ಬೆಂಗಳೂರು ಸೌಂದರ್ಯಕ್ಕೆ ಮತ್ತೊಂದು ಹೆಜ್ಜೆ! ರೇಷ್ಮೆ ವಿನ್ಯಾಸದಲ್ಲಿ ಗೋಡೆಗಳ ಸೌಂದರ್ಯೀಕರಣ
ಬೆಂಗಳೂರು: ಜಿಬಿಎಗೆ ಸಂಬಂಧಿಸಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಹೊಸೂರು ಮಾರ್ಗದ ಕಡೆಯ ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಳಭಾಗದ ಪಾದಚಾರಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳ್ಳಂದೂರು ಫ್ಲೈಓವರ್ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಜೊತೆಗೆ ನಗರದ ಸೌಂದರ್ಯಿಕರಣಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಫ್ಲೈಓವರ್ ಪಿಲ್ಲರ್‌ಗಳಿಗೆ ಬಣ್ಣ ಬಳಿಯುವ ಮೂಲಕ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ಅವರು ಈ ಯೋಜನೆಗೆ ಚಾಲನೆ ನೀಡಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಮ್ಮಿಕೊಂಡಿರುವ "ಜಸ್ಟ್ ಕ್ಲೀನ್ ಬೆಂಗಳೂರು' ಅಭಿಯಾನದ ಭಾಗವಾಗಿ, 'ಇಂಡಿಯಾ ರೈಸಿಂಗ್ ಟ್ರಸ್ಟ್' ಎನ್‌ಜಿಒ ಸಹಯೋಗದೊಂದಿಗೆ ಸಿಜಿಐ ಕಂಪನಿಯ ಸಿಎಸ್ಆರ್ ಗೋಡೆ ಸೌಂದರ್ಯೀಕರಣ ಹಾಗೂ ವಾಲ್ ಪೇಂಟಿಂಗ್ ಅಭಿಯಾನ ಆರಂಭಿಸಲಾಗಿದೆ. ಇದರಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಜಿಐ ಸಂಸ್ಥೆ ನೌಕರರು ಸ್ವಯಂಸೇವಕರಾಗಿ ಪಾಲ್ಗೊಂಡು ವಾಲ್ ಪೇಂಟಿಂಗ್ ಕಾರ್ಯವನ್ನು ನೆರವೇರಿಸಿದ್ದಾರೆ.

ಸಿಲ್ಕ್ ಥೀಮ್‌ನಲ್ಲಿ ಗೋಡೆಗಳಿಗೆ ಆಕರ್ಷಕ ಚಿತ್ತಾರ
ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಪೂರಕವಾಗಿ ರೇಷ್ಮೆ ಸೀರೆಗಳ ಸಾಂಪ್ರದಾಯಿಕ ವಿನ್ಯಾಸಗಳಾದ ದೇವಸ್ಥಾನದ ಬಾರ್ಡರ್ (Temple Border), ಮಾವಿನಕಾಯಿ ಮೋಟಿಫ್ (Mango motif) ಹಾಗೂ ನವಿಲಿನ ಆಕರ್ಷಕ ಕಲಾಕೃತಿಗಳನ್ನು ಫ್ಲೈಓವರ್ ಗೋಡೆ ಮತ್ತು ಪಿಲ್ಲರ್‌ಗಳ ಮೇಲೆ ಬಿಡಿಸಿ ಬಣ್ಣ ಬಳಿಯುವ ಮೂಲಕ ಜಂಕ್ಷನ್ ಉತ್ತಮವಾಗಿ ಕಾಣುವಂತೆ ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.
ಶಾಸಕರ ಅನುದಾನದ ಭರವಸೆ: ರಾಮಲಿಂಗಾರೆಡ್ಡಿ
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರಾದ ರಾಮಲಿಂಗಾರೆಡ್ಡಿಯವರು, ನಗರದ ಸೌಂದರ್ಯೀಕರಣಕ್ಕೆ ಇಂತಹ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ (PPP) ಉಪಕ್ರಮಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದರು. ಸಿಲ್ಕ್ ಬೋರ್ಡ್ ಜಂಕ್ಷನ್ ಜತೆಗೆ ಡೈರಿ ಸರ್ಕಲ್ ಫ್ಲೈಓವರ್ ಕೆಳಭಾಗವನ್ನೂ ಸಹ ಇದೇ ಮಾದರಿಯಲ್ಲಿ ಸುಂದರೀಕರಣಗೊಳಿಸಲು ತಮ್ಮ ಶಾಸಕರ ಅನುದಾನದಿಂದ ಅಗತ್ಯ ಹಣಕಾಸಿನ ನೆರವು ನೀಡುವುದಾಗಿ ಭರವಸೆ ಕೊಟ್ಟರು.
ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆಯ ಫ್ಲೈಓವರ್‌ಗಳಾದ ಬೆಳ್ಳಂದೂರು, ಇಬ್ಲೂರು, ಆಗರ, ಹೆಚ್.ಎಸ್.ಆರ್ ಲೇಔಟ್ ಹಾಗೂ ಮಹದೇವಪುರ ಕೆಳಭಾಗದಲ್ಲೂ ಸಾರ್ವಜನಿಕ ಸ್ಥಳಗಳ ಪುನಶ್ಚೇತನ ಕಾರ್ಯವನ್ನು ಇಂಡಿಯಾ ರೈಸಿಂಗ್ ಟ್ರಸ್ಟ್ ಸಹಯೋಗದೊಂದಿಗೆ ಹಂತ-ಹಂತವಾಗಿ ವಿಸ್ತರಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಸ್ನೇಹಿ ಸೌಲಭ್ಯಗಳ ನಿರ್ಮಾಣ
ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಾತನಾಡಿ, ಕೇವಲ ಬಣ್ಣ ಬಳಿಯುವುದಷ್ಟೇ ಅಲ್ಲದೆ ಈ ವಿಶಾಲ ಸ್ಥಳವು ಸಾರ್ವಜನಿಕರಿಗೆ ಪೂರ್ಣ ಪ್ರಮಾಣದಲ್ಲಿ ಉಪಯುಕ್ತವಾಗುವಂತೆ ರೂಪಿಸಬೇಕು ಎಂದರು.
ಫ್ಲೈಓವರ್ ಮತ್ತೊಂದು ಬದಿಯ ಕೆಳಭಾಗದಲ್ಲಿ ವಾಹನ ಸವಾರರು ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದನ್ನು ತಪ್ಪಿಸಲು ವ್ಯವಸ್ಥಿತ ಪಾರ್ಕಿಂಗ್, ಆಟದ ಜಾಗ (Play area), ಪ್ರತ್ಯೇಕ ವೆಂಡಿಂಗ್ ಝೋನ್ ಹಾಗೂ ಸೂಕ್ತ ಬೆಳಕಿನ (Lighting) ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶಿಸಿದರು.
ಪ್ರಯಾಣಿಕರ ಅನುಕೂಲಕ್ಕೆ ಆಸನ ಹಾಗೂ ಸುಸಜ್ಜಿತ ಫುಟ್‌ಪಾತ್ ಅಭಿವೃದ್ಧಿ ಕಳೆದ ಎರಡು ದಿನಗಳ ಹಿಂದೆ ಭೇಟಿ ನೀಡಿದ ವೇಳೆ ಹೂಳಿಂದ ಕೂಡಿದ್ದ ಫ್ಲೈಓವರ್ ಕೆಳಭಾಗದ ಜಾಗ ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮಣ್ಣನ್ನು ಸಮತಟ್ಟು ಮಾಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಅದರಂತೆ ಅಧಿಕಾರಿಗಳು ಅತ್ಯಂತ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಿರುತ್ತಾರೆ. ಗೋಡೆ ಸುಂದರೀಕರಣದ ನಂತರ ಪಾಲಿಕೆ ವತಿಯಿಂದ ಈ ಸ್ಥಳವನ್ನು ಮುಂದಿನ ದಿನಗಳಲ್ಲಿ ಮುಂದಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಸುವ್ಯವಸ್ಥಿತ ಸ್ಥಳವನ್ನಾಗಿ ಮಾರ್ಪಡಿಸಲಾಗುವುದು ಎಂದು ತಿಳಿಸಿದರು.
ವಿಶ್ರಾಂತಿ ಆಸನಗಳ ವ್ಯವಸ್ಥೆ
ಸಿಲ್ಕ್ ಬೋರ್ಡ್ ಪ್ರಮುಖ ಜಂಕ್ಷನ್ ಆಗಿರುವುದರಿಂದ ಬಸ್ಸು ಮತ್ತು ಮೆಟ್ರೋಗಾಗಿ ಕಾಯುವ ಸಾವಿರಾರು ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಆಸನಗಳ (Seating) ವ್ಯವಸ್ಥೆ ಕಲ್ಪಿಸಲಾಗುತ್ತದೆ.ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ ಎನ್. ರಮೇಶ್ ಅವರು ಏಳಿದ್ದಾರೆ.
ಈ ವೇಳೆ ಬೊಮ್ಮನಹಳ್ಳಿ ವಲಯದ ಮುಖ್ಯ ಅಭಿಯಂತರರಾದ ಶ್ರೀಮತಿ ಮಾಲತಿ, ಸ್ವಚ್ಛ ಬೆಂಗಳೂರು-ಜಿಬಿಎ ರಾಯಭಾರಿ ಹಾಗೂ ಇಂಡಿಯಾ ರೈಸಿಂಗ್ ಟ್ರಸ್ಟ್‌ನ ಅರುಣ್ ಪೈ, ಇಂಡಿಯಾ ರೈಸಿಂಗ್ ಟ್ರಸ್ಟ್‌ನ ವಿನ್ಯಾಸಕಾರ ಅನಿರುದ್ಧ ಅಭ್ಯಂಕರ್ ಮತ್ತು ಪಾಲಿಕೆಯ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.


Click it and Unblock the Notifications
